ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ಸರಣಿ ಆಡಲು ಗುವಾಹಟಿಗೆ ಬಂದಿಳಿದ ಲಂಕಾ ತಂಡೆ

ಭಾನುವಾರ ಮೊದಲ ಪಂದ್ಯ
Last Updated 2 ಜನವರಿ 2020, 19:31 IST
ಅಕ್ಷರ ಗಾತ್ರ

ಗುವಾಹಟಿ: ಅನುಭವಿ ವೇಗದ ಬೌಲರ್‌ಲಸಿತ್‌ ಮಾಲಿಂಗ ನೇತೃತ್ವದ ಶ್ರೀಲಂಕಾ ಕ್ರಿಕೆಟ್‌ ತಂಡ ಮೂರು ಪಂದ್ಯಗಳ ಟಿ–20 ಸರಣಿಯನ್ನು ಆಡಲು ಗುರುವಾರ ಇಲ್ಲಿಗೆ ಬಂದಿಳಿಯಿತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಬಿಗಿ ಭದ್ರತೆ ಒದಗಿಸಲಾಯಿತು. ಭದ್ರತಾ ಪಡೆಗಳಬೆಂಗಾವಲಿನಲ್ಲಿ ತಂಡ ಹೋಟೆಲಿಗೆ ತೆರಳಿತು. ಭಾರತ ತಂಡ ಶುಕ್ರವಾರ 2–3 ಗುಂಪುಗಳಲ್ಲಿ ಬರಲಿದೆ. ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ.

ಎರಡನೇ ಪಂದ್ಯ ಜನವರಿ 7ರಂದು ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಪುಣೆಯಲ್ಲಿ 10ರಂದು ನಡೆಯಲಿದೆ.

‘ಎರಡೂ ತಂಡಗಳು ಶುಕ್ರವಾರ ಅಭ್ಯಾಸ ನಡೆಸಲಿವೆ’ ಎಂದು ಅಸ್ಸಾಂ ಕ್ರಿಕೆಟ್‌ ಸಂಸ್ಥೆ (ಎಸಿಎ) ಅಧಿಕಾರಿಯೊಬ್ಬರು ತಿಳಿಸಿದರು.

ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಡಿಸೆಂಬರ್‌ನಲ್ಲಿ ಹಿಂಸಾಚಾರ ನಡೆದಿತ್ತು. ರಣಜಿ ಟ್ರೊಫಿ ಪಂದ್ಯಕ್ಕೆ ಮತ್ತು 19 ವರ್ಷದೊಳಗಿನವರ ಕ್ರಿಕೆಟ್‌ ಪಂದ್ಯಗಳಿಗೆ ಕರ್ಫ್ಯೂ ಬಿಸಿ ತಟ್ಟಿತ್ತು.

ಬರ್ಸಪಾರ ಸ್ಟೇಡಿಯಂನಲ್ಲಿ39,500 ಪ್ರೇಕ್ಷಕರಿಗೆ ಸ್ಥಳಾವಕಾಶವಿದ್ದು, 27,000 ಟಿಕೆಟ್‌ಗಳು ಮಾರಾಟವಾಗಿವೆ.

‘ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಪ್ರವಾಸೋದ್ಯಮವೂ ಚೇತರಿಸಿಕೊಳ್ಳುತ್ತಿದೆ. ಜನವರಿ 10 ರಿಂದ ಇಲ್ಲಿ ಖೇಲೊ ಇಂಡಿಯಾ ಗೇಮ್ಸ್‌ ನಡೆಯಲಿದ್ದು, ಏಳು ಸಹಸ್ರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಎಸಿಎ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಸುದ್ದಿಸಂಸ್ಥೆಗೆ ತಿಳಿಸಿದರು.

ಟಿ–20 ವಿಶ್ವಕಪ್‌ಗೆ ತಯಾರಿ ಆರಂಭಿಸಲು ನೆರೆಯ ಎರಡು ರಾಷ್ಟ್ರಗಳಿಗೆ ಈ ಸರಣಿ ನೆರವಾಗಲಿದೆ. ಟಿ–20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಭಾರತ ಅಕ್ಟೋಬರ್‌ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ ಆಡಲಿದೆ. ಅದಕ್ಕೂ ಮೊದಲು, ಚುಟುಕು ಮಾದರಿಯ ಎಂಟು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಐದು ಪಂದ್ಯಗಳು ನ್ಯೂಜಿಲೆಂಡ್‌ ವಿರುದ್ಧವೇ ಇವೆ.

ಭಾರತ ಪ್ರವಾಸಕ್ಕೆ, ಶ್ರೀಲಂಕಾವು ಆಲ್‌ರೌಂಡರ್‌ ಆ್ಯಂಜೆಲೊ ಮ್ಯಾಥ್ಯೂಸ್‌ ಮತ್ತು ಧನಂಜಯ ಡಿಸಿಲ್ವ ಅವರನ್ನು ಕರೆಸಿಕೊಂಡಿದೆ. ಮ್ಯಾಥ್ಯೂಸ್‌, ಕೊನೆಯ ಟಿ–20 ಪಂದ್ಯವನ್ನು 2018ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು.

ಈ ಸರಣಿಯ ಮೂಲಕ ಜಸ್‌ಪ್ರೀತ್ ಬೂಮ್ರಾ ಮತ್ತು ಶಿಖರ್‌ ಧವನ್‌ ಅವರು ಭಾರತ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ.

ಶ್ರೀಲಂಕಾ ತಂಡ: ಲಸಿತ್‌ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕೆ, ಅವಿಷ್ಕಾ ಫರ್ನಾಂಡೊ, ಆ್ಯಂಜೆಲೊ ಮ್ಯಾಥ್ಯೂಸ್‌, ಧಸುನ್‌ ಪೆರೇರಾ, ಕುಸಲ್‌ ಪೆರೇರಾ, ನಿರೋಷನ್‌ ಡಿಕ್ವೆಲ್ಲಾ, ಧನಂಜಯ ಡಿಸಿಲ್ವ, ಇಸುರು ಉದಾನ, ಭಾನುಕ ರಾಜಪಕ್ಷ, ದಸನ್‌ ಫರ್ನಾಂಡೊ, ವನಿದು ರಾಜ, ಲಾಹಿರು ಕುಮಾರ, ಕುಶಲ್‌ ಮೆಂಡಿಸ್‌, ಲಕ್ಷಣ್‌ ಮೂನಕನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT