ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ನ್ಯೂಲ್ಯಾಂಡ್‌ನಲ್ಲಿ ವಿಕೆಟ್‌ ಪತನದ ಭರಾಟೆ

ಕೇಪ್‌ಟೌನ್ ಟೆಸ್ಟ್‌ನಲ್ಲಿ ವೇಗಿಗಳ ಆರ್ಭಟ l ಬ್ಯಾಟರ್‌ಗಳ ಪರದಾಟ l ಸಿರಾಜ್‌ಗೆ ಆರು ವಿಕೆಟ್ l ಕೊಹ್ಲಿ ದಿಟ್ಟ ಆಟ
Published 4 ಜನವರಿ 2024, 0:09 IST
Last Updated 4 ಜನವರಿ 2024, 0:09 IST
ಅಕ್ಷರ ಗಾತ್ರ

ಕೇಪ್‌ಟೌನ್: ನ್ಯೂಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ವೇಗದ ಬೌಲರ್‌ಗಳದ್ದೇ ಪಾರುಪತ್ಯ. ಬ್ಯಾಟರ್‌ಗಳಿಗೆ ಪೆವಿಲಿಯನ್ ಪರೇಡ್ ಮಾತ್ರ!

ಇಲ್ಲಿ ಆರಂಭವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಟೆಸ್ಟ್‌ನ ಪ್ರಥಮ ದಿನವೇ 23 ವಿಕೆಟ್‌ಗಳು ಪತನವಾದವು. ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 32 ರನ್‌ಗಳಿಂದ ಗೆದ್ದಿದ್ದ ಆತಿಥೇಯ ತಂಡವು ಇಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟರ್‌ಗಳ ಸ್ವರ್ಗವೆಂದೇ ಬಿಂಬಿಸಲಾಗಿದ್ದ ಪಿಚ್‌ನಲ್ಲಿ ಎಲ್ಲವೂ ತಿರುವುಮುರುವಾಯಿತು.

ಭಾರತದ ವೇಗಿ ಮೊಹಮ್ಮದ್ ಸಿರಾಜ್ (15ಕ್ಕೆ6) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ 55 ರನ್ ಗಳಿಸಿ ಆಲೌಟ್ ಅಯಿತು. 121 ನಿಮಿಷದಲ್ಲಿ ಆತಿಥೇಯರ ಮೊದಲ ಇನಿಂಗ್ಸ್‌ ಮುಕ್ತಾಯವಾಯಿತು.

ಊಟದ ವಿರಾಮದ ನಂತರ ಇನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್‌ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 98 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಮುಕ್ತಾಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 62 ರನ್‌ ಗಳಿಸಿದೆ. ಈ ಇನಿಂಗ್ಸ್‌ನಲ್ಲಿ ಮುಕೇಶ್ ಕುಮಾರ್ (25ಕ್ಕೆ2) ಆತಿಥೇಯರಿಗೆ ಆರಂಭಿಕ ಪೆಟ್ಟುಕೊಟ್ಟರು. 

ಸೊನ್ನೆಗೆ ಆರು ವಿಕೆಟ್:

ಒಂದು ಹಂತದಲ್ಲಿ ಭಾರತ ತಂಡವು ಉತ್ತಮ ಮೊತ್ತದ ಮುನ್ನಡೆ ಗಳಿಸುವ ಭರವಸೆ ಮೂಡಿಸಿತ್ತು. ಆದರೆ ನಾಟಕೀಯ ತಿರುವು ಕಂಡ ಇನಿಂಗ್ಸ್‌ನಲ್ಲಿ  ‘ವಿಶ್ವದಾಖಲೆಯ ಕುಸಿತ’ ಕಂಡಿತು. 33 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 153 ರನ್‌ ಗಳಿಸಿತ್ತು. ಇದರ ನಂತರದ 11 ಎಸೆತಗಳಲ್ಲಿ ಆರು ವಿಕೆಟ್‌ಗಳು ಪತನ ಗೊಂಡವು. ಈ ಹಂತದಲ್ಲಿ ತಂಡದ ಮೊತ್ತಕ್ಕೆ ಒಂದೂ ರನ್‌ ಸೇರಲಿಲ್ಲ.

ವಿರಾಟ್ ಕೊಹ್ಲಿ (46; 59ಎ, 4X6, 6X1) ಮತ್ತು  ಕೆ.ಎಲ್. ರಾಹುಲ್ (8; 33ಎ) ಇದ್ದರು. ಅವರ ಜೊತೆಯಾಟ ಕುದುರಿತ್ತು.  ಆದರೆ 34ನೇ ಓವರ್‌ನ  ಮೊದಲ ಎಸೆತದಲ್ಲಿ ಕೆಟ್ಟ ಹೊಡೆತವಾಡಿದ ರಾಹುಲ್ ಔಟಾಗುವುದರೊಂದಿಗೆ ಭಾರತ ತಂಡವು ಕುಸಿಯಿತು. ಅದೇ ಓವರ್‌ನಲ್ಲಿ ರಾಹುಲ್ ಸೇರಿದಂತೆ ಒಟ್ಟು ಮೂರು ವಿಕೆಟ್ ಕಬಳಿಸಿದ ಲುಂಗಿ ಗಿಡಿ ಮಿಂಚಿದರು. ನಂತರದ ಓವರ್‌ನಲ್ಲಿ ರಬಾಡ ಅವರು ಕೊಹ್ಲಿ ಮತ್ತು ಪ್ರಸಿದ್ಧಕೃಷ್ಣ ವಿಕೆಟ್‌ಗಳನ್ನು ಗಳಿಸಿದರು. ಸಿರಾಜ್ ರನ್‌ಔಟ್ ಆದರು.

ಇನಿಂಗ್ಸ್ ಆರಂಭದಲ್ಲಿಯೇ ಭಾರತಕ್ಕೆ ಆಘಾತ ಎದುರಾಯಿತು. ಮೂರೇ ಓವರ್‌ನಲ್ಲಿ ರಬಾಡ ಎಸೆತದ ವೇಗ ಅಂದಾಜಿಸುವಲ್ಲಿ ಎಡವಿದ ಯಶಸ್ವಿ ಜೈಸ್ವಾಲ್ ಕ್ಲೀನ್‌ಬೌಲ್ಡ್ ಆದರು. ನಾಯಕ ರೋಹಿತ್ ಶರ್ಮಾ (39; 50ಎ, 4X7) ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶುಭಮನ್ ಗಿಲ್ (36; 55ಎ, 4X5) ಎರಡನೇ ವಿಕೆಟ್ ಜೊತೆಯಾಟದಲ್ಲಿ 55 ರನ್‌ ಸೇರಿಸಿದರು. ರಾಹುಲ್ ಮತ್ತು ಕೊಹ್ಲಿ ಐದನೇ ವಿಕೆಟ್ ಜೊತೆಯಾಟದಲ್ಲಿ 43 ರನ್‌ ಗಳಿಸಿದರು.

ಎಲ್ಗರ್ ಕೊನೆಯ ಇನಿಂಗ್ಸ್:

ವಿದಾಯದ ಪಂದ್ಯವಾಡಿದ ಡೀನ್‌ ಎಲ್ಗರ್ ತಮ್ಮ ವೃತ್ತಿಜೀವನದ ಕೊನೆಯ ಇನಿಂಗ್ಸ್‌ನಲ್ಲಿ 12 ರನ್‌ ಗಳಿಸಿದರು. ಅದರಲ್ಲಿ ಎರಡು ಬೌಂಡರಿಗಳಿದ್ದವು. ಅವರು ಏಡನ್ ಮರ್ಕರಂ ಜೊತೆಗೆ ಮೊದ ವಿಕೆಟ್ ಜೊತೆಯಾಟದಲ್ಲಿ 37 ರನ್‌ ಸೇರಿಸಿದರು.

11ನೇ ಓವರ್‌ನಲ್ಲಿ ಮುಕೇಶ್ ಕುಮಾರ್ ಹಾಕಿದ ಎಸೆತದಲ್ಲಿ ವಿರಾಟ್ ಕೊಹ್ಲಿ ಪಡೆದ ಕ್ಯಾಚ್‌ಗೆ ಎಲ್ಗರ್ ಔಟಾದರು. ಅವರು ಮೊದಲ ಇನಿಂಗ್ಸ್‌ನಲ್ಲಿ 4 ರನ್ ಗಳಿಸಿದ್ದರು. ಭಾರತದ ಎದುರು ಟೆಸ್ಟ್‌ಗಳಲ್ಲಿ ಒಟ್ಟು ಒಂದು ಸಾವಿರ ರನ್‌ ಗಳಿಸಿದ ಬ್ಯಾಟರ್ ಆದರು.

ಪ್ಯಾಲೆಸ್ಟೀನ್ ಬೆಂಬಲಿಗರ ಘೋಷಣೆ

ಕೇಪ್‌ಟೌನ್‌: ಇಸ್ರೇಲ್‌ ಸೇನೆಯನ್ನು ಬೆಂಬಲಿಸಿ ಹೇಳಿಕೆ ನೀಡಿರುವ 19 ವರ್ಷದೊಳಗಿನವ ತಂಡದ ನಾಯಕ ಡೇವಿಡ್‌ ಟೀಗರ್ ಅವರನ್ನು ತಂಡದಿಂದ ಕೈಬಿಡಬೇಕೆಂದು ಆಗ್ರಹಿಸಿ ಪ್ಯಾಲೆಸ್ಟೀನ್ ಪರ ಗುಂಪು, ಎರಡನೇ ಟೆಸ್ಟ್‌ ಆರಂಭಕ್ಕೆ ಮುನ್ನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದ ಹೊರಗೆ ಇಸ್ರೇಲ್‌ ವಿರೋಧಿ ಘೋಷಣೆಗಳನ್ನು ಕೂಗಿತು.

‘ಜನಾಂಗೀಯ ತಾರತಮ್ಯ ಎಸಗುತ್ತಿರುವ ಇಸ್ರೇಲ್‌ ಅನ್ನು ಬಹಿಷ್ಕರಿಸಿ’ ಎಂದು ಪ್ರತಿಭಟನಕಾರರು ಹಿಡಿದಿದ್ದ ಫಲಕಗಳಲ್ಲಿ ಬರೆಯಲಾಗಿತ್ತು. ಸ್ವತಂತ್ರ್ಯ ಪಾಲೆಸ್ಟೀನ್ ಸ್ಥಾಪನೆ ಮಾಡು ವಂತೆಯೂ ಗುಂಪು ಘೋಷಣೆ ಕೂಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT