ಬುಧವಾರ, ಸೆಪ್ಟೆಂಬರ್ 28, 2022
27 °C

IND vs WI ಟಿ20 ಸರಣಿ: ಮತ್ತೆ ಮುಗ್ಗರಿಸಿದ ವಿಂಡೀಸ್, ಭಾರತಕ್ಕೆ 4–1 ಅಂತರದ ಜಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಫ್ಲಾರಿಡಾ: ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ಎದುರಿನ ಐದನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 88 ರನ್‌ಗಳ ಜಯ ಸಾಧಿಸಿತು.

ಇಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 188 ರನ್ ಕಲೆಹಾಕಿತು. ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಇಶಾನ್‌ ಕಿಶನ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಶ್ರೇಯಸ್‌ ಅಯ್ಯರ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

40 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 64 ರನ್‌ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ದೀಪಕ್‌ ಹೂಡಾ (38) ಹಾಗೂ ತಂಡ ಮುನ್ನಡೆಸಿದ ಹಾರ್ದಿಕ್‌ ಪಾಂಡ್ಯ (28) ಸಹ ಉತ್ತಮ ಆಟವಾಡಿದರು.

ಭಾರತದ ಸವಾಲಿನ ಗುರಿ ಎದುರು ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌ ಬ್ಯಾಟರ್‌ಗಳನ್ನು ಭಾರತದ ಸ್ಪಿನ್ನರ್‌ಗಳು ಇನ್ನಿಲ್ಲದಂತೆ ಕಾಡಿದರು. 35 ಎಸೆತಗಳಲ್ಲಿ 56 ರನ್ ಗಳಿಸಿದ ಶಿಮ್ರೊನ್‌ ಹೆಟ್ಮಯೆರ್‌ ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿ ಬರಲಿಲ್ಲ.

ಹೀಗಾಗಿ ಆತಿಥೇಯ ತಂಡ 15.4 ಓವರ್‌ಗಳಲ್ಲಿ 100 ರನ್‌ಗಳಿಸಿದ್ದಾಗಲೇ ಆಲೌಟಾಯಿತು.

ಕೇವಲ 2.4 ಓವರ್‌ ಬೌಲಿಂಗ್‌ ಮಾಡಿದ ರವಿ ಬಿಷ್ಣೋಯಿ 16 ರನ್‌ ನೀಡಿ 4 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ತಲಾ 3 ವಿಕೆಟ್ ಹಂಚಿಕೊಂಡರು.

ಇದರೊಂದಿಗೆ ಭಾರತ ತಂಡ ಐದು ಪಂದ್ಯಗಳ ಸರಣಿಯನ್ನು ಭಾರತ 4–1 ಅಂತರದಿಂದ ಜಯಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು