ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ20 ಕ್ರಿಕೆಟ್‌: ಭಾರತಕ್ಕೆ ಸರಣಿ ಗೆಲುವಿನ ‘ಶ್ರೇಯಸ್ಸು’

ಅಯ್ಯರ್‌, ಜಡೇಜ ಸ್ಫೋಟಕ ಬ್ಯಾಟಿಂಗ್‌; ಮಿಂಚಿದ ಲಂಕಾ ನಾಯಕ ಶನಕ
Last Updated 26 ಫೆಬ್ರುವರಿ 2022, 22:01 IST
ಅಕ್ಷರ ಗಾತ್ರ

ಧರ್ಮಶಾಲ: ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಶ್ರೇಯಸ್ ಅಯ್ಯರ್ ಅವರು ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಮಿಂಚು ಹರಿಸಿದರು. ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜ ಅವರ ಬ್ಯಾಟಿಂಗ್‌ ಸೊಬಗು ಕೂಡ ಮೇಳೈಸಿತು.

ಈ ಮೂವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ಎದುರಿನ ಟ್ವೆಂಟಿ20 ಕ್ರಿಕೆಟ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆಯನ್ನೂ ಗಳಿಸಿತು.

ಆರಂಭಿಕ ಬ್ಯಾಟರ್‌ ಪಾಥುಮ್ ನಿಸಾಂಕ ಮತ್ತು ನಾಯಕ ದಸುನ್ ಶನಕ ಅವರ ದಿಟ್ಟ ಆಟದ ಬಲದಿಂದ ಶ್ರೀಲಂಕಾ ತಂಡ ಭಾರತದ ಎದುರಿನ ಟ್ವೆಂಟಿ20 ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಿದೆ.

ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಅಂಗವಾಗಿ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 183 ರನ್ ಗಳಿಸಿದೆ. ಭಾರತದ ಪರ ದಾಳಿ ನಡೆಸಿದ ಐವರು ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ನಿಸಾಂಕ ಮತ್ತು ಧನುಷ್ಕ ಗುಣತಿಲಕ ಮೊದಲ ವಿಕೆಟ್‌ಗೆ 52 ಎಸೆತಗಳಲ್ಲಿ 67 ರನ್ ಸೇರಿಸಿ ಉತ್ತಮ ಬುನಾದಿ ಹಾಕಿದರು. ರವೀಂದ್ರ ಜಡೇಜ ಅವರು ಗುಣತಿಲಕ ವಿಕೆಟ್ ಪಡೆದು ಈ ಜೊತೆಯಾಟ ಮುರಿದರು.

ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. 35 ರನ್ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಜುವೇಂದ್ರ ಚಾಹಲ್ ಮತ್ತು ಹರ್ಷಲ್ ಪಟೇಲ್ ಕ್ರಮವಾಗಿ ಚರಿತ್ ಅಸಲಂಕ ಮತ್ತು ಕಮಿಲ್ ಮಿಶಾರ ವಿಕೆಟ್ ಪಡೆದರು. ಒಂಬತ್ತು ರನ್ ಗಳಿಸಿದ್ದ ವಿಕೆಟ್ ಕೀಪರ್ ದಿನೇಶ್ ಚಾಂದಿಮಲ್ ಅವರನ್ನು ಜಸ್‌ಪ್ರೀತ್ ಬೂಮ್ರಾ ವಾಪಸ್ ಕಳುಹಿಸಿದರು. ದಿನೇಶ್ ಅವರನ್ನು ತಮ್ಮ ಕೈಗಳಲ್ಲಿ ಬಂದಿಯಾಗಿಸಿದ ರೋಹಿತ್ ಶರ್ಮಾ ಟ್ವೆಂಟಿ20ಯಲ್ಲಿ ಐವತ್ತನೇ ಕ್ಯಾಚ್‌ ಪಡೆದ ಸಾಧನೆ
ಮಾಡಿದರು.

ದಾಸುನ್ ಶಾನಕ ಅವರ ಬ್ಯಾಟಿಂಗ್ ವೈಖರಿ
ದಾಸುನ್ ಶಾನಕ ಅವರ ಬ್ಯಾಟಿಂಗ್ ವೈಖರಿ

ಶತಕದ ಗಡಿ ದಾಟುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡದ ಇನಿಂಗ್ಸ್‌ಗೆ ಪಾಥುಮ್ ನಿಸಾಂಕ ಮತ್ತು ಆರನೇ ಕ್ರಮಾಂಕದ ದಾಸುನ್ ಶಾನಕ ಜೀವ ತುಂಬಿದರು. ವೇಗವಾಗಿ ರನ್ ಗಳಿಸಿದ ಇಬ್ಬರು 58 ರನ್‌ಗಳ ಜೊತೆಯಾಟ ಆಡಿದರು. 11 ಮೋಹಕ ಬೌಂಡರಿಗಳೊಂದಿಗೆ ಮಿಂಚಿದ ಪಾಥುಮ್ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿ ಮರಳಿದರು. 53 ಎಸೆತಗಳಲ್ಲಿ 75 ರನ್ ಗಳಿಸಿದ ಅವರಿಗೆ ಇದು ಟ್ವೆಂಟಿ20ಯಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ.

ಕೊನೆಯ ಓವರ್‌ನಲ್ಲಿ ಶನಕ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಹರ್ಷಲ್ ಪಟೇಲ್ ಹಾಕಿದ ಈ ಓವರ್‌ನ ಕೊನೆಯ ಎರಡು ಎಸೆತಗಳನ್ನು ಅವರು ಸಿಕ್ಸರ್‌ಗೆ ಎತ್ತಿದರು. ಒಂದು ಬೌಂಡರಿ ಕೂಡ ಮೂಡಿ ಬಂದ ಓವರ್‌ನಲ್ಲಿ ಒಟ್ಟು 23 ರನ್‌ಗಳು ಹರಿದುಬಂದವು.

ಕೊನೆಯ ಐದು ಓವರ್‌ಗಳಲ್ಲಿ ತಂಡ 80 ರನ್‌ಗಳನ್ನು ಗಳಿಸಿತು. ಶಾನಕ ಕೇವಲ 19 ಎಸೆತಗಳಲ್ಲಿ 47 ರನ್ ಕಲೆ ಹಾಕಿದರು. ಅವರ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT