ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಹೊನಲು ಬೆಳಕಿನಲ್ಲಿ ಹೊಳೆದ ಸೂರ್ಯ; ಭಾರತಕ್ಕೆ 8 ರನ್‌ಗಳ ಗೆಲುವು

ಭಾರತಕ್ಕೆ ಸರಣಿ ಗೆಲುವಿನ ಆಸೆ ಜೀವಂತ
Last Updated 18 ಮಾರ್ಚ್ 2021, 21:47 IST
ಅಕ್ಷರ ಗಾತ್ರ

ಅಹಮದಾಬಾದ್: ಗುರುವಾರ ರಾತ್ರಿಯ ಕೊನೆಯ ಓವರ್‌ನ ಎಲ್ಲ ನಾಟಕೀಯ ತಿರುವುಗಳನ್ನು ದಾಟುವಲ್ಲಿ ಯಶಸ್ವಿಯಾದ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ’ಖಳನಾಯಕ‘ನಾಗುವ ಸಾಧ್ಯತೆಯನ್ನು ತಪ್ಪಿಸಿಕೊಂಡರು. ತಮ್ಮ ಗೆಳೆಯ ಸೂರ್ಯಕುಮಾರ್ ಯಾದವ್ ಅರ್ಧಶತಕ ವ್ಯರ್ಥವಾಗಲೂ ಬಿಡಲಿಲ್ಲ.

ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 8 ರನ್‌ಗಳ ಗೆಲುವಿನ ಕಾಣಿಕೆಯನ್ನೂ ನೀಡಿದರು. ಐದು ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು. ಆತಿಥೇಯ ಬಳಗದ ಸರಣಿ ಗೆಲುವಿನ ಕನಸು ಮರುಜೀವ ಪಡೆಯಿತು.

ಈ ಸರಣಿಯಲ್ಲಿ ಟಾಸ್ ಸೋತ ತಂಡವು ಗೆದ್ದ ಮೊದಲ ಪಂದ್ಯವೂ ಇದಾಯಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸೂರ್ಯಕುಮಾರ್ ಯಾದವ್ (57; 31ಎಸೆತ, 6ಬೌಂಡರಿ, 3ಸಿಕ್ಸರ್) ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 185 ರನ್ ಗಳಿಸಿತು. ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 177 ರನ್‌ ಗಳಿಸಿ ಪರಾಭವಗೊಂಡಿತು.

ಇಂಗ್ಲೆಂಡ್ ತಂಡವು ಸುಲಭವಾಗಿ ಮಣಿಯಲಿಲ್ಲ. ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದ ಜೋಫ್ರಾ ಆರ್ಚರ್ ಪಂದ್ಯದ ಕೊನೆಯ ಓವರ್‌ನಲ್ಲಿ ತಮ್ಮ ತಂಡವನ್ನು ಗೆಲುವಿನಂಚಿಗೆ ತಂದು ನಿಲ್ಲಿಸಿದ್ದರು. 20ನೇ ಓವರ್‌ನಲ್ಲಿ ಗೆಲುವಿನ 23 ರನ್‌ಗಳ ಅಗತ್ಯ ತಂಡಕ್ಕಿತ್ತು.

ಎರಡನೇ ಎಸೆತವನ್ನು ಜೋಫ್ರಾ ಬೌಂಡರಿಗೆ ಕಳಿಸಿದರು. ಇಬ್ಬನಿಯಿಂದ ಒದ್ದೆಯಾಗಿದ್ದ ಚೆಂಡು ಅವರ ಕೈಯಿಂದ ಜಾರುತ್ತಿತ್ತು. ಆದ್ದರಿಂದ ಅವರ ಮನವಿಯ ಮೇರೆಗೆ ಅಂಪೈರ್ ಚೆಂಡು ಬದಲಿಸಿದರು. ಶಾರ್ದೂಲ್‌ ಹಾಕಿದ ಮೂರನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಜೋಫ್ರಾ ಇಂಗ್ಲೆಂಡ್ ಬಳಗದಲ್ಲಿ ಉಲ್ಲಾಸ ಮೂಡಿಸಿದರು. ಇದರಿಂದ ತೀವ್ರ ಒತ್ತಡಕ್ಕೊಳಗಾದ ಶಾರ್ದೂಲ್ ಎರಡು ಎಸೆತಗಳನ್ನು ವೈಡ್ ಮಾಡಿದರು. ನಾಲ್ಕನೇ ಎಸೆತದಲ್ಲಿ ಜೋಫ್ರಾ ಹೊಡೆತದ ಪ್ರಯತ್ನಕ್ಕೆ ಅವರ ಬ್ಯಾಟ್‌ ಮುರಿಯಿತು. ಆದರೂ ಒಂದು ರನ್ ಓಡಿದರು. ಐದನೇ ಎಸೆತದಲ್ಲಿ ಜೋರ್ಡಾನ್ ಕ್ಯಾಚ್ ಪಡೆಯುವಲ್ಲಿ ಬೌಂಡರಿಲೈನ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ ತಪ್ಪುಮಾಡಲಿಲ್ಲ. ಇದು ಭಾರತದ ಜಯಕ್ಕೆ ರಹದಾರಿಯಾಯಿತು. ಹಾರ್ದಿಕ್ ಮತ್ತು ಪದಾರ್ಪಣೆ ಮಾಡಿದ ರಾಹುಲ್ ಚಾಹರ್ ತಲಾ ಎರಡು ವಿಕೆಟ್ ಗಳಿಸಿದರು.

ಸೂರ್ಯ ಹೊಳಪು: ತಾವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದ ಸೂರ್ಯಕುಮಾರ್ ಯಾದವ್ ಮಿಂಚಿನ ಅರ್ಧಶತಕ ಗಳಿಸಿದರು.

ಈ ಸರಣಿಯ ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್‌ಗೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿರಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಬದಲು ಸೂರ್ಯ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ವೇಗಿ ಜೋಫ್ರಾ ಹಾಕಿದ ಶರವೇಗದ ಶಾಟ್‌ ಪಿಚ್ ಎಸೆತವನ್ನು ಹುಕ್ ಮಾಡಿದ ಸೂರ್ಯ ಚೆಂಡನ್ನು ಬೌಂಡರಿಯಾಚೆ ಕಳಿಸಿದರು. ಏಯಾನ್ ಮಾರ್ಗನ್ ಬಳಗ ನಿಬ್ಬೆರಗಾಯಿತು. ಇನ್ನೊಂದು ತುದಿಯಲ್ಲಿದ್ದ ಕೆ.ಎಲ್. ರಾಹುಲ್ ಜೊತಗೆ ಸೂರ್ಯ ಎರಡನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು.

ಕಳೆದ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರಾಹುಲ್ ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಅವರು 14 ರನ್‌ ಗಳಿಸಿದ್ದ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್‌ ಎಸೆತವನ್ನು ಆಡುವ ಪ್ರಯತ್ನದಲ್ಲಿ ಜೋಫ್ರಾಗೆ ಕ್ಯಾಚಿತ್ತರು. ಸರಣಿಯಲ್ಲಿ ಎರಡು ಅರ್ಧಶತಕ ಬಾರಿಸಿರುವ ನಾಯಕ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು.

ಸೂರ್ಯ, 28ನೇ ಎಸೆತದಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅದರಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ರಿಷಭ್ ಪಂತ್(30; 23ಎಸೆತ, 4ಬೌಂಡರಿ) ಅವರೊಂದಿಗೆ 40 ರನ್‌ ಸೇರಿಸಿದರು.

ಚರ್ಚೆಗೆ ಗ್ರಾಸವಾದ ಕ್ಯಾಚ್‌: ಆದರೆ 14ನೇ ಓವರ್‌ನಲ್ಲಿ ಸೂರ್ಯ ಔಟಾಗಿದ್ದು ಚರ್ಚೆಗೆ ಗ್ರಾಸವಾಯಿತು. ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಸೂರ್ಯ ಸಿಕ್ಸರ್‌ಗೆ ಚೆಂಡನ್ನು ಎತ್ತುವ ಪ್ರಯತ್ನ ಮಾಡಿದರು. ಬೌಂಡರಿಲೈನ್ ಸಮೀಪ ಫೀಲ್ಡರ್ ಡೇವಿಡ್ ಮಲಾನ್ ಕ್ಯಾಚ್ ಪಡೆದರು. ಆದರೆ, ಅವರು ಚೆಂಡನ್ನು ಪೂರ್ಣವಾಗಿ ಹಿಡಿತಕ್ಕೆ ಪಡೆಯುವ ಮುನ್ನ ನೆಲಸ್ಪರ್ಶವಾದಂತೆ ಕಂಡುಬಂದಿತು. ವಿವಿಧ ಆಯಾಮಗಳ ದೃಶ್ಯತುಣುಕಗಳನ್ನು ಇದನ್ನು ಪರಿಶೀಲಿಸಿದ ಟಿ.ವಿ. ಅಂಪೈರ್ ವೀರೇಂದ್ರ ಶರ್ಮಾ ಔಟ್ ನೀಡಿದರು. ಆದರೆ, ಒಂದು ಆಯಾಮದಲ್ಲಿ ಚೆಂಡು ಪೂರ್ಣ ನೆಲಕ್ಕೆ ಬಿದ್ದು, ಆಮೇಲೆ ಕೈಸೇರಿದಂತೆ ಕಾಣಿಸುತ್ತಿತ್ತು. ಇದರಿಂದಾಗಿ ಅಂಪೈರ್ ತೀರ್ಮಾನದ ಬಗ್ಗೆ ಡಗ್‌ಔಟ್‌ನಲ್ಲಿದ್ದ ವಿರಾಟ್ ಕೊಹ್ಲಿಯೂ ಅಸಮಾಧಾನಗೊಂಡರು.

ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಅಯ್ಯರ್ (37; 18ಎಸೆತ, 5ಬೌಂಡರಿ, 1ಸಿಕ್ಸರ್) ಕೂಡ ಬೌಲರ್‌ಗಳನ್ನು ದಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT