ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಕಿವೀಸ್‌ ಪಂದ್ಯ: ನೆಟ್ಟಿಗರು ಪ್ರಿಯಾಂಕಾರ ಮೆಟ್‌ ಗಾಲಾ ಗೌನ್‌ ಕೇಳಿದ್ದೇಕೆ?

ಅಕ್ಷರ ಗಾತ್ರ

ಭಾರತ-ನ್ಯೂಜಿಲೆಂಡ್‌ ನಡುವಣ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ಮಳೆಯಿಂದ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದು, ಕ್ರಿಕೆಟ್‌ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.

ಲಾಕ್‌ಡೌನ್‌ ಒತ್ತಡಗಳ ನಂತರ ಬಹಳ ಹುರುಪಿನಿಂದ ಆರಂಭಗೊಂಡಿದ್ದ ಪಂದ್ಯಕ್ಕೆ ಆರಂಭಿಕ ವಿಘ್ನ ಎಂಬಂತೆ ಮಳೆರಾಯನ ಆಗಮನವಾಯ್ತು. ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ಶುಕ್ರವಾರ ಭಾರತೀಯ ಕಾಲಮಾನ 3 ಗಂಟೆಗೆ ಆರಂಭಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಮಳೆಯಿಂದಾಗಿ ತಡವಾಯಿತು. ಮಳೆ ನಿಂತರೆ ಊಟದ ವಿರಾಮದ ಬಳಿಕ ಪಂದ್ಯ ಆರಂಭಗೊಳ್ಳಲಿದೆ ಎಂದು ಘೋಷಿಸಲಾಗಿತ್ತು. ಆದರೆ ಮಳೆ ನಿಲ್ಲಲೇ ಇಲ್ಲ. ನಂತರ ಟಾಸ್‌ಹಾಕುವುದು ತಡವಾಗಿತ್ತು. ಅಂತಿಮವಾಗಿ ಮೊದಲ ದಿನದಾಟ ನಿಂತುಹೋಯ್ತು.

ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯ ವರುಣನ ಅವಕೃಪೆಯಿಂದ ಸರಾಗವಾಗಿ ನಡೆಯದಿರುವುದರಿಂದ ಬೇಸತ್ತ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಮೀಮ್‌ಗಳನ್ನು ಹರಿಯಬಿಟ್ಟು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಫೈನಲ್‌ ಪಂದ್ಯದ ಮೊದಲ ದಿನದ ಆಟವನ್ನು ಸ್ಥಗಿತಗೊಳಿಸಿರುವುದಾಗಿ ಐಸಿಸಿ ಹೇಳಿದ ಬೆನ್ನಲ್ಲೇ ತರಹೇವಾರಿ ಮೀಮ್‌ಗಳು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ. ಕಾತರದಿಂದ ಕಾದಿದ್ದ ಕ್ರಿಕೆಟ್ ಅಭಿಮಾನಿಗಳು ನಕ್ಕು ಹಗುರಾಗುತ್ತಿದ್ದಾರೆ.

'ನೇಷನ್‌ ವಾಂಟ್ಸ್‌ ಟು ನೋ... ಸೌತಂಪ್ಟನ್‌ನಲ್ಲಿ ಮಳೆ ಯಾವಾಗ ನಿಲ್ಲಲಿದೆ?' ಎಂದು ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಪ್ರಶ್ನಿಸುತ್ತಿರುವಂತೆ ಮೀಮ್‌ ಅನ್ನು ಮಾಜಿ ಕ್ರಿಕೆಟಿಗ ವಾಸಿಮ್‌ ಜಾಫರ್‌ ಪೋಸ್ಟ್‌ ಮಾಡಿದ್ದು ಬಿದ್ದೂಬಿದ್ದು ನಗುವಂತೆ ಮಾಡಿದೆ.

ಕೆಲವರು ವರುಣ ದೇವರನ್ನು ಪುನಃ ಪ್ರಾರ್ಥಿಸುವಂತೆ ಕೇದಾರ್‌ ಜಾದವ್‌ ಅವರನ್ನು ಕೋರಿಕೊಂಡರೆ, ಇನ್ನೂ ಕೆಲವರು ನಟಿ ಪ್ರಿಯಾಂಕ ಚೋಪ್ರಾ ಅವರಿಗೆ 2017ರ ಮೆಟ್‌ ಗಾಲಾದಲ್ಲಿ ಧರಿಸಿದ್ದ ಗೌನ್‌ ಅನ್ನು ಮೈದಾನಕ್ಕೆ ಹಾಸಲು ಕೊಡುವಂತೆ ಕಿಚಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT