ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ | ಐತಿಹಾಸಿಕ ಜಯದತ್ತ ಭಾರತದ ಚಿತ್ತ

ಟಿ20 ಕ್ರಿಕೆಟ್ ಸರಣಿ: ಇಂದು ನ್ಯೂಜಿಲೆಂಡ್ ಎದುರು ಹಣಾಹಣಿ
Last Updated 29 ಜನವರಿ 2020, 13:15 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಕಿವೀಸ್ ನಾಡಿನಲ್ಲಿ ಟ್ವೆಂಟಿ–20 ಕ್ರಿಕೆಟ್ ಸರಣಿ ಜಯದ ದಾಖಲೆ ಬರೆಯುವ ಐತಿಹಾಸಿಕ ಅವಕಾಶದ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ ಬಳಗ ನಿಂತಿದೆ.

ನ್ಯೂಜಿಲೆಂಡ್ ಎದುರಿನ ಐದು ಟಿ20 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿರುವ ಭಾರತ ತಂಡವು ಬುಧವಾರ ಸೆಡಾನ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಸರಣಿ ಕೈವಶವಾಗಲಿದೆ. ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಸರಣಿ ಗೆದ್ದ ಸಾಧನೆಯ ಶ್ರೇಯ ಒಲಿಯಲಿದೆ.

2008–09ರಲ್ಲಿ ಇಲ್ಲಿ ಸರಣಿ ಆಡಿದ್ದ ಮಹೇಂದ್ರಸಿಂಗ್ ಧೋನಿ ನಾಯಕತ್ವದ ತಂಡವು 0–2ರಿಂದ ಸೋತಿತ್ತು. ಹೋದ ವರ್ಷ ಕೂಡ ಭಾರತ ತಂಡವು 1–2ರಿಂದ ಪರಾಭವಗೊಂಡಿತ್ತು. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಪ್ರಸಕ್ತ ಸರಣಿಯ ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಅಧಿಕಾರಯುತವಾಗಿ ಜಯಿಸಿದೆ. ಆದರೆ, ಬಾಕಿಯಿರುವ ಮೂರು ಪಂದ್ಯಗಳನ್ನೂ ಗೆದ್ದು ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಆತಿಥೇಯ ತಂಡವು ಭಾರತಕ್ಕೆ ಅಡ್ಡಗಾಲು ಹಾಕುವ ಛಲದಲ್ಲಿದೆ.ಸರಣಿಯ ಮೊದಲ ಪಂದ್ಯದಲ್ಲಿ 203 ರನ್‌ಗಳ ಬೃಹತ್ ಮೊತ್ತದ ಗುರಿ ಒಡ್ಡಿದ್ದ ನ್ಯೂಜಿಲೆಂಡ್ ಸೋಲಿಗೆ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರ ಅಬ್ಬರದ ಬ್ಯಾಟಿಂಗ್ ಕಾರಣವಾಗಿತ್ತು. ಎರಡನೇ ಪಂದ್ಯದಲ್ಲಿ ಮಿಂಚಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರ ದಾಳಿಯ ಮುಂದೆ ಸಾಧಾರಣ ಮೊತ್ತದ ಗುರಿ ನೀಡಿದ್ದ ಕಿವೀಸ್‌ ಸೋತಿತು. ಈ ಪಂದ್ಯದಲ್ಲಿಯೂ ರಾಹುಲ್–ಶ್ರೇಯಸ್ ಅಮೋಘ ಬ್ಯಾಟಿಂಗ್ ಮಾಡಿದರು.

ಕನ್ನಡಿಗ ರಾಹುಲ್ ಈ ಪಂದ್ಯದಲ್ಲಿಯೂ ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಖಚಿತ. ಜೊತೆಗೆ ವಿಕೆಟ್‌ಕೀಪಿಂಗ್ ಹೊಣೆಯನ್ನು ನಿಭಾಯಿಸುವರು. ಇದರಿಂದಾಗಿ ರಿಷಭ್ ಪಂತ್ ಬೆಂಚ್‌ನಲ್ಲಿರಬೇಕಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಸಾಧ್ಯತೆ ಕಡಿಮೆ.

ಆದರೆ, ಆತಿಥೇಯರ ಬಳಗದಲ್ಲಿ ಟ್ರೆಂಟ್ ಬೌಲ್ಟ್‌ ಅನುಪಸ್ಥಿತಿಯು ಕಾಡುತ್ತಿದೆ. ಟಿಮ್ ಸೌಥಿ ಒಬ್ಬರೇ ಲಯದಲ್ಲಿರುವ ಬೌಲರ್‌ಗಳಾಗಿದ್ದಾರೆ. ಅವರು ಆರಂಭದಲ್ಲಿ ಗಳಿಸಿಕೊಟ್ಟ ಯಶಸ್ಸಿನ ಲಾಭವನ್ನು ಉಳಿದ ಬೌಲರ್‌ಗಳು ಪಡೆಯುತ್ತಿಲ್ಲ. ಇದರಿಂದಾಗಿ ಭಾರತದ ಮಧ್ಯಮ ಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ಎರಡೂ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿಫಲವಾಗಿತ್ತು. ಬ್ಯಾಟಿಂಗ್‌ನಲ್ಲಿಯೂ ಅಷ್ಟೇ. ಉತ್ತಮ ಆರಂಭ ದೊರೆಯುತ್ತಿದೆ. ಆದರೆ ಮಧ್ಯದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಿಂದ ರನ್‌ಗಳು ಹರಿಯುತ್ತಿಲ್ಲ. ಇದು ತಂಡದ ದೊಡ್ಡ ಮೊತ್ತ ಗಳಿಕೆಯ ಉದ್ಧೇಶಕ್ಕೆ ಹಿನ್ನಡೆಯಾಗಿದೆ. ಈ ಲೋಪಗಳನ್ನು ಸರಿಪಡಿಸಿಕೊಂಡು ಪುಟಿದೆದ್ದರೆ ಭಾರತದ ಸರಣಿ ಜಯದ ಕನಸು ಈ ಪಂದ್ಯದಲ್ಲಿ ಕೈಗೂಡುವುದು ಕಷ್ಟವಾಗಬಹುದು.

ಆದರೂ ಇನ್ನೂ ಎರಡೂ ಪಂದ್ಯಗಳು ಬಾಕಿಯಿರುತ್ತವೆ. ಅದರಲ್ಲಿ ಒಂದರಲ್ಲಿ ಮೇಲುಗೈ ಸಾಧಿಸಿದರೂ ಇತಿಹಾಸ ರಚನೆ ಸಾಧ್ಯವಾಗಲಿದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಮನೀಷ್ ಪಾಂಡೆ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ನವದೀಪ್ ಸೈನಿ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಮಿಚೆಲ್ ಸ್ಯಾಂಟನರ್, ಬ್ಲೇರ್ ಟಿಕ್ನರ್, ಟಿಮ್ ಸೌಥಿ, ಈಶ ಸೋಧಿ, ಹಮೀಷ್ ಬೆನೆಟ್, ಸ್ಕಾಟ್ ಕಗೆಲೆಜಿನ್, ಡೆರಿಲ್ ಮಿಚೆಲ್.

ಪಂದ್ಯ ಆರಂಭ: ಮಧ್ಯಾಹ್ನ 12.30

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ವರ್ಕ್


ಕಿವೀಸ್ ಎದುರು ಭಾರತ (ಟಿ20)

ಪಂದ್ಯ: 13

ಜಯ: 5

ಸೋಲು: 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT