ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಏಕದಿನ ಕ್ರಿಕೆಟ್‌ ಪಂದ್ಯ: ಹತ್ತನೇ ಸರಣಿ ಜಯದತ್ತ ಭಾರತದ ಚಿತ್ತ

ಕೆ.ಎಲ್‌. ರಾಹುಲ್, ರೋಹಿತ್ ಮೇಲೆ ಕಣ್ಣು
Last Updated 21 ಡಿಸೆಂಬರ್ 2019, 19:55 IST
ಅಕ್ಷರ ಗಾತ್ರ

ಕಟಕ್: ಸಿಡಿಲಬ್ಬರದ ಆರಂಭ ನೀಡುವ ಬ್ಯಾಟಿಂಗ್ ಜೋಡಿ, ಮಧ್ಯಕ್ರಮಾಂಕದಲ್ಲಿಯೂ ರನ್‌ಗಳ ಮಳೆಗರೆಯುವ ಯುವಪ್ರತಿಭೆಗಳು ಮತ್ತು ಆತ್ಮವಿಶ್ವಾಸಭರಿತ ಬೌಲರ್‌ಗಳ ದಂಡು..

ಆತಿಥೇಯ ಭಾರತ ತಂಡದ ಸಾಮರ್ಥ್ಯದ ಅಂಶಗಳು ಇವು. ವಿಶಾಖಪಟ್ಟದಲ್ಲಿ ಈ ಎಲ್ಲ ಶಕ್ತಿಗಳೂ ಭೋರ್ಗರೆದ ಪರಿಗೆ ವೆಸ್ಟ್ ಇಂಡೀಸ್ ಸೋತು ಸುಣ್ಣವಾಗಿತ್ತು. ಅದರಿಂದಾಗಿಯೇ ಭಾನುವಾರ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಕುತೂಹಲ ಕೆರಳಿಸಿದೆ. ಸದ್ಯ 1–1ರ ಸಮಬಲವಾಗಿರುವ ಸರಣಿಯನ್ನು ಜಯಿಸಲು ಉಭಯ ತಂಡಗಳೂ ಸಿದ್ಧವಾಗಿವೆ.

ವೆಸ್ಟ್ ಇಂಡೀಸ್ ವಿರುದ್ಧ ಸತತ ಹತ್ತನೇ ಏಕದಿನ ಸರಣಿ ಗೆದ್ದ ಸಾಧನೆ ದಾಖಲಿಸಲು ಭಾರತ ತಂಡವು ತುದಿಗಾಲಿನಲ್ಲಿ ನಿಂತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ವಿಂಡೀಸ್ ಪಡೆಯು ಅರ್ಹ ಜಯ ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತ ಕೊಟ್ಟ ತಿರುಗೇಟು ಕೂಡ ಭರ್ಜರಿಯಾಗಿತ್ತು. ಕೆ.ಎಲ್‌. ರಾಹುಲ್ ಮತ್ತು ರೋಹಿತ್ ಶರ್ಮಾ ಶತಕ, ಶ್ರೇಯಸ್ ಅಯ್ಯರ್ ಅರ್ಧಶತಕ, ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ಹ್ಯಾಟ್ರಿಕ್‌ ಸಾಧನೆಗಳು ರಂಗೇರಿದ್ದವು. ವಿರಾಟ್ ಕೊಹ್ಲಿ ಮಾತ್ರ ಶೂನ್ಯಕ್ಕೆ ಔಟಾಗಿದ್ದರು.

ಆದರೆ ವಿಂಡೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ವಿರಾಟ್ ಈ ಪಂದ್ಯದಲ್ಲಿ ಲಯಕ್ಕೆ ಮರಳಿದರೆ ಅಚ್ಚರಿಯೇನಿಲ್ಲ. ಕೆರಿಬಿಯನ್ ಬಳಗದ ವಿರುದ್ಧ ಆರು ಶತಕಗಳ ಸಾಧನೆ ಅವರ ಖಾತೆಯಲ್ಲಿದೆ. ಶ್ರೇಯಸ್ ಮತ್ತು ರಿಷಭ್ ಉತ್ತಮ ಲಯದಲ್ಲಿರುವುದರಿಂದ ಅವರೂ ತಂಡದಲ್ಲಿ ಮುಂದುವರಿಯುವುದು ಖಚಿತ. ಸ್ಪಿನ್ನರ್ ಕುಲದೀಪ್ ಯಾದವ್, ಮಧ್ಯಮವೇಗಿ ಮೊಹಮ್ಮದ್ ಶಮಿ, ಜೊತೆಗೆ ನವದೀಪ್ ಸೈನಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ದೀಪಕ್ ಚಾಹರ್ ಗಾಯಗೊಂಡಿರುವುದರಿಂದ ಸೈನಿ ತಂಡ ಸೇರಿದ್ದಾರೆ. ರವೀಂದ್ರ ಜಡೇಜ ಕೂಡ ಮುಂದುವರಿಯಬಹುದು. ಆದ್ದರಿಂದ ಕನ್ನಡಿಗರಾದ ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರಿಗೆ ಸ್ಥಾನ ಸಿಗುವುದು ಅನುಮಾನ. ಹೋದ ಎರಡೂ ಸರಣಿಗಳಲ್ಲಿಯೂ ಮನೀಷ್ ಇದೇ ರೀತಿ ಬೆಂಚ್ ಕಾದಿದ್ದರು.

ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುವ ಪಿಚ್‌ನಲ್ಲಿ ಟಾಸ್ ಜಯಿಸುವ ತಂಡವು ತೆಗೆದುಕೊಳ್ಳುವ ನಿರ್ಧಾರವೂ ಪ್ರಮುಖವಾಗಲಿದೆ. ಹೋದ ಪಂದ್ಯದಲ್ಲಿ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಂಡಿತ್ತು. ಈ ಹಿಂದೆ ಇಲ್ಲಿ ಮೂರು ಪಂದ್ಯಗಳನ್ನು ವಿಂಡೀಸ್ ಆಡಿದೆ. ಆದರೆ ಒಂದೂ ಬಾರಿಯೂ ಜಯಿಸಿಲ್ಲ. ಅಲ್ಲದೇ 13 ವರ್ಷಗಳಿಂದ ಭಾರತದ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿಯೂ ಜಯಸಾಧಿಸಿಲ್ಲ.

ಕೀರನ್ ಪೊಲಾರ್ಡ್‌ ಬಳಗವು ಈ ಪಂದ್ಯ ಮತ್ತು ಸರಣಿ ಗೆದ್ದು ಹೊಸ ಇತಿಹಾಸ ಬರೆಯುವತ್ತ ಚಿತ್ತ ನೆಟ್ಟಿದೆ. ಐಪಿಎಲ್‌ ಹರಾಜಿನಲ್ಲಿ ಭರ್ಜರಿ ಮೊತ್ತ ಗಳಿಸಿದ ಖುಷಿಯಲ್ಲಿರುವ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್, ವೇಗಿ ಶೆಲ್ಡನ್ ಕಾಟ್ರೆಲ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಎವಿನ್ ಲೂಯಿಸ್, ಶಾಯ್ ಹೋಪ್, ನಿಕೊಲಸ್ ಪೂರನ್ ಮತ್ತು ಪೊಲಾರ್ಡ್ ಬ್ಯಾಟಿಂಗ್ ವಿಭಾಗದ ಭರವಸೆಯಾಗಿದ್ದಾರೆ. ಬೌಲಿಂಗ್‌ನಲ್ಲಿ ಕೆಸ್ರಿಕ್ ವಿಲಿಯಮ್ಸ್, ಅಲ್ಜರಿ ಜೋಸೆಫ್, ಕೀಮೊ ಪಾಲ್ ಅವರು ತಮ್ಮ ಬೌಲಿಂಗ್ ಅಸ್ತ್ರಗಳನ್ನು ಇನ್ನಷ್ಟು ಹರಿತಗೊಳಿಸಿಕೊಳ್ಳುವ ಅಗತ್ಯವಿದೆ.

ಈ ಪಂದ್ಯದೊಂದಿಗೆ ವಿಂಡೀಸ್ ತಂಡದ ಭಾರತ ಪ್ರವಾಸವು ಅಂತ್ಯಗೊಳ್ಳಲಿದೆ. ಹೋದ ಎರಡು ತಿಂಗಳಿಂದ ಭಾರತದಲ್ಲಿರುವ ತಂಡವು ಅಫ್ಗಾನಿಸ್ಥಾನ ಮತ್ತು ಭಾರತದ ವಿರುದ್ಧದ ಟಿ20 ಸರಣಿಗಳಲ್ಲಿ ಸೋತಿದೆ. ಇದೀಗ ಏಕದಿನ ಸರಣಿ ಜಯದೊಂದಿಗೆ ಸ್ವದೇಶಕ್ಕೆ ಮರಳುವ ತವಕದಲ್ಲಿದೆ.

ಹಸಿ ಚೆಂಡಿನಲ್ಲಿ ಅಭ್ಯಾಸ!
ಭಾರತ ತಂಡದ ಫೀಲ್ಡಿಂಗ್‌ ಲೋಪಗಳು ಇನ್ನೂ ಪೂರ್ಣ ರೀತಿಯಲ್ಲಿ ಸುಧಾರಣೆಯಾಗಿಲ್ಲ. ಎರಡೂ ಪಂದ್ಯಗಳಲ್ಲಿ ಬಹಳಷ್ಟು ಲೋಪಗಳು ಕಂಡುಬಂದಿವೆ. ಆದ್ದರಿಂದ ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್ ಸುಧಾರಣೆಗೆ ಕೋಚ್ ಆರ್. ಶ್ರೀಧರ್ ಶನಿವಾರ ಶಿಸ್ತಿನ ಅಭ್ಯಾಸ ಮಾಡಿಸಿದರು.

ಕಟಕ್‌ನಲ್ಲಿ ರಾತ್ರಿಯ ವೇಳೆ ಹೆಚ್ಚು ಇಬ್ಬನಿ ಇರುತ್ತದೆ. ಆ ಸಮಯದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆಯುವುದು ತುಸು ಕಷ್ಟದಾಯಕ. ಆದ್ದರಿಂದ ಚೆಂಡನ್ನು ನೀರಿನಲ್ಲಿ ನೆನಸಿಯೇ ಅಭ್ಯಾಸ ಮಾಡಿಸಿದರು.

‘ಶ್ರೀಧರ್‌ ಇವತ್ತು ಚೆಂಡನ್ನು ಒದ್ದೆ ಮಾಡಿಯೇ ಕ್ಯಾಚಿಂಗ್ ಅಭ್ಯಾಸ ಮಾಡಿಸಿದರು. ಎಲ್ಲ ರೀತಿಯ ಪರಿಸ್ಥಿತಿಗಳಿಗೂ ನಾವು ಸಿದ್ಧರಾಗಬೇಕು. ಆದ್ದರಿಂದ ಕಠಿಣ ಅಭ್ಯಾಸ ಅಗತ್ಯ’ ಎಂದು ಆಟಗಾರ ಶ್ರೇಯಸ್ ಅಯ್ಯರ್ ಹೇಳಿದರು.

ಬಾರಾಬತಿಯಲ್ಲಿ ಬದಲಾಗುವುದೇ ಕೊಹ್ಲಿ ಅದೃಷ್ಟ?
ಕಟಕ್ (ಪಿಟಿಐ): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಬಾರಾಬತಿ ಕ್ರೀಡಾಂಗಣ ಅಷ್ಟೇನೂ ಅದೃಷ್ಟದ ತಾಣವಲ್ಲ. ಅವರು ಇಲ್ಲಿ ಆಡಿರುವ ನಾಲ್ಕು ಏಕದಿನ ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 34 ರನ್‌ಗಳನ್ನು ಮಾತ್ರ.

ಭಾನುವಾರ ನಡೆಯುವ ಪಂದ್ಯದಲ್ಲಿ ಅವರು ಇಲ್ಲಿ ಮಿಂಚುವರೇ ಎಂಬ ಕುತೂಹಲ ಈಗ ಮೂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಗಳಿಸಿರುವ ಬ್ಯಾಟ್ಸ್‌ಮನ್ ಕೊಹ್ಲಿ ಬಾರಾಬತಿಯಲ್ಲಿ ಹೊಸ ಸಾಧನೆ ಮಾಡುವರೇ ಕಾದು ನೋಡಬೇಕು. ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ (4 ಮತ್ತು 0) ಕೂಡ ಅವರ ಬ್ಯಾಟ್‌ನಿಂದ ರನ್‌ಗಳು ಹರಿದಿಲ್ಲ. ಆದ್ದರಿಂದ ಅವರು ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT