ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿಗೆ ‘ಮೊದಲ’ ಗೆಲುವೇ ಸೋಪಾನ

ಆಸ್ಟ್ರೇಲಿಯಾ ಎದುರಿನ ಟೆಸ್ಟ್: ಹೋರಾಟದ ಮೂಲಕ ಆತಂಕ ಮೂಡಿಸಿದ ಬಾಲಂಗೋಚಿಗಳು
Last Updated 10 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಅಡಿಲೇಡ್‌: ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಗೆದ್ದು ‘ದಾಖಲೆ’ ನಿರ್ಮಿಸಿರುವ ಭಾರತ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಆತಿಥೇಯರ ಸವಾಲನ್ನು ಮೆಟ್ಟಿ ನಿಲ್ಲುವ ಭರವಸೆಯಲ್ಲಿದೆ.

ಸೋಮವಾರ ಮುಕ್ತಾಯಗೊಂಡ ಪಂದ್ಯದ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ‘ಆರಂಭದಲ್ಲೇ ಆಘಾತ ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಸುಮ್ಮನಿರಲಾರದು. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಬಲ ಪಡೆದುಕೊಂಡು ಅಂಗಣಕ್ಕೆ ಇಳಿಯಲಿದ್ದೇವೆ’ ಎಂದರು.

323 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ನಾಲ್ಕನೇ ದಿನವಾದ ಭಾನುವಾರ ನಾಲ್ಕು ವಿಕೆಟ್‌ಗಳಿಗೆ 104 ರನ್ ಗಳಿಸಿ ಸಂಕಷ್ಟದಲ್ಲಿದ್ದರು. 11 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಟ್ರಾವಿಸ್ ಹೆಡ್‌ ಅವರನ್ನು ಸೋಮವಾರ ಬೆಳಿಗ್ಗೆ ಬೇಗನೇ ಔಟ್‌ ಮಾಡುವಲ್ಲಿ ಯಶಸ್ವಿಯಾದ ಭಾರತದ ಬೌಲರ್‌ಗಳನ್ನು ಶಾನ್ ಮಾರ್ಷ್ (60; 166 ಎಸೆತ, 5 ಬೌಂಡರಿ) ಮತ್ತು ನಾಯಕ ಟಿಮ್‌ ಪೇನ್ (41; 73 ಎಸೆತ, 4 ಬೌಂಡರಿ) ಜೋಡಿ ಸುಸ್ತಾಗಿಸಿತು. ಆರನೇ ವಿಕೆಟ್‌ಗೆ 41 ರನ್ ಸೇರಿಸಿದ ಇವರಿಬ್ಬರು ಕೊಹ್ಲಿ ಪಾಳಯದಲ್ಲಿ ಆತಂಕ ಮೂಡಿಸಿದರು. ಇವರಿಬ್ಬರ ವಿಕೆಟ್ ಉರುಳಿಸಿದ ಜಸ್‌ಪ್ರೀತ್ ಬೂಮ್ರಾ ಮಹತ್ವದ ತಿರುವು ನೀಡಿದರು.

ಆದರೆ ಪ್ಯಾಟ್ ಕುಮಿನ್ಸ್‌ ಮತ್ತು ಮಿಷೆಲ್ ಮಾರ್ಷ್‌ ಛಲದಿಂದ ಕಾದಾಡಿದರು. ಹೀಗಾಗಿ ಪಂದ್ಯ ಕುತೂಹಲಕಾರಿ ಘಟ್ಟದತ್ತ ಸಾಗಿತು. ಕುಮಿನ್ಸ್ ಅವರನ್ನು ಬೂಮ್ರಾ ಮತ್ತು ಮಾರ್ಷ್ ಅವರನ್ನು ಮೊಹಮ್ಮದ್ ಶಮಿ ವಾಪಸ್ ಕಳುಹಿಸಿದರು. 10ನೇ ಕ್ರಮಾಂಕದ ನೇಥನ್ ಲಿಯಾನ್‌ ಅವರು ಕೊನೆಯ ಬ್ಯಾಟ್ಸ್‌ಮನ್ ಜೋಶ್ ಹ್ಯಾಜಲ್‌ವುಡ್ ಅವರೊಂದಿಗೆ 31 ರನ್ ಸೇರಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

ಅಶ್ವಿನ್ ಹಾಕಿದ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡಲು ಮುಂದಾದ ಹ್ಯಾಜಲ್‌ವುಡ್‌ ಸ್ಲಿಪ್‌ನಲ್ಲಿದ್ದ ಕೆ.ಎಲ್‌.ರಾಹುಲ್‌ ಅವರಿಗೆ ಕ್ಯಾಚ್ ನೀಡಿ ಮರಳುವುದರೊಂದಿಗೆ ಆತಿಥೇಯರ ಹೋರಾಟಕ್ಕೆ ತೆರೆ ಬಿತ್ತು.

‘ಮೊದಲ ಪಂದ್ಯ ಗೆದ್ದಿರುವುದು ಖುಷಿ ತಂದಿದೆ ನಿಜ. ಆದರೆ ತಂಡ ಇಷ್ಟಕ್ಕೇ ತೃಪ್ತಿಪಟ್ಟಿಲ್ಲ. ಈ ಗೆಲುವನ್ನು ಸೋಪಾನವಾಗಿರಿಸಿಕೊಂಡು ಸರಣಿ ಜಯದ ಕಡೆಗೆ ಹೆಜ್ಜೆ ಇರಿಸಲಿದ್ದೇವೆ’ ಎಂದು ಕೊಹ್ಲಿ ಹೇಳಿದರು.

ನಾಲ್ಕು ವರ್ಷಗಳ ಹಿಂದೆ... 2014ರಲ್ಲಿ ನಡೆದ ಸರಣಿಯ ಮೊದಲ ಪಂದ್ಯವೂ ಅಡಿಲೇಡ್‌ನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ಗೆಲುವಿನ ಅಂಚಿನಲ್ಲಿ ಎಡವಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ ‘ಅಂದು 48 ರನ್‌ಗಳಿಂದ ಸೋತಿದ್ದೆವು. ಈ ಬಾರಿ 31 ರನ್‌ಗಳಿಂದ ಅವರನ್ನು ಮಣಿಸಿದ್ದೇವೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಆರನೇ ಟೆಸ್ಟ್ ಪಂದ್ಯವನ್ನು ಗೆದ್ದಿದ್ದೇವೆ. ಇದು ತಂಡದ ನೈತಿಕ ಬಲವನ್ನು ಹೆಚ್ಚಿಸಿದೆ’ ಎಂದರು.

‘ಮೊದಲ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಚೇತೇಶ್ವರ ಪೂಜಾರ ಭಾರತಕ್ಕೆ ಬಲ ತುಂಬಿದ್ದರು. ಮುಂದಿನ ನಾಲ್ಕು ದಿನಗಳಲ್ಲಿ ನಾವೇ ಮೇಲುಗೈ ಸಾಧಿಸಿದೆವು. ಇಂಥ ಹೋರಾಟಕಾರಿ ಮನೋಭಾವ ತಂಡದ ಆತ್ಮಸ್ಥೈರ್ಯ ಹೆಚ್ಚಿಸಿದೆ’ ಎಂದು ಕೊಹ್ಲಿ ನುಡಿದರು.

ರವಿಶಾಸ್ತ್ರಿ ‘ಬಾಯಿಗೆ’ ಬಂದ ಮಾತಿನ ಅವಾಂತರ
ಪಂದ್ಯ ಗೆದ್ದ ನಂತರ ತಂಡದ ಕೊಚ್ ರವಿಶಾಸ್ತ್ರಿ ಭಾವೋದ್ವೇಗದಿಂದ ಆಡಿದ ಮಾತು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಹಲವರು ಶಾಸ್ತ್ರಿ ಅವರ ಮೇಲೆ ಮಾತಿನ ಬಾಣ ಬಿಟ್ಟಿದ್ದಾರೆ.

ಪಂದ್ಯದ ಬಗ್ಗೆ ಸುನಿಲ್ ಗಾವಸ್ಕರ್‌, ಮೈಕಲ್ ಕ್ಲಾರ್ಕ್‌ ಮತ್ತು ಮಾರ್ಕ್ ಬುಚರ್ ಅವರು ಟಿವಿ ಚನಲ್‌ನಲ್ಲಿ ಚರ್ಚೆ ನಡೆಸುತ್ತಿದ್ದರು. ಅವರೊಂದಿಗೆ ನೇರ ಪ್ರಸಾರದಲ್ಲಿ ಮಾತನಾಡಿದ ಶಾಸ್ತ್ರಿ ಪಂದ್ಯದ ಕೊನೆಯಲ್ಲಿ ಅನುಭವಿಸಿದ ಆತಂಕವನ್ನು ಹಿಂದಿಯಲ್ಲಿ ವಿವರಿಸಿ ‘ಥೋಡಿ ದೇರ್ ಕೇಲಿಯೇ ವಹಾಂ ...ಮೂಹ್‌ ಮೇ ಥಾ’ ಎಂದು ಹೇಳಿದರು. ಇಲ್ಲಿ ‘ಗಾ’ ದಿಂದ ಆರಂಭವಾಗುವ ಪದವನ್ನು ಬಳಸಿದ್ದರು.

*
ಪಂದ್ಯದ ಸೋಲು ಬೇಸರ ತಂದಿದೆ. ಆದರೆ ಕೊನೆಯ ದಿನ ತಂಡ ಹೋರಾಡಿದ ರೀತಿ ಅನನ್ಯವಾಗಿದ್ದು ಭರವಸೆ ಮೂಡಿಸಿದೆ.
-ಟಿಮ್‌ ಪೇನ್‌, ಆಸ್ಟ್ರೇಲಿಯಾ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT