ಗುರುವಾರ , ಆಗಸ್ಟ್ 5, 2021
28 °C

IND vs NZ WTC Final: 3ನೇ ದಿನ, 217 ರನ್‌ಗೆ ಭಾರತ ಆಲೌಟ್‌

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

BCCI/Twitter

ಸೌತಾಂಪ್ಟನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ ಗಳಿಗೆ ಆಲೌಟ್‌ ಆಗಿದೆ.

ಶುಕ್ರವಾರವೇ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಹೀಗಾಗಿ ಟಾಸ್‌ ಕೂಡ ಸಾಧ್ಯವಾಗಿರಲಿಲ್ಲ. ಎರಡನೇ ದಿನ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ ಉತ್ತಮ ಜೊತೆಯಾಟವಾಡಿದ್ದ ನಾಯಕ ವಿರಾಟ್‌ ಕೊಹ್ಲಿ ಮೂರನೇ ದಿನ ಬೇಗನೆ ವಿಕೆಟ್‌ ಒಪ್ಪಿಸಿದರು.

ಶನಿವಾರ 44 ರನ್‌ ಗಳಿಸಿದ್ದ ಕೊಹ್ಲಿ ಮತ್ತು 29 ರನ್‌ ಗಳಿಸಿದ್ದ ರಹಾನೆ 3ನೇ ದಿನದಾಟ ಆರಂಭಿಸಿದರು. ಆದರೆ ಕೊಹ್ಲಿ, ಇಂದು ಒಂದೂ ರನ್‌ ಗಳಿಸದೆ ಕೈಲ್‌ ಜೆಮಿಸನ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (4) ಅವರೂ ನಾಯಕನ ಹಿಂದೆಯೇ ಪೆವಿಲಿಯನ್‌ ಸೇರಿಕೊಂಡರು.

ಮೂರನೇ ದಿನ ತಂಡದ ಮೊತ್ತಕ್ಕೆ ಕೇವಲ 16 ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ರಹಾನೆ ಆಸರೆಯಾಗುವ ಪ್ರಯತ್ನ ಮಾಡಿದರು. ಆದರೆ ನೈಲ್‌ ವಾಗ್ನರ್‌ ಅದಕ್ಕೆ ಅವಕಾಶ ನೀಡಲಿಲ್ಲ. 117 ಎಸೆತಗಳನ್ನು ಎದುರಿಸಿದ್ದ ರಹಾನೆ 49 ರನ್‌ ಗಳಿಸಿದ್ದ ವೇಳೆ ವಾಗ್ನರ್‌ ಬೌಲಿಂಗ್‌ನಲ್ಲಿ ಟಾಮ್‌ ಲಾಥಮ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ನಂತರ 3 ಬೌಂಡರಿ ಸಹಿತ 22 ರನ್‌ ಕಲೆಹಾಕಿದ್ದ ಆರ್‌ ಅಶ್ವಿನ್‌, 86ನೇ ಓವರ್‌ನಲ್ಲಿ ಟಿಮ್‌ ಸೌಥಿ ದಾಳಿಯಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಇಶಾಂತ್‌ ಶರ್ಮಾ (4), ಜಸ್‌ಪ್ರೀತ್‌ ಬೂಮ್ರಾ (0) ಹೆಚ್ಚು ಹೊತ್ತು ನಿಲ್ಲಲಿಲ್ಲ.

ತಾಳ್ಮೆಯ ಆಟವಾಡುತ್ತಿದ್ದ ರವೀಂದ್ರ ಜಡೆಜಾ (53 ಎಸೆತಗಳಲ್ಲಿ 15 ರನ್‌) ಕೊನೆಯ ವಿಕೆಟ್‌ ರೂಪದಲ್ಲಿ ಔಟಾಗುವುದರೊಂದಿಗೆ ಭಾರತದ ಇನಿಂಗ್ಸ್‌ಗೆ ತೆರೆ ಬಿದ್ದಿತು.

ಸದ್ಯ ನ್ಯೂಜಿಲೆಂಡ್‌ ಇನಿಂಗ್ಸ್‌ ಆರಂಭವಿಸಿದ್ದು, ಯಾವುದೇ ವಿಕೆಟ್‌ ನಷ್ಟವಿಲ್ಲದೆ 19 ಓವರ್‌ಗಳಲ್ಲಿ 31ರನ್‌ ಗಳಿಸಿದೆ. ಅನುಭವಿ ಟಾಮ್‌ ಲಾಥಮ್‌ (16) ಮತ್ತು ಡೆವೋನ್‌ ಕಾನ್ವೆ (14) ಕ್ರೀಸ್‌ನಲ್ಲಿದ್ದಾರೆ.

ಭಾರತದ ಕಾಲಮಾನ ರಾತ್ರಿ 11.30ರ ವರೆಗೆ ಪಂದ್ಯ ಮುಂದುವರಿಯಲಿದೆ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ಸೌತಾಂಪ್ಟನ್‌ನ ಏಜಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಶನಿವಾರದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು