ಗುರುವಾರ , ನವೆಂಬರ್ 21, 2019
20 °C
ಸೇಡು ತೀರಿಸಿಕೊಳ್ಳುವ ಛಲದಲ್ಲಿ ರೋಹಿತ್ ಬಳಗ

ಎರಡನೇ ಟ್ವೆಂಟಿ–20 ಪಂದ್ಯ: ಮಳೆಯ ಕಾರ್ಮೋಡವೂ, ಜಯದ ತವಕವೂ..

Published:
Updated:
Prajavani

ರಾಜ್‌ಕೋಟ್: ತಾರಾ ವರ್ಚಸ್ಸಿನ ಆಟಗಾರರ ಬಲವಿಲ್ಲದಿದ್ದರೂ ಬಾಂಗ್ಲಾದೇಶ ತಂಡವು ಬಲಿಷ್ಠ ಭಾರತ ತಂಡವನ್ನು ಮೊದಲ ಪಂದ್ಯದಲ್ಲಿಯೇ ಹಣಿದು ಸಂಭ್ರಮಿಸಿದೆ.

ಗುರುವಾರ ಇಲ್ಲಿ ನಡೆಯಲಿರುವ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಂಡು ಇತಿಹಾಸ ಬರೆಯುವ ತವಕದಲ್ಲಿ ಬಾಂಗ್ಲಾ ತಂಡವಿದೆ. ಆದರೆ ಮೊದಲ ಪಂದ್ಯದ ಎಲ್ಲ ಲೋಪಗಳನ್ನು ತಿದ್ದಿಕೊಂಡು ಪುಟಿದೇಳುವ ಮೂಲಕ ಸರಣಿ ಸೋಲು ತಪ್ಪಿಸಿಕೊಂಡು, ಗೆಲುವಿನ ಅವಕಾಶ ಸೃಷ್ಟಿಸುವ ಛಲದಲ್ಲಿ ರೋಹಿತ್ ಶರ್ಮಾ ಬಳಗವಿದೆ. ಆದರೆ, ಚಂಡಮಾರುತದ ಗಾಳಿ–ಮಳೆಗಳು ಆಟಕ್ಕೆ ಅವಕಾಶ ಕೊಟ್ಟರೆ ಮಾತ್ರ ಪಂದ್ಯ ನಡೆಯಲು ಸಾಧ್ಯ ಎಂಬಂತಹ ಸ್ಥಿತಿ ಇಲ್ಲಿದೆ.

ಹೋದ ಭಾನುವಾರ ನವದೆಹಲಿಯ ‘ಹೊಂಜು’ ಮುಸುಕಿದ ವಾತಾವರಣದಲ್ಲಿ ಬಾಂಗ್ಲಾ ತಂಡವು ಭಾರತಕ್ಕೆ ಸೋಲಿನ ಕಹಿ ಉಣಿಸಿತ್ತು. ಚುಟುಕು ಕ್ರಿಕೆಟ್‌ನಲ್ಲಿ ಗುರಿ ಬೆನ್ನತ್ತಿ ಗೆದ್ದ ಉದಾರಣೆಗಳು ಭಾರತದ ಖಾತೆಯಲ್ಲಿ ಸಾಕಷ್ಟಿವೆ.ಆದರೆ, ಮೊದಲು ಬ್ಯಾಟಿಂಗ್ ಮಾಡುವಾಗ ದೊಡ್ಡ ಗುರಿ ನೀಡುವಲ್ಲಿ ತಾನಿನ್ನೂ ಪರಿಪಕ್ವಗೊಂಡಿಲ್ಲ ಎಂಬಂತೆ ಆ ಪಂದ್ಯದಲ್ಲಿ ಆಡಿತ್ತು. ಕೇವಲ 148 ರನ್‌ಗಳ ಗುರಿಯನ್ನು ಪ್ರವಾಸಿ ತಂಡಕ್ಕೆ ನೀಡಿತ್ತು. ಮುಷ್ಫೀಕುರ್ ರಹೀಂ ಅವರ ಅಬ್ಬರದ ಆಟಕ್ಕೆ ಈ ಗುರಿ ದೊಡ್ಡದಾಗಲಿಲ್ಲ. ಆದರೂ 19.3 ಓವರ್‌ಗಳವರೆಗೆ ಬಾಂಗ್ಲಾ ತಂಡವನ್ನು ಆಡಿಸಿದ್ದು ಭಾರತದ ಬೌಲರ್‌ಗಳ ಹೆಗ್ಗಳಿಕೆ. ಯುಡಿಆರ್‌ಎಸ್‌ ಪಡೆಯುವಲ್ಲಿ ಎಡವಿದ ರಿಷಭ್ ಪಂತ್, ಫೀಲ್ಡಿಂಗ್ ಲೋಪಗಳು ತುಟ್ಟಿಯಾದವು.

ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಯಿತು. ಶಿಖರ್ ಧವನ್ (41 ರನ್) ಬಿಟ್ಟರೆ ಉಳಿದವರು ದೊಡ್ಡ ಮೊತ್ತ ಗಳಿಸಲಿಲ್ಲ. ಅದರಲ್ಲೂ ವಿಜಯ್ ಹಜಾರೆ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್, ಮುಂಬೈನ ಶಿವಂ ದುಬೆ ಅವರು ನಿರೀಕ್ಷೆಯಂತೆ ಆಡಲಿಲ್ಲ. ಇದರಿಂದಾಗಿ ಮಧ್ಯಮ ಕ್ರಮಾಂಕವು ಕುಸಿಯಿತು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಕೃಣಾಲ್ ಪಾಂಡ್ಯ ಅವರು ಕೊನೆಯ ಹಂತದಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಆಡಿ ಒಂದಿಷ್ಟು ರನ್‌ಗಳನ್ನು ಖಾತೆಗೆ ಸೇರಿಸಿದ್ದರು. ಆದರೆ, ಬಾಂಗ್ಲಾ ತಂಡವನ್ನು ಸೋಲಿನ ಸುಳಿಗೆ ತಳ್ಳುವಂತಹ ಮೊತ್ತ ಅದಾಗಿರಲಿಲ್ಲ.

ಆದ್ದರಿಂದ ಮಹಮದುಲ್ಲಾ ರಿಯಾದ್ ಬಳಗವನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಪಾಠವನ್ನು ರೋಹಿತ್ ಬಳಗ ಕಲಿತಿದೆ. ಈ ಪಂದ್ಯವು ವಿಕೆಟ್‌ಕೀಪರ್ ರಿಷಭ್ ಅವರಿಗೆ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶವಾಗಿದೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ತಮ್ಮ ಆಟವನ್ನು ಆಡಿದರೆ ಮಾತ್ರ ಮುಂದಿನ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ ಟಿ 20 ವಿಶ್ವಕಪ್ ಟಿಕೆಟ್ ಸಿಗುವುದು ಅವರಿಗೆ ಕಷ್ಟವಾಗಲಿದೆ.ಆ ಪಂದ್ಯದಲ್ಲಿ ಬಾಂಗ್ಲಾ ತಂಡದ ಎಂಟು ಮಂದಿ ಬೌಲಿಂಗ್ ಮಾಡಿದ್ದರು. ಅದರಿಂದಾಗಿ  ಬ್ಯಾಟ್ಸ್‌ಮನ್‌ಗಳಿಗೆ ಲಯ ಕಂಡುಕೊಳ್ಳುವುದು ಕಷ್ಟವಾಗಿತ್ತು. ಇಲ್ಲಿಯೂ ತಂಡದ ಯುವ ನಾಯಕ ರಿಯಾದ್ ಇಂತಹದೇ ತಂತ್ರವನ್ನು ಹೆಣೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆತಿಥೇಯರು ಎಚ್ಚರಿಕೆಯಿಂದ ಆಡಿದರೆ ಈ ಪಂದ್ಯದಲ್ಲಿ ಗೆದ್ದು ಸರಣಿ ಜಯದ ಕನಸನ್ನು ಜೀವಂತವಾಗಿಡಬಹುದು.

‘ಶತಕ’ದ ದಾಖಲೆಯತ್ತ ಹಿಟ್‌ಮ್ಯಾನ್
ಭಾರತ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರು ಗುರುವಾರ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಯುವ ಮೂಲಕ ‘ಶತಕ’ ಹೊಡೆಯಲಿದ್ದಾರೆ. 

ಈ ಪಂದ್ಯವು ಅವರಿಗೆ ನೂರನೇಯದ್ದಾಗಲಿದೆ. ಇದರೊಂದಿಗೆ ನೂರು ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನು ಆಡಿದ  ಎರಡನೇ ಆಟಗಾರನಾಗಲಿದ್ಧಾರೆ.

ಪಾಕಿಸ್ತಾನದ ಶೋಯಬ್ ಮಲಿಕ್ (111 ಪಂದ್ಯಗಳು) ಅವರೊಬ್ಬರೇ ಈ ಸಾಧನೆ ಮಾಡಿದ್ದಾರೆ.

‘2007ರಿಂದ ಇಲ್ಲಿಯವರೆಗಿನ ಸುದೀರ್ಘ ಪ್ರಯಾಣ ಇದಾಗಿದೆ. ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದು ಇನ್ನೂ ಅಚ್ಚಳಿಯದ ನೆನಪಾಗಿ ಉಳಿದಿದೆ. ಈ ಅವಧಿಯಲ್ಲಿ ಬಹಳಷ್ಟು ಪಾಠಗಳನ್ನು ಕಲಿತಿದ್ದೇನೆ’ ಎಂದು ರೋಹಿತ್ ಹೇಳಿದ್ದಾರೆ.

*
ಮೊದಲ ಪಂದ್ಯ ಗೆದ್ದಿರುವುದರಿಂದ ಸರಣಿ ಜಯಿಸುವ ಸುವರ್ಣಾವಕಾಶ ಲಭಿಸಿದೆ. ಒಳ್ಳೆಯ ಆಟ ಆಡಿದರೆ ಜಯ ಖಚಿತ. ಭಾರತ ತಂಡವು ಅನುಭವಿ ಮತ್ತು ಬಲಿಷ್ಠವಾಗಿದೆ. ಜಯ ಸುಲಭವಲ್ಲ.
–ಮಹಮುದುಲ್ಲಾ ರಿಯಾದ್, ಬಾಂಗ್ಲಾದೇಶ ತಂಡದ ನಾಯಕ

ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ, ಖಲೀಲ್ ಅಹಮದ್, ಯಜುವೇಂದ್ರ ಚಾಹಲ್, ದೀಪಕ್ ಚಾಹರ್, ರಾಹುಲ್ ಚಾಹರ್,  ಕೃಣಾಲ್ ಪಾಂಡ್ಯ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್.

ಬಾಂಗ್ಲಾದೇಶ: ಮಹಮುದುಲ್ಲಾ ರಿಯಾದ್ (ನಾಯಕ), ತೈಜುಲ್ ಇಸ್ಲಾಂ, ಮೊಹಮ್ಮದ್ ಮಿಥುನ್, ಲಿಟನ್ ಕುಮಾರ್ ದಾಸ್,ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಷ್ಫೀಕರ್ ರಹೀಂ, ಅಫಿಫ್ ಹುಸೇನ್, ಮೊಸಾದಿಕ್, ಹುಸೇನ್, ಸೈಕತ್ ಅಮಿನುಲ್ ಇಸ್ಲಾಂ ವಿಪ್ಲಬ್, ಅರಾಫತ್ ಸನ್ನಿ, ಅಬು ಹೈದರ್, ಅಲ್ ಅಮಿನ್ ಹುಸೇನ್, ಮುಸ್ತಫಿಜರ್ ರೆಹಮಾನ್, ಶಫೀಯುಲ್ ಇಸ್ಲಾಂ.

ಪಂದ್ಯ ಆರಂಭ: ಸಂಜೆ 7
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್ 

ಪ್ರತಿಕ್ರಿಯಿಸಿ (+)