ಲೀಡ್ಸ್: ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾನುವಾರ ತಂಪುಗಾಳಿ ಸುಳಿದಾಡುತ್ತಲೇ ಇತ್ತು. ಅದರಲ್ಲಿಯೇ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಒಂದು ರೀತಿಯಲ್ಲಿ ‘ಸಮಬಲ’ದ ಹೋರಾಟವನ್ನೇ ಪ್ರದರ್ಶಿಸಿದರು. ತಪ್ಪುಗಳನ್ನು ಎಸಗುವುದರಲ್ಲಿಯೂ ಕೂಡ!

ಹೌದು; ಭಾರತದ ಫೀಲ್ಡರ್ಗಳು ಕ್ಯಾಚ್ಗಳನ್ನು ನೆಲಕ್ಕೆ ಚೆಲ್ಲಿದರು. ಬೌಲರ್ಗಳು ಶಾರ್ಟ್ ಪಿಚ್ ಎಸೆತಗಳನ್ನು ಪ್ರಯೋಗಿಸುವಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇಂಗ್ಲೆಂಡ್ ಬ್ಯಾಟರ್ಗಳು ತಕ್ಕಮಟ್ಟಿಗೆ ಇದರ ಲಾಭ ಪಡೆದರು. ಆದರೆ ಅವರೂ ಶಾಲೆಯ ಮಕ್ಕಳ ರೀತಿಯಲ್ಲಿ ಕೆಲವು ಅಚಾತುರ್ಯ ಗಳನ್ನು ಮಾಡಿಕೊಂಡು ವಿಕೆಟ್ ಚೆಲ್ಲಿದರು. ಅದರಿಂದಾಗಿ ದೊಡ್ಡ ಮುನ್ನಡೆ ಸಾಧಿಸುವ ಅವಕಾಶ ಉಭಯ ತಂಡಗಳ ಕೈತಪ್ಪಿತು. ಇದೆಲ್ಲದರ ನಡುವೆ ವೇಗಿ ಜಸ್ಪ್ರೀತ್ ಬೂಮ್ರಾ ಐದು ವಿಕೆಟ್ ಗೊಂಚಲು ಗಳಿಸುವ ಮೂಲಕ ಭಾರತ ತಂಡಕ್ಕೆ 6 ರನ್ಗಳ ಅತ್ಯಲ್ಪ ಮುನ್ನಡೆ ಕೊಡಿಸಿದರು.

ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ ಗಳಿಸಿದ್ದ 471 ರನ್ಗಳಿಗೆ ಉತ್ತರವಾಗಿ ಆತಿಥೇಯರು 100.4 ಓವರ್ಗಳಲ್ಲಿ 465 ರನ್ ಗಳಿಸಿದರು. ಒಂದು ರನ್ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡ ಹ್ಯಾರಿ ಬ್ರೂಕ್ (99 ರನ್), ಜೆಮಿ ಸ್ಮಿತ್ (40 ರನ್) ಮತ್ತು ಕ್ರಿಸ್ ವೋಕ್ಸ್ (38 ರನ್) ಅವರು ಇಂಗ್ಲೆಂಡ್ ತಂಡವು ದೊಡ್ಡ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಮಳೆ ಬಂದು ಆಟ ಸ್ಥಗಿತವಾಗುವ ಮುನ್ನ 23.5 ಓವರ್ಗಳಲ್ಲಿ 2 ವಿಕೆಟ್ಗಳಿಗೆ 90 ರನ್ ಗಳಿಸಿತು.

ಕೆ.ಎಲ್. ರಾಹುಲ್ (ಬ್ಯಾಟಿಂಗ್ 47) ಮತ್ತು ನಾಯಕ ಶುಭಮನ್ ಗಿಲ್ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಶತಕ ಹೊಡೆದಿದ್ದ ಯಶಸ್ವಿ ಜೈಸ್ವಾಲ್ 4 ರನ್ ಮಾತ್ರ ಗಳಿಸಿದರು ಮತ್ತು ಪದಾರ್ಪಣೆ ಪಂದ್ಯ ಆಡುತ್ತಿರುವ ಸಾಯಿ ಸುದರ್ಶನ್ 30 ರನ್ ಗಳಿಸಿದರು.

ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ಗಳಿಗೆ 209 ರನ್ ಗಳಿಸಿತ್ತು. ಶತಕ ಗಳಿಸಿದ್ದ ಒಲಿ ಪೋಪ್ ಕ್ರೀಸ್ನಲ್ಲಿದ್ದರು. ಮೂರನೇ ದಿನ ಬೆಳಿಗ್ಗೆ ಭಾರತ ತಂಡವೇ ಉತ್ತಮ ಆರಂಭ ಮಾಡಿತು. ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧಕೃಷ್ಣ ಅವರು ದಿನದಾಟದ ಮೂರನೇ ಓವರ್ನಲ್ಲಿಯೇ ಪೋಪ್ (106 ರನ್) ವಿಕೆಟ್ ಕಬಳಿಸಿದರು. ರಿಷಭ್ ಪಂತ್ ಪಡೆದ ಕ್ಯಾಚ್ಗೆ ಪೋಪ್ ನಿರ್ಗಮಿಸಿದರು. ಇದಕ್ಕೂ ಮುನ್ನ ಪ್ರಸಿದ್ಧ ಅವರು ತುಸು ದುಬಾರಿಯೂ ಆದರು. ಬ್ರೂಕ್ ಅವರು ಪ್ರಸಿದ್ಧಗೆ ಒಂದು ಬೌಂಡರಿ ಮತ್ತು ಸಿಕ್ಸರ್ ಹೊಡೆದಿದ್ದರು.

ಪೋಪ್ ವಿಕೆಟ್ ಬಿದ್ದ ನಂತರ ಹೊಸ ಬ್ಯಾಟರ್ಗಳನ್ನು ತಡೆಯುವ ಪ್ರಯತ್ನ ಸಾಕಾಗಲಿಲ್ಲ. ಅದರಲ್ಲೂ ಬ್ರೂಕ್ ಅವರು ಬೌಲರ್ಗಳನ್ನು ದಂಡಿಸಿದರು. ಅವರೊಂದಿಗೆ ಸ್ಮಿತ್ ಕೂಡ ಇದ್ದರು. ಪ್ರಸಿದ್ಧ ಎಷ್ಟೇ ದಂಡನೆಗೊಳಗಾದರೂ ಶಾರ್ಟ್ ಎಸೆತಗಳನ್ನು ಹಾಕುವಲ್ಲಿ ಹಿಂಜರಿಯಲಿಲ್ಲ. ಅವರ ಅಂತಹದ್ದೇ ಒಂದು ಎಸೆತವನ್ನು ಹುಕ್ ಮಾಡಿದ ಬ್ರೂಕ್ ಶಾರ್ದೂಲ್ ಠಾಕೂರ್ಗೆ ಸುಲಭ ಕ್ಯಾಚ್ ಆದರು. ಕೇವಲ ಒಂದು ರನ್ ಅಂತರದಿಂದ ಶತಕವಂಚಿತರಾದರು. ಸ್ವಲ್ಪ ಹೊತ್ತಿನ ನಂತರ ಜೆಮಿ ಸ್ಮಿತ್ ವಿಕೆಟ್ ಕೂಡ ಪ್ರಸಿದ್ಧ ಪಾಲಾಯಿತು. ಆದರೂ ಬೆಂಗಳೂರಿನ ಬೌಲರ್ 20 ಓವರ್ಗಳಲ್ಲಿ 128 ರನ್ ಬಿಟ್ಟುಕೊಟ್ಟರು.

ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಶನಿವಾರವೂ ಕೆಲವು ಕ್ಯಾಚ್ ಕೈಬಿಟ್ಟಿದ್ದ ಫೀಲ್ಡರ್ಗಳು ಮೂರನೇ ದಿನವೂ ಎರಡು ಕ್ಯಾಚ್ ಕೈಚೆಲ್ಲಿದರು.

ಈ ಎಲ್ಲ ಅಡೆತಡೆಗಳ ನಡುವೆಯೂ ಬೂಮ್ರಾ ಬೌಲಿಂಗ್ ಮಾತ್ರ ಮೊನಚಾಗಿಯೇ ಇತ್ತು. ಒಟ್ಟು ಐದು ವಿಕೆಟ್ಗಳ ಗೊಂಚಲನ್ನು ತಮ್ಮದಾಗಿಸಿ ಕೊಂಡರು. ಕೊನೆಯಲ್ಲಿ ಬೀಸಾಟವಾಡು ತ್ತಿದ್ದ ವೋಕ್ಸ್ ಅವರಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಸಫಲರಾದರು. ಚಹಾ ವಿರಾಮದ ಹೊತ್ತಿಗೆ ಇಂಗ್ಲೆಂಡ್ ಇನಿಂಗ್ಸ್ಗೆ ತೆರೆಬಿತ್ತು. ಆದರೆ ದೊಡ್ಡ ಮುನ್ನಡೆ ಸಾಧಿಸುವ ಭಾರತದ ಕನಸು ಕೈಗೂಡಲಿಲ್ಲ. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.