ಸೋಮವಾರ, ಜನವರಿ 20, 2020
17 °C
ಸುಲಭ ಚೇಸಿಂಗ್ ಲೆಕ್ಕಾಚಾರದಲ್ಲಿದ್ದ ವಿಂಡೀಸ್‌ಗೆ ಬೃಹತ್ ಸವಾಲು ಕೊಟ್ಟ ಭಾರತ

IND vs WI | ರೋಹಿತ್–ರಾಹುಲ್ ದ್ವಿಶತಕ ಜೊತೆಯಾಟ: ವಿಂಡೀಸ್‌ಗೆ 388 ರನ್ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 387 ರನ್ ಕಲೆಹಾಕಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ ಸವಾಲಿನ ಗುರಿಯನ್ನು ನಿರಾಯಾಸವಾಗಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್‌ ತಂಡ, ಎರಡನೇ ಪಂದ್ಯದಲ್ಲಿಯೂ ಚೇಸಿಂಗ್‌ನತ್ತ ಒಲವು ತೋರಿತ್ತು. ಹೀಗಾಗಿ ವಿಂಡೀಸ್‌ ತಂಡದ ನಾಯಕ ಕೀರನ್‌ ಪೊಲಾರ್ಡ್‌ ಟಾಸ್‌ ಗೆದ್ದರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟರು.

ಆದರೆ ಪೊಲಾರ್ಡ್‌ ಲೆಕ್ಕಾಚಾರವನ್ನು ಉಲ್ಟಾ ಮಾಡುವಂತೆ ಬ್ಯಾಟ್ ಬೀಸಿದ ಕೆ.ಎಲ್‌. ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಮೊದಲ ವಿಕೆಟ್‌ಗೆ 37 ಓವರ್‌ಗಳಲ್ಲಿ 227 ರನ್‌ ಜೊತೆಯಾಟ ನೀಡಿದರು. ರಾಹುಲ್‌ 104 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗು 8 ಬೌಂಡರಿ ಸಹಿತ 102 ರನ್‌ ಗಳಿಸಿದರೆ, 138 ಎಸೆತಗಳನ್ನು ಆಡಿದ ರೋಹಿತ್‌ 5 ಸಿಕ್ಸರ್‌ ಮತ್ತು 17 ಬೌಂಡರಿ ಸಹಿತ 159 ರನ್‌ ಕಲೆ ಹಾಕಿದರು.

ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಗಳಿಸಿದ ಶತಕಗಳ ಸಂಖ್ಯೆ 28ಕ್ಕೆ ಏರಿದೆ. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಸಚಿನ್‌ ತೆಂಡೂಲ್ಕರ್‌ (49), ವಿರಾಟ್‌ ಕೊಹ್ಲಿ (43) ಹಾಗೂ ರಿಕಿ ಪಾಂಟಿಂಗ್‌ (30) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400ನೇ ಪಂದ್ಯವಾಡಿದ ನಾಯಕ ವಿರಾಟ್‌ ಕೊಹ್ಲಿ ಸೊನ್ನೆ ಸುತ್ತಿದರು. ಮೊದಲ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾಗಿದ್ದ ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್‌ ಮಾಡಿದರು. ಕೊನೆಯಲ್ಲಿ ಅಕ್ಷರಶಃ ಅಬ್ಬರಿಸಿದ ಈ ಜೊಡಿ ಕೇವಲ 24 ಎಸೆತಗಳಲ್ಲಿ 73 ಗಳಿಸಿ ತಂಡದ ಮೊತ್ತವನ್ನು 360ರ ಗಡಿ ದಾಟಿಸಿತು.

ಕೇವಲ 16 ಎಸೆತಗಳನ್ನು ಎದುರಿಸಿದ ಪಂತ್‌ 4 ಸಿಕ್ಸರ್‌ ಹಾಗೂ 3 ಬೌಂಡರಿ ಸಹಿತ 39 ರನ್‌ ದೋಚಿದರು. ಅಯ್ಯರ್‌ ಕೇವಲ 32 ಎಸೆತಗಳಲ್ಲಿ 53 ರನ್‌ ಗಳಿಸಿದರು. ಅಂತಿಮವಾಗಿ ಭಾರತ 387 ಕಲೆಹಾಕಿತು.

ವಿಂಡೀಸ್‌ ಪರ ಶೆಲ್ಡನ್‌ ಕಾಟ್ರೆಲ್‌ 2, ಹಾಗೂ ನಾಯಕ ಪೊಲಾರ್ಡ್‌, ಕಿಮೊ ಪಾಲ್‌ ಮತ್ತು ಅಲಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು