ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS 4th Test | ಉಸ್ಮಾನ್ ಶತಕ: ಆಸ್ಟ್ರೇಲಿಯಾ ಉತ್ತಮ ಮೊತ್ತ

ಅಹಮದಾಬಾದ್ ಟೆಸ್ಟ್: ಮೊಹಮ್ಮದ್ ಶಮಿಗೆ ಎರಡು ವಿಕೆಟ್; ಕ್ಯಾಮರೂನ್ ಗ್ರೀನ್ ಮಿಂಚಿನ ಬ್ಯಾಟಿಂಗ್
Last Updated 9 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಅಹಮದಾಬಾದ್: ಸುಂದರ ಶತಕ ಬಾರಿಸಿದ ಉಸ್ಮಾನ್ ಖ್ವಾಜಾ ಅವರ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಗುರುವಾರ ಭಾರತ ತಂಡದ ಎದುರು ಆರಂಭವಾದ ನಾಲ್ಕನೇ ಟೆಸ್ಟ್‌ನ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿತು.

ಬಾರ್ಡರ್‌–ಗಾವಸ್ಕರ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿಯೂ ಸ್ಪಿನ್ನರ್‌ಗಳು ಪಾರಮ್ಯ ಮೆರೆದಿದ್ದರು. ಆದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ಬ್ಯಾಟರ್‌ಗಳ ಆಟ ರಂಗೇರಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 14ನೇ ಶತಕ ದಾಖಲಿಸಿದ ಉಸ್ಮಾನ್ (ಅಜೇಯ 104; 251ಎ, 4X15) ಅವರ ಬಲದಿಂದ ತಂಡವು ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 255 ರನ್ ಗಳಿಸಿತು. ಉಸ್ಮಾನ್ ಮತ್ತು ಮಿಂಚಿನ ಬ್ಯಾಟಿಂಗ್ ಮಾಡಿದ ಕ್ಯಾಮರಾನ್ ಗ್ರೀನ್ (ಬ್ಯಾಟಿಂಗ್ 49; 64ಎ, 4X8) ಕ್ರೀಸ್‌ನಲ್ಲಿದ್ದಾರೆ.

ಪಂದ್ಯದ ಮೊದಲ ದಿನ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ಸಿಗುವುದಿಲ್ಲ. ಸಪಾಟಾಗಿರುತ್ತದೆ ಎಂದು ಬುಧವಾರವೇ ಹೇಳಿಕೆ ನೀಡಿದ್ದ ಪ್ರವಾಸಿ ಬಳಗದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ಯೋಜನೆ ಕೈಗೂಡಿತು.

ಉಮೇಶ್ ಯಾದವ್ ಹಾಕಿದ ಆರನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಬ್ಯಾಟ್ ಅಂಚಿಗೆ ಬಡಿದು ಚಿಮ್ಮಿದ್ದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಕೆಟ್‌ಕೀಪರ್ ಶ್ರೀಕರ್ ಭರತ್ ವಿಫಲರಾದರು. ಇದಾಗಿ ಹತ್ತು ಓವರ್‌ಗಳ ನಂತರ ಅಶ್ವಿನ್ ಬೌಲಿಂಗ್‌ನಲ್ಲಿ ಜಡೇಜ ಪಡೆದ ಕ್ಯಾಚ್‌ಗೆ ಹೆಡ್ ಔಟಾದರು. ಆದರೆ ಹೆಡ್ ಅವರು, ಉಸ್ಮಾನ್ ಜೊತೆಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು.

ಮಾರ್ನಸ್ ಲಾಬುಷೇನ್(3) ಅವ ರನ್ನು ಬೇಗನೆ ಕ್ಲೀನ್‌ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದ ಮೊಹಮ್ಮದ್ ಶಮಿ ಭಾರತದ ಬಳಗದಲ್ಲಿ ಹೊಸ ಆಸೆ ಚಿಗುರಿಸಿದರು.

ಆದರೆ ಒಂದೆಡೆ ಗಟ್ಟಿಯಾಗಿ ನಿಂತಿದ್ದ ಉಸ್ಮಾನ್ ತಾಳ್ಮೆ ಹಾಗೂ ಏಕಾಗ್ರತೆಗೆ ಭಂಗ ತರಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಚೆಂದದ ಕವರ್‌ ಡ್ರೈವ್, ಆನ್‌ ಡ್ರೈವ್ ಮತ್ತು ಫ್ಲಿಕ್‌ಗಳ ಮೂಲಕ ರನ್‌ಗಳನ್ನು ಸೇರಿಸಿದರು. ಪಾಕಿಸ್ತಾನದಲ್ಲಿ ಜನಿಸಿ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉಸ್ಮಾನ್ ಸ್ಪಿನ್ ಮತ್ತು ವೇಗಿಗಳ ಎಸೆತಗಳನ್ನು ಸಮಚಿತ್ತದಿಂದ ಎದುರಿಸಿದರು.

ಉಸ್ಮಾನ್ ಜೊತೆಗೂಡಿದ ಸ್ಮಿತ್ ಕೂಡ ಇನಿಂಗ್ಸ್‌ಗೆ ಬಲ ತುಂಬಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿದರು. ಮಧ್ಯಾಹ್ನದ ಆಟದಲ್ಲಿ ಜಡೇಜ ಬೌಲಿಂಗ್‌ನಲ್ಲಿ ಸ್ಮಿತ್ ವಿಕೆಟ್ ಎಗರಿತು. ಪೀಟರ್ ಹ್ಯಾಂಡ್ಸ್‌ ಕಂಬ್ (17) ಶಮಿ ಬೌಲಿಂಗ್‌ನಲ್ಲಿ ಔಟಾದರು.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಗ್ರೀನ್ ಮಾತ್ರ ಇನಿಂಗ್ಸ್ ಚಿತ್ರಣವನ್ನೇ ಬದಲಿಸಿದರು. ಉಸ್ಮಾನ್ ಹೆಚ್ಚು ಶ್ರಮಪಡದೆ ನಾನ್‌ಸ್ಟ್ರೈಕರ್ ಆಗಿಯೇ ಹೆಚ್ಚು ಉಳಿದರು. ಗ್ರೀನ್ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಪಟಪಟನೆ ರನ್‌ ಗಳಿಸಿ, ತಂಡದ ಮೊತ್ತವು ಹೆಚ್ಚುವಂತೆ ಮಾಡಿದರು. ಕೊನೆಯ ಓವರ್‌ನಲ್ಲಿ ಉಸ್ಮಾನ್ ಶತಕದ ಗಡಿ ದಾಟಿ ಸಂಭ್ರಮಿಸಿದರು.

ಪಂದ್ಯ ವೀಕ್ಷಿಸಿದ ಮೋದಿ: ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬೆನೀಸ್‌ ಅವರು ಗುರುವಾರ ಸುಮಾರು ಅರ್ಧಗಂಟೆ ಆಟ ವೀಕ್ಷಿಸಿದರು. ದಿನದಾಟಕ್ಕೂ ಮುನ್ನ ತೆರೆದ ವಾಹನದಲ್ಲಿ ಅಂಗಳದಲ್ಲಿ ತೆರಳಿ ಪ್ರೇಕ್ಷಕರತ್ತ ಕೈಬೀಸಿದರು.

ಉಸ್ಮಾನ್ ನಗುವಿನ ಹಿಂದಿನ ನೋವು!
‘ನಾನು ಶತಕ ಬಾರಿಸಿದ ಮೇಲೆ ಬಹಳಷ್ಟು ಖುಷಿಪಟ್ಟದ್ದು ಇದೇ ಮೊದಲ ಸಲ. ಇವತ್ತು ನನ್ನ ನಗುವಿನ ಹಿಂದೆ ಸಾರ್ಥಕತೆ ಇತ್ತು. ಭಾರತದ ನೆಲದ ಮೇಲೆ ಶತಕ ಗಳಿಸುವುದು ಸುಲಭವಲ್ಲ. ಈ ಹಿಂದೆ ಎರಡು ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದೆ. ಆದರೆ ಎಂಟು ಪಂದ್ಯಗಳಲ್ಲಿ ಎಕ್ಸಟ್ರಾ ಆಟಗಾರನಾಗಿ ಡ್ರಿಂಕ್ಸ್‌ ಪೂರೈಸಿದ್ದೆ’ ಎಂದು ಉಸ್ಮಾನ್ ಖ್ವಾಜಾ ಭಾವುಕರಾದರು.

2013 ಹಾಗೂ 2017ರಲ್ಲಿ ಭಾರತ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಉಸ್ಮಾನ್ ಇದ್ದರು.

‘ನಾನು ಸ್ಪಿನ್ ಬೌಲಿಂಗ್ ಎದುರು ಆಡಲು ಸಾಧ್ಯವಿಲ್ಲವೆಂದೇ ವೃತ್ತಿಜೀವನದ ಬಹುತೇಕ ಸಂದರ್ಭಗಳಲ್ಲಿ ಟೀಕೆಗಳನ್ನು ಕೇಳಿದ್ದೇನೆ. ಸ್ಪಿನ್ ಆಡಲು ಅಸಮರ್ಥ ಎಂಬ ಕಾರಣಕ್ಕೆ ಕಳೆದ ಸರಣಿಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇವತ್ತು ಲಭಿಸಿದ ಅವಕಾಶದಲ್ಲಿ ಶತಕ ಗಳಿಸಿದೆ. ಇಲ್ಲಿಯವರೆಗೆ ಅನುಭವಿಸಿದ ನೋವು, ಹತಾಶೆಗಳು ಬಹಳಷ್ಟಿವೆ’ ಎಂದು 36 ವರ್ಷದ ಖ್ವಾಜಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT