ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್; ಗ್ರೀನ್, ಡೇವಿಡ್ ಅಬ್ಬರದಾಟ

ಭಾರತ ತಂಡಕ್ಕೆ ಕಠಿಣ ಸವಾಲೊಡ್ಡಿದ ಆಸ್ಟ್ರೇಲಿಯಾ; ಅಕ್ಷರ್‌ ಪಟೇಲ್ ಸ್ಪಿನ್ ಮೋಡಿ
Last Updated 25 ಸೆಪ್ಟೆಂಬರ್ 2022, 16:33 IST
ಅಕ್ಷರ ಗಾತ್ರ

ಹೈದರಾಬಾದ್(ಪಿಟಿಐ): ಇನಿಂಗ್ಸ್‌ನ ಆರಂಭದಲ್ಲಿ ಕ್ಯಾಮರಾನ್ ಗ್ರೀನ್ ಹಾಗೂ ಕೊನೆಯಲ್ಲಿ ಟಿಮ್ ಡೇವಿಡ್ ಅಬ್ಬರದ ಅರ್ಧಶತಕಗಳು ಸದ್ದು ಮಾಡಿದವು. ಇವೆರಡರ ಮಧ್ಯೆ ಅಕ್ಷರ್ ಪಟೇಲ್ ಸ್ಪಿನ್ ಕೈಚಳಕವು ಗಮನ ಸೆಳೆಯಿತು.

ಆದರೆ ಗ್ರೀನ್ (52; 21ಎ, 4X7, 6X3) ಹಾಗೂ ಟಿಮ್ (54; 27ಎ, 4X3) ಅವರ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು ಭಾನುವಾರ ಇಲ್ಲಿ ನಡೆದ ಟಿ20 ಪಂದ್ಯದಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್ ಗಳಿಸಿತು.

ಭುವನೇಶ್ವರ್ ಕುಮಾರ್ ಹಾಕಿದ ಮೊದಲ ಓವರ್‌ನಲ್ಲಿಯೇ ಒಂದು ಸಿಕ್ಸರ್ ಹಾಗೂ ಬೌಂಡರಿ ಇದ್ದ 12 ರನ್‌ಗಳನ್ನು ಗಳಿಸಿದ ಗ್ರೀನ್ ಮಿಂಚಿದರು. ಅಕ್ಷರ್ ಪಟೇಲ್ ಹಾಕಿದ ಎರಡನೇ ಓವರ್‌ನಲ್ಲಿಯೂ 11 ರನ್‌ಗಳನ್ನು ಗಳಿಸಿದರು. ಆದರೆ ಬೂಮ್ರಾ ಹಾಕಿ ಮೂರನೇ ಓವರ್‌ ದುಬಾರಿಯಾಯಿತು. ಎರಡು ಸಿಕ್ಸರ್, ಒಂದು ಬೌಂಡರಿ ಹೊಡೆದ ಗ್ರೀನ್ ಅಬ್ಬರಿಸಿದರು. ನಂತರದ ಓವರ್‌ನಲ್ಲಿ ಪಟೇಲ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಪಡೆದ ಕ್ಯಾಚ್‌ಗೆ ಆ್ಯರನ್ ಫಿಂಚ್ ಔಟಾದರು. ಆದರೆ ಗ್ರೀನ್ ಆಟಕ್ಕೆ ತಡೆ ಇರಲಿಲ್ಲ.

ಇದರಿಂದಾಗಿ ಮೊದಲ ಐದು ಓವರ್‌ಗಳಲ್ಲಿಯೇ 62 ರನ್‌ಗಳು ತಂಡದ ಖಾತೆ ಸೇರಿದವು. ಇನ್ನೊಂದು ಬದಿಯಲ್ಲಿ ಸ್ಟೀವನ್ ಸ್ಮಿತ್ ಹಾಗೂ ಮ್ಯಾಕ್ಸ್‌ವೆಲ್ ಬೇಗನೆ ಔಟಾದರು. ಜೋಶ್ ಇಂಗ್ಲಿಸ್ (24 ರನ್) ಸ್ವಲ್ಪಮಟ್ಟಿಗೆ ಹೋರಾಟ ತೋರಿದರು. ಆದರೆ ಅವರ ಆಟದಲ್ಲಿ ಬಿರುಸು ಇರಲಿಲ್ಲ. ಇದರಿಂದಾಗಿ ರನ್‌ ಗಳಿಕೆಯ ವೇಗ ಸ್ವಲ್ಪ ಕುಂಠಿತವಾಯಿತು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಟಿಮ್ ಡೇವಿಡ್ ಇನಿಂಗ್ಸ್‌ನ ದಿಕ್ಕನ್ನೇ ಬದಲಿಸಿಬಿಟ್ಟರು.ಡೇವಿಡ್ ಅವರಿಗೆ ಡೇನಿಲ್ ಸ್ಯಾಮ್ಸ್ (ಔಟಾಗದೆ 28) ಉತ್ತಮ ಜೊತೆ ನೀಡಿದರು. ಇವರಿಬ್ಬರ ಜೊತೆಯಾಟದಲ್ಲಿ 68 ರನ್‌ಗಳು ಸೇರಿದವು.

ಅವರ ಬೀಸಾಟದಿಂದಾಗಿ ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ 63 ರನ್‌ಗಳು ಸೇರಿದವು. ಇದರಿಂದಾಗಿ ತಂಡವು ಸವಾಲಿನ ಮೊತ್ತ ಸೇರಿಸಲು ಸಾಧ್ಯವಾಯಿತು.

ಮ್ಯಾಕ್ಸ್‌ವೆಲ್‌ಗೆ ಕೈಕೊಟ್ಟ ಬೇಲ್ಸ್!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಿಗೆ ಅದೃಷ್ಟ ಜೊತೆಗಿರಲಿಲ್ಲ. ಅದರಿಂದಾಗಿ ಅವರು ವಿಚಿತ್ರ ರೀತಿಯಲ್ಲಿ ರನ್‌ಔಟ್‌ ಆಗಬೇಕಾಯಿತು.

ಎಂಟನೇ ಓವರ್‌ನಲ್ಲಿ ಚಾಹಲ್ ಎಸೆತವನ್ನು ಡೀಪ್ ಸ್ಕ್ವೇರ್‌ಲೆಗ್‌ನತ್ತ ಹೊಡೆದು ಒಂದು ರನ್ ಗಳಿಸಿದರು. ಎರಡನೇ ರನ್‌ಗೆ ಮರಳಿದರು. ಈ ಸಂದರ್ಭದಲ್ಲಿ ಫೀಲ್ಡರ್ ಅಕ್ಷರ್ ಪಟೇಲ್ ಥ್ರೋ ಮಾಡಿದ ಚೆಂಡು ಕಲೆಕ್ಟ್ ಮಾಡುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ದಿನೇಶ್ ಕೈಗವಸು ಸ್ಟಂಪ್‌ಗೆ ಬಡಿದಿತ್ತು. ಆದರೆ ಬೇಲ್ಸ್‌ ಉದುರಲಿಲ್ಲ. ಆದರೆ ಅಕ್ಷರ್ ಮಾಡಿದ ನಿಖರ ಥ್ರೋ ಸ್ಟಂಪ್‌ಗೆ ಅಪ್ಪಳಿಸಿ ಬೇಲ್ಸ್‌ ಉದುರಿದವು. ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಗಿದ್ದು ಮೂರನೇ ಅಂಪೈರ್ ಪರಿಶೀಲನೆಯಲ್ಲಿ ಗೋಚರಿಸಿತು.

ಮ್ಯಾಕ್ಸ್‌ವೆಲ್ ತಮ್ಮ ದುರದೃಷ್ಟಕ್ಕೆ ಬೇಸರಗೊಂಡು ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT