ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st Test: ಪೂಜಾರಾ–ಪಂತ್ ಸುಂದರ ಆಟ

Last Updated 7 ಫೆಬ್ರುವರಿ 2021, 17:03 IST
ಅಕ್ಷರ ಗಾತ್ರ

ಚೆನ್ನೈ : ಕಡಲನಗರಿಯ ಬಿಸಿಲಿನಲ್ಲಿ ಚೇತೇಶ್ವರ ‍ಪೂಜಾರ ಅವರ ತಣ್ಣನೆಯ ಆಟ ಮತ್ತು ಪಟಾಕಿಯಂತೆ ಸಿಡಿದರೂ ಶತಕ ತಪ್ಪಿಸಿಕೊಂಡ ರಿಷಭ್ ಪಂತ್ ಬ್ಯಾಟಿಂಗ್ ಮಾತ್ರ ಭಾನುವಾರ ಭಾರತ ತಂಡದಲ್ಲಿ ಸಮಾಧಾನ ತಂದ ವಿಷಯಗಳು.

ಇನ್ನುಳಿದಂತೆ ಪ್ರವಾಸಿ ಇಂಗ್ಲೆಂಡ್ ಬಳಗದ ಮೇಲುಗೈನದ್ದೇ ಪ್ರತಿಧ್ವನಿ ಮತ್ತು ಆತಿಥೇಯರಿಗೆ ಫಾಲೋ ಆನ್‌ ಆತಂಕ.

ಚೆಪಾಕ್‌ನಲ್ಲಿ ಮೂರನೇ ದಿನ ದಾಟದ ಬೆಳಿಗ್ಗೆ ಇಂಗ್ಲೆಂಡ್ ಬ್ಯಾಟಿಂಗ್‌ಗೆ ತೆರೆಬಿತ್ತು. ಶುಕ್ರವಾರ ಟಾಸ್‌ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ತಂಡವು ಮೊದಲ ಇನಿಂಗ್ಸ್‌ನಲ್ಲಿ 578 ರನ್ ಪೇರಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 74 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 257 ರನ್‌ ಗಳಿಸಿದೆ. ಪೂಜಾರ (73; 143ಎ, 11ಬೌಂ) ಮತ್ತು ಪಂತ್ (91; 88ಎ, 9ಬೌಂ, 5ಸಿ) ಅವರಿಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಸೇರಿಸಿದರು.

ಸ್ಥಳೀಯ ಜೋಡಿ ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 33) ಮತ್ತು ಆರ್. ಅಶ್ವಿನ್ (ಬ್ಯಾಟಿಂಗ್ 8) ಕ್ರೀಸ್‌ನಲ್ಲಿ ದ್ದಾರೆ. ವಿರಾಟ್ ಕೊಹ್ಲಿ ಬಳಗಕ್ಕೆ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 122 ರನ್‌ ಗಳಿಸಬೇಕು. ಸುಂದರ್‌ ತಮಗೆ ಲಭಿಸಿದ ಒಂದು ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು.

ಪೂಜಾರಾ–ಪಂತ್ ಜೊತೆಯಾಟ: ಎಂದಿನಂತೆ ತಮ್ಮ ಶಾಂತಚಿತ್ತದ ಬ್ಯಾಟಿಂಗ್ ಮಾಡುತ್ತಿದ್ದ ಪೂಜಾರ ಅವರೊಂದಿಗೆ ರಿಷಭ್ ಪಂತ್ ಜೊತೆಗೂಡಿದಾಗ ಭಾರತ ತಂಡವು 26.3 ಓವರ್‌ಗಳಲ್ಲಿ 73 ರನ್ ಗಳಿಸಿ ನಾಲ್ಕು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು.

ಹೋದ ತಿಂಗಳು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಆಡಿದಂತಹ ಬ್ಯಾಟಿಂಗ್‌ ಅನ್ನೇ ರಿಷಭ್ ಇಲ್ಲಿಯೂ ಪುನರಾವರ್ತಿಸಿದರು. ಬೇರೆಲ್ಲ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನ ಬೌಲರ್‌ಗಳ ಎಸೆತಗಳನ್ನು ಎದುರಿಸಲು ಪರದಾಡಿದರು. ಆದರೆ ಪಂತ್ ಟಿ20 ಮಾದರಿಯ ಬೀಸಾಟವಾಡಿದರು. ಅವರು ಹೊಡೆದ ಐದು ಸಿಕ್ಸರ್‌ಗಳ ಅಬ್ಬರಕ್ಕೆ ಇಂಗ್ಲೆಂಡ್‌ ಬೌಲರ್‌ಗಳು ಬೆಚ್ಚಿದರು. ಕೇವಲ 40 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಪೂಜಾರ 106 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು.

ಆದರೆ, 50ನೇ ಓವರ್‌ನಲ್ಲಿ ಡಾಮ್ನಿಕ್ ಬೆಸ್‌ ಎಸೆತವನ್ನು ಲೆಗ್‌ಸೈಡ್‌ಗೆ ಎತ್ತಿ ಹೊಡೆದರು. ಆದರೆ ಚೆಂಡು ಶಾರ್ಟ್‌ ಲೆಗ್‌ ಫೀಲ್ಡರ್ ಒಲಿಪೋಪ್ ಅವರ ಭುಜಕ್ಕೆ ಬಡಿದು ಪುಟಿದೆದ್ದಿತು. ಶಾರ್ಟ್‌ ಮಿಡ್‌ವಿಕೆಟ್‌ನಲ್ಲಿದ್ದ ರೋರಿ ಬರ್ನ್ಸ್‌ ಸುಲಭವಾಗಿ ಕ್ಯಾಚ್ ಮಾಡಿದರು. ಜೊತೆಯಾಟ ಮುರಿದುಬಿತ್ತು.

ಆಗಲೂ ಪಂತ್ ತಮ್ಮ ಆಟದ ವೇಗವನ್ನು ಕಡಿತಗೊಳಿಸಲಿಲ್ಲ. ತಮ್ಮ ಶತಕಕ್ಕೆ ಒಂಬತ್ತು ರನ್‌ಗಳ ಅವಶ್ಯಕತೆ ಇದ್ದಾಗ ಆತುರಪಟ್ಟು ದಂಡ ತೆತ್ತರು. ಬೇಸ್ ಹಾಕಿದ ಎಸೆತವನ್ನು ಸಿಕ್ಸರ್‌ ಗೆತ್ತುವ ಭರದಲ್ಲಿ ಜ್ಯಾಕ್‌ ಲೀಚ್‌ಗೆ ಕ್ಯಾಚಿತ್ತರು. ಹೋದ ತಿಂಗಳು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಅವರು 97 ರನ್ ಗಳಿಸಿದ್ದಾಗಲೂ ಇದೇ ರೀತಿ ಔಟಾಗಿದ್ದರು.

ಆದರೆ, ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ರೋಹಿತ್ ಶರ್ಮಾ (6 ರನ್) ಮತ್ತು ಶುಭಮನ್ ಗಿಲ್ (29ರನ್) ವೇಗಿ ಜೋಫ್ರಾ ಆರ್ಚರ್‌ಗೆ ಸುಲಭದ ತುತ್ತಾದರು.

ನಾಯಕ ವಿರಾಟ್ ಕೊಹ್ಲಿ (11; 48ಎ) ಮೇಲಿನ ನಿರೀಕ್ಷೆ ಹುಸಿ ಯಾಯಿತು. ಸ್ಪಿನ್ನರ್ ಡಾಮ್ನಿಕ್ ಬೆಸ್ ಎಸೆತದಲ್ಲಿ ಔಟಾದರು. ಅಜಿಂಕ್ಯ ರಹಾನೆ (1 ರನ್) ಕೂಡ ಡಾಮ್ನಿಕ್ ಬೆಸ್‌ ಅವರ ಇನ್ನೊಂದು ಓವರ್‌ನಲ್ಲಿ ಜೋ ರೂಟ್ ಪಡೆದ ಸಾಹಸಮಯ ಕ್ಯಾಚ್‌ನಿಂದಾಗಿ ಪೆವಿಲಿಯನ್ ಸೇರಿದರು.

***

ರಿಷಭ್ ಪಂತ್ ಇದೇ ರೀತಿ ನೈಜ ಆಟ ಮುಂದುವರಿಸ ಬೇಕು. ಇಂದು ಆ ರೀತಿ ಆಡಿದ್ದ ರಿಂದ ತಂಡದ ಖಾತೆಗೆ ಅಮೂಲ್ಯ ರನ್‌ಗಳು ಸೇರಿದವು

- ಚೇತೇಶ್ವರ್ ಪೂಜಾರ, ಭಾರತದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT