ಸೋಮವಾರ, ಸೆಪ್ಟೆಂಬರ್ 20, 2021
28 °C
ನವೆಂಬರ್ 14ರಂದು ಫೈನಲ್

ಟ್ವೆಂಟಿ–20 ವಿಶ್ವಕಪ್ ಟೂರ್ನಿ; ಮೊದಲ ಪಂದ್ಯದಲ್ಲಿ ಭಾರತ- ಪಾಕ್ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ  ಬದ್ಧ ಎದುರಾಳಿ ಪಾಕಿಸ್ತಾನದ ಎದುರಿನ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತವು ಸೂಪರ್ 12 ಹಂತದಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ ಮತ್ತು ಕ್ವಾಲಿಫೈಯರ್‌ನಲ್ಲಿ ಎ ಮತ್ತು ಬಿ ಗುಂಪಿನಿಂದ ಅರ್ಹತೆ ಗಳಿಸಿದ ತಂಡಗಳನ್ನು ಎದುರಿಸಲಿದೆ. ಅ.24ರಂದು ದುಬೈನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿವೆ.

ಪ್ರಾಥಮಿಕ ಸುತ್ತು (ಕ್ವಾಲಿಫೈಯರ್) ಅಕ್ಟೋಬರ್‌ 17ರಂದು ಒಮನ್‌ನಲ್ಲಿ ಆರಂಭವಾಗಲಿದೆ.  ಎ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮಿಬಿಯಾ, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿ ಮತ್ತು ಒಮನ್ ತಂಡಗಳು ಸ್ಪರ್ಧಿಸಲಿವೆ.

ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೂಪರ್ 12ರ ಹಂತಕ್ಕೆ ಪ್ರವೇಶಿಸಲಿವೆ. ಈ ಹಂತದ ಮೊದಲ ಪಂದ್ಯವು ಅ.23ರಂದು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯುವ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ ನಡೆಯುವ  ಎರಡನೇ ಪಂದ್ಯದಲ್ಲಿ ದುಬೈನಲ್ಲಿ ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿವೆ.

ನವೆಂಬರ್ 10 ಮತ್ತು 11ರಂದು ಸೆಮಿಫೈನಲ್ ಪಂದ್ಯಗಳು ಆಯೋಜನೆಗೊಂಡಿವೆ. 14ರಂದು ಫೈನಲ್ ನಡೆಯಲಿದ್ದು, ನ.15 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. 

ಈ ಟೂರ್ನಿಗೆ ಭಾರತವು ಆತಿಥ್ಯ ವಹಿಸುತ್ತಿದೆ. ಕೋವಿಡ್ ಕಾರಣದಿಂದಾಗಿ ತಟಸ್ಥ ಸ್ಥಳವಾದ ಯುಎಇ ಮತ್ತು ಒಮನ್‌ನಲ್ಲಿ ಆಯೋಜಿಸಲಾಗುತ್ತಿದೆ. ಅಕ್ಟೋಬರ್  ವೇಳೆಗೆ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇರುವುದರಿಂದ ಟೂರ್ನಿಯನ್ನು ಸ್ಥಳಾಂತರಿಸಲಾಗಿದೆ.

‘ಯುಎಇ ನಮಗೆ ತವರಿದ್ದಂತೆ. ಇನ್ನೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವ ವಿಶ್ವಾಸ ಮತ್ತು ಸಾಮರ್ಥ್ಯ ನಮ್ಮ ತಂಡಕ್ಕೆ ಇದೆ’ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಹೇಳಿದ್ದಾರೆ.

2016ರಲ್ಲಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡದ ಕೀರನ್ ಪೊಲಾರ್ಡ್ ‘ಸೂಪರ್ 12ರ ಹಂತದಲ್ಲಿ ಉತ್ತಮ ಪೈಪೋಟಿ ನಮಗೆ ಇದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸವಾಲು ಎದುರಿಸಲು ನಾವು ಕಾತುರರಾಗಿದ್ದೇವೆ‘ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು