ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶ: ಒತ್ತಡದಲ್ಲಿ ಭಾರತ

Last Updated 9 ಫೆಬ್ರುವರಿ 2021, 15:26 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಮಂಗಳವಾರ ಚೆಪಾಕ್‌ನಲ್ಲಿ ಭಾರತದ ಎದುರಿನ ಟೆಸ್ಟ್‌ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದಾಗಿ ನಾಲ್ಕನೇ ಸ್ಥಾನಕ್ಕೆ ಜಾರಿರುವ ಭಾರತ ಈಗ ತೀವ್ರ ಒತ್ತಡದಲ್ಲಿದೆ.

ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ವಿರಾಟ್ ಬಳಗವು ಕನಿಷ್ಠ ಎರಡರಲ್ಲಿ ಜಯಿಸಬೇಕು. 2–1 ಅಥವಾ 3–1ರಿಂದ ಸರಣಿ ಗೆದ್ದರೆ ಭಾರತಕ್ಕೆ ಫೈನಲ್ ಪ್ರವೇಶ ಸುಗಮವಾಗಲಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಒಂದು ಸೋತರೂ ಫೈನಲ್ ಕನಸು ನುಚ್ಚುನೂರಾಗುವ ಸಾಧ್ಯತೆಯೇ ಹೆಚ್ಚು.

ನ್ಯೂಜಿಲೆಂಡ್ ತಂಡವು ಈಗಾಗಲೇ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸಿದೆ. ಇನ್ನೊಂದು ತಂಡವು ಅರ್ಹತೆ ಗಿಟ್ಟಿಸಬೇಕಿದೆ. ನ್ಯೂಜಿಲೆಂಡ್ ಶೇ 70ರಷ್ಟು ಗೆಲುವಿನ ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಚೆಪಾಕ್‌ನಲ್ಲಿ ಭಾರತದ ಎದುರು ಗೆದ್ದ ನಂತರ ಇಂಗ್ಲೆಂಡ್ ತಂಡವು ಶೇ 70.2ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಜಿಗಿದಿದೆ. ಸರಣಿಯಲ್ಲಿ ಇಂಗ್ಲಂಡ್ 3–1, 3–0 ಅಥವಾ 4–0ಯಿಂದ ಜಯಿಸಿದರೆ ಫೈನಲ್‌ ಪ್ರವೇಶಿಸುವುದು ಖಚಿತ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಜಯ ದಾಖಲಿಸಿದ್ದ ಭಾರತ ತಂಡವು ಅಗ್ರಸ್ಥಾನಕ್ಕೆರಿತ್ತು. ಶೇ 68.3ರಷ್ಟು ಅಂಕ ಹೊಂದಿರುವ ಭಾರತ ತಂಡವು ಈಗ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಒಂದೊಮ್ಮೆ ಈ ಸರಣಿಯು ಡ್ರಾದಲ್ಲಿ ಅಂತ್ಯವಾದರೆ ಅಥವಾ ಇಂಗ್ಲೆಂಡ್ 1–0, 2–1, 2–0ಯಿಂದ ಗೆದ್ದರೆ ಆಸ್ಟ್ರೇಲಿಯಾ (ಶೇ 69.2) ತಂಡಕ್ಕೆ ಅವಕಾಶದ ಬಾಗಿಲು ತೆರೆಯಲಿದೆ.

ದಕ್ಷಿಣ ಆಫ್ರಿಕಾ ಎದುರು 2–0ಯಿಂದ ಸರಣಿ ಜಯಿಸಿದ್ದ ಪಾಕಿಸ್ತಾನವು ಶೇ 48.3 ರಿಂದ ಐದನೇ ಸ್ಥಾನಕ್ಕೇರಿದೆ. ಬಾಂಗ್ಲಾ ವಿರುದ್ಧ ಜಯಿಸಿದ ವೆಸ್ಟ್ ಇಂಡೀಸ್ ಏಳನೇ ಸ್ಥಾನ (23.8) ಪಡೆದಿದೆ.

ಡಬ್ಲ್ಯುಟಿಸಿ ಫೈನಲ್ ಪಂದ್ಯವು ಜೂನ್ 18ರಿಂದ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿದೆ.

ಐಸಿಸಿ ಮೇಲೆ ಕೊಹ್ಲಿ ಗರಂ

’ಡಬ್ಲ್ಯುಟಿಸಿ ಪಾಯಿಂಟ್ಸ್‌ ನಿಯಮವನ್ನು ಲಾಕ್‌ಡೌನ್‌ ನಲ್ಲಿ ದಿಢೀರ್ ಬದಲಾವಣೆ ಮಾಡಿದರೆ ಏನು ಮಾಡಬೇಕು. ಅದು ನಮ್ಮ –ನಿಮ್ಮ ನಿಯಂತ್ರಣದಲ್ಲಿ ಇಲ್ಲ‘ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ನಮ್ಮಲ್ಲಿ ಏನೂ ಬದಲಾವಣೆಯಾಗಿಲ್ಲ. ಆದರೆ ಲಾಕ್‌ಡೌನ್ ಕಾರಣದಿಂದ ನಿಯಮ ಬದಲಾಯಿಸಲಾಗಿದೆ. ಇದು ಯಾರ ನಿಯಂತ್ರಣದಲ್ಲಿಯೂ ಇಲ್ಲ. ಕ್ರೀಡಾಂಗಣದಲ್ಲಿರುವಾಗ ಹೇಗೆ ಆಡಬೇಕು ಎನ್ನುವುದು ಮಾತ್ರ ನಮ್ಮ ನಿಯಂತ್ರಣದಲ್ಲಿದೆ‘ ಎಂದು ಕೊಹ್ಲಿ ಹೇಳಿದರು.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಆಟದ ಆಚೆ ಯ ಯಾವುದೇ ವಿಷಯ ಅಥವಾ ಅಂಕಪಟ್ಟಿಯ ಕುರಿತು ನಾವು ಯೋಚನೆಯನ್ನೇ ಮಾಡಿಲ್ಲ. ಅದು ನಮ್ಮ ಕೈಗಳಲ್ಲಿ ಇಲ್ಲ. ಅದರ ಬಗ್ಗೆ ಹೆಚ್ಚು ವಿಚಾರ ಮಾಡುವುದರಲ್ಲಿ ಅರ್ಥವೂ ಇಲ್ಲ. ಗಂಟೆಗಟ್ಟಲೇ ಚರ್ಚೆ ಮಾಡಬಹುದು ಅಷ್ಟೇ. ಆದರೆ, ಒಳ್ಳೆಯ ಕ್ರಿಕೆಟ್ ಆಡುವುದು ನಮ್ಮ ಕೈಗಳಲ್ಲಿದೆ. ಅದನ್ನೇ ನಾವು ಯೋಚಿಸುತ್ತೇವೆ ಮತ್ತು ಮಾಡುತ್ತೇವೆ‘ ಎಂದರು.

’ಯಾವುದೇ ಪಾಯಿಂಟ್ ಪಟ್ಟಿಯನ್ನು ಮುಂದಿಟ್ಟುಕೊಂಡು ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ಸಾಧ್ಯತೆಗಳ ಲೆಕ್ಕಾಚಾರವನ್ನೂ ನಾವು ಮಾಡಿರಲಿಲ್ಲ. ಆದರೆ, ಈಗ ದಿಢೀರ್ ಎಂದು ಅವರು ಅಂಕಪಟ್ಟಿಯೇ ಅಗ್ರಸ್ಥಾನಕ್ಕೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಇವೆಲ್ಲವೂ ಬದಲಾವಣೆ ಆಗುತ್ತಲೇ ಇರುತ್ತವೆ. ಕಠಿಣ ಶ್ರಮ ಮತ್ತು ಶ್ರದ್ಧೆಯಿಂದ ಆಡುವತ್ತ ಮಾತ್ರ ನಮ್ಮ ಚಿತ್ತ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT