ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs IND: ಆಸ್ಟ್ರೇಲಿಯಾ ಎದುರು ಭಾರತಕ್ಕೆ 13 ರನ್‌ಗಳ ರೋಚಕ ಜಯ

Last Updated 2 ಡಿಸೆಂಬರ್ 2020, 15:12 IST
ಅಕ್ಷರ ಗಾತ್ರ

ಕ್ಯಾನಬೆರ‍್ರಾ: ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಗೆಲುವು ಸಾಧಿಸಿತು.

ಪಂದ್ಯದ ಕೊನೆಯ ಓವರ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಆ್ಯಡಮ್‌ ಜಂಪಾ ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ಅಬ್ಬರಿಸುತ್ತಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿಕೆಟ್‌ ತೆಗೆದ ಬೂಮ್ರಾ ಪಂದ್ಯವನ್ನು ಟೀಂ ಇಂಡಿಯಾ ಕಡೆಗೆ ತಿರುಗಿಸಿದರು. ಅವರು 43 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 289 ರನ್‌ ಗಳಿಸಿತು. ನಾಯಕ ಆ್ಯರನ್‌ ಫಿಂಚ್ 75 (82), ಗ್ಲೆನ್‌ ಮ್ಯಾಕ್ಸ್‌ವೆಲ್‌ 59 (38) ಭರ್ಜರಿ ಆಟ ಪ್ರದರ್ಶಿಸಿದರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.

ಈ ಪಂದ್ಯದಲ್ಲಿ ಸ್ಥಾನ ಪಡೆದು ಆಡಿದ ಶಾರ್ದುಲ್ ಠಾಕೂರ್ ಮತ್ತು ನಟರಾಜನ್ ಬೌಲಿಂಗ್‌ನಲ್ಲಿ ಮಿಂಚಿದರು. ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ ನಟರಾಜನ್‌ 10 ಓವರ್‌ಗಳಲ್ಲಿ 70 ರನ್‌ ನೀಡಿ 2 ವಿಕೆಟ್‌ ಪಡೆದರು. ಶಾರ್ದುಲ್‌ ಠಾಕೂರ್‌ 3 ವಿಕೆಟ್‌ (51 ರನ್‌) ಕಬಳಿಸುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭಿಕ ಜತೆಯಾಟ ದೊರೆಯಲಿಲ್ಲ. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಜೋಡಿ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾಯಿತು. ಪಾಂಡ್ಯ 76 ಎಸೆತಗಳಲ್ಲಿ 92 ರನ್ ಹಾಗೂ ಜಡೇಜ 50 ಎಸೆತಗಳಲ್ಲಿ 66 ರನ್‌ ಗಳಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಈ ಜೋಡಿ 59 ರನ್‌ ಪೇರಿಸಿತು. ಇದರಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ 303 ರನ್‌ಗಳ ಸವಾಲಿನ ಗುರಿ ನೀಡಿತು.

ತಂಡದ ಮೊತ್ತ 26 ಆಗಿರುವಾಗ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (16 ರನ್, 27 ಎಸೆತ) ಶಾನ್ ಅಬಾಟ್ ಬೌಲಿಂಗ್‌ನಲ್ಲಿ ಆ್ಯಷ್ಟನ್ ಆಗರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು. ಈ ಪಂದ್ಯದಲ್ಲಿ ಆರಂಭಿಕನಾಗಿ ಕ್ರೀಸ್‌ಗಿಳಿದ ಶುಭಮನ್ ಗಿಲ್‌ಗೂ ದೊಡ್ಡ ಮೊತ್ತ ಪೇರಿಸುವುದು ಸಾಧ್ಯವಾಗಲಿಲ್ಲ. ಅವರು 33 ರನ್‌ (39 ಎಸೆತ) ಗಳಿಸಿ ಅಗರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ನಾಯಕ ವಿರಾಟ್‌ ಕೊಹ್ಲಿ ಉತ್ತಮ ಆಟದೊಂದಿಗೆ (63 ರನ್, 78 ಎಸೆತ) ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಸುಳಿವು ನೀಡಿದರು. ತಂಡದ ಮೊತ್ತ 152 ಆಗಿದ್ದಾಗ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್, ಶಾನ್ ಅಬಾಟ್ ಹಾಗೂ ಆ್ಯಡಂ ಜಂಪಾ ತಲಾ 1 ವಿಕೆಟ್ ಪಡೆದರು. ಆ್ಯಷ್ಟನ್ ಆಗರ್ 10 ಓವರ್‌ಗಳಲ್ಲಿ 44 ರನ್‌ ನೀಡಿ 2 ವಿಕೆಟ್ ಪಡೆದರು.

ಕೊಹ್ಲಿ ಅತಿವೇಗದ 12,000 ರನ್: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದರು. ಕೇವಲ 242 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು 2003ರಲ್ಲಿ ತಮ್ಮ 300ನೇ ಇನ್ನಿಂಗ್ಸ್‌ನಲ್ಲಿ 12,000 ರನ್ ಗಡಿ ದಾಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT