ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್‌ಇಂಡೀಸ್‌ ಎದುರು ಎರಡನೇ ಟ್ವೆಂಟಿ–20: ಮತ್ತೊಂದು ಗೆಲುವಿನತ್ತ ಭಾರತದ ಚಿತ್ತ

ದಿನೇಶ್‌ ಕಾರ್ತಿಕ್‌, ಕೃಣಾಲ್‌ ಪಾಂಡ್ಯ ಆಕರ್ಷಣೆ
Last Updated 5 ನವೆಂಬರ್ 2018, 18:08 IST
ಅಕ್ಷರ ಗಾತ್ರ

ಲಖನೌ: ಭಾರತದ ‘ಕ್ರಿಕೆಟ್‌ ಕಾಶಿ’ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಮೊದಲ ಹೋರಾಟದಲ್ಲಿ ವೆಸ್ಟ್‌ ಇಂಡೀಸ್‌ ಎದುರು ಗೆದ್ದು ಸತತ ನಾಲ್ಕು ಪಂದ್ಯಗಳ ಸೋಲಿಗೆ ಮುಯ್ಯಿ ತೀರಿಸಿಕೊಂಡಿದ್ದ ಭಾರತ ತಂಡ ಈಗ ಮತ್ತೊಂದು ಗೆಲುವಿನತ್ತ ಚಿತ್ತ ಹರಿಸಿದೆ.

ಎಕಾನ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಎರಡನೇ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಬಳಗ ಕೆರಿಬಿಯನ್ ನಾಡಿನ ತಂಡವನ್ನು ಮಣಿಸಿ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

ವಿರಾಟ್‌ ಕೊಹ್ಲಿ ಮತ್ತು ಮಹೇಂದ್ರ ಸಿಂಗ್‌ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ, ಮೊದಲ ಪಂದ್ಯದಲ್ಲಿ ಪ್ರಯಾಸದ ಜಯ ದಾಖಲಿಸಿತ್ತು.

ನಾಯಕ ರೋಹಿತ್‌ ಮತ್ತು ಶಿಖರ್‌ ಧವನ್‌ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರು. ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ಕೂಡಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿರಲಿಲ್ಲ. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಆಟವೂ ನಡೆದಿರಲಿಲ್ಲ.

ಸ್ಫೋಟಕ ಆಟಕ್ಕೆ ಹೆಸರಾಗಿರುವ ರೋಹಿತ್‌ ಮತ್ತು ಧವನ್‌ ಎಕಾನ ಮೈದಾನದಲ್ಲಿ ರನ್‌ ಮಳೆ ಸುರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಜೋಡಿ ಹಾಕಿಕೊಡುವ ಭದ್ರ ಬುನಾದಿಯ ಮೇಲೆ ರನ್‌ ಗೋಪುರ ಕಟ್ಟಲು ರಾಹುಲ್‌, ಮನೀಷ್‌ ಮತ್ತು ರಿಷಭ್‌ ಅವರು ಹಾತೊರೆಯುತ್ತಿದ್ದಾರೆ.

ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರದಾನವಾಗಿದೆ. ಮೊದಲ ಪಂದ್ಯದಲ್ಲಿ ಕಾರ್ತಿಕ್‌ ಅಜೇಯ 31ರನ್‌ ಗಳಿಸಿ ಆತಿಥೇಯರನ್ನು ಗೆಲುವಿನ ದಡ ಸೇರಿಸಿದ್ದರು. ಕೃಣಾಲ್‌ ಪಾಂಡ್ಯ ಕೂಡಾ ತಂಡದ ಭರವಸೆಯಾಗಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಆಲ್‌ರೌಂಡ್‌ ಆಟ ಆಡಿ ಗಮನ ಸೆಳೆದಿರುವ ಕೃಣಾಲ್‌, ಮತ್ತೊಮ್ಮೆ ಮೋಡಿ ಮಾಡಲು ಕಾತರರಾಗಿದ್ದಾರೆ.

ಬೌಲಿಂಗ್‌ನಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಆರಂಭಿಕ ಹಣಾಹಣಿಯಲ್ಲಿ ಬ್ರಾಥ್‌ವೇಟ್‌ ಬಳಗವನ್ನು 109ರನ್‌ಗಳಿಗೆ ನಿಯಂತ್ರಿಸಿದ್ದು ಇದಕ್ಕೆ ಸಾಕ್ಷಿ.

ಎಡಗೈ ವೇಗಿ ಖಲೀಲ್‌ ಅಹ್ಮದ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ, ಯಾರ್ಕರ್‌ ಎಸೆತಗಳ ಮೂಲಕ ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಕಾಯುತ್ತಿದ್ದಾರೆ. ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಮೇಲೂ ಅಪಾರ ನಿರೀಕ್ಷೆ ಇದೆ. ಅನಾರೋಗ್ಯದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಭುವನೇಶ್ವರ್‌ ಕುಮಾರ್‌ ಎರಡನೇ ಹೋರಾಟದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ಆಡುವ ಬಳಗದಲ್ಲಿ ಸ್ಥಾನ ಗಳಿಸಿದರೆ ಉಮೇಶ್‌ ಯಾದವ್‌ ‘ಬೆಂಚ್‌’ ಕಾಯಬೇಕಾಗುತ್ತದೆ.

ತಿರುಗೇಟು ನೀಡುವ ವಿಶ್ವಾಸದಲ್ಲಿ ವಿಂಡೀಸ್‌: ಈಗಾಗಲೇ ಟೆಸ್ಟ್‌ ಮತ್ತು ಏಕದಿನ ಸರಣಿಗಳನ್ನು ಸೋತಿರುವ ವಿಂಡೀಸ್‌ ತಂಡ ಚುಟುಕು ಸರಣಿ ಗೆದ್ದು ಗೌರವ ಉಳಿಸಿಕೊಳ್ಳುವ ಆಲೋಚನೆ ಹೊಂದಿದೆ. ಈ ನಿಟ್ಟಿನಲ್ಲಿ ಮಂಗಳವಾರದ ಪಂದ್ಯ ಬ್ರಾಥ್‌ವೇಟ್‌ ಪಡೆಯ ಪಾಲಿಗೆ ಅತ್ಯಂತ ಮಹತ್ವದ್ದೆನಿಸಿದೆ.

ಈಡನ್‌ ಗಾರ್ಡನ್ಸ್‌ನಲ್ಲಿ ಕೆರಿಬಿಯನ್‌ ನಾಡಿನ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡಿತ್ತು. ಕೀರನ್‌ ಪೊಲಾರ್ಡ್‌, ಡರೆನ್‌ ಬ್ರಾವೊ ಮತ್ತು ದಿನೇಶ್‌ ರಾಮ್ದಿನ್‌ ಅವರಂತಹ ಅನುಭವಿಗಳು ವಿಕೆಟ್‌ ನೀಡಲು ಅವಸರಿಸಿದ್ದರು!

ರಾವಮನ್‌ ಪೋವೆಲ್‌, ಶಾಯ್‌ ಹೋಪ್‌ ಅವರೂ ರನ್‌ ಗಳಿಸಲು ಪರದಾಡಿದ್ದರು. ನಾಯಕ ಕಾರ್ಲೋಸ್‌ ಕೂಡಾ ವೈಫಲ್ಯ ಕಂಡಿದ್ದರು. ಇವರ ಮೇಲೆ ಇತರರಿಗಿಂತ ತುಸು ಹೆಚ್ಚು ಜವಾಬ್ದಾರಿ ಇದ್ದು ಇದನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಹೀಗಾದಲ್ಲಿ ಮಾತ್ರ ತಂಡ ಗೆಲುವಿನ ಕನಸು ಕಾಣಬಹುದು.

ಬೌಲಿಂಗ್‌ನಲ್ಲಿ ವಿಂಡೀಸ್‌ ಬಲಯುತವಾಗಿದೆ. ಒಶಾನೆ ಥಾಮಸ್‌ ಮತ್ತು ಬ್ರಾಥ್‌ವೇಟ್‌ ಮೊದಲ ಪಂದ್ಯದಲ್ಲಿ ತಲಾ ಎರಡು ವಿಕೆಟ್‌ ಉರುಳಿಸಿದ್ದರು. ಖಾರಿ ಪಿಯೆರೆ ಕೂಡಾ ಮಿಂಚಿದ್ದರು. ಇವರು ಮತ್ತೊಮ್ಮೆ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ತಂಡಗಳು ಇಂತಿವೆ
ಭಾರತ:
ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್‌), ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಕೃಣಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಕೆ.ಖಲೀಲ್ ಅಹ್ಮದ್‌, ಉಮೇಶ್‌ ಯಾದವ್‌ ಮತ್ತು ಶಹಬಾಜ್‌ ನದೀಮ್‌.

ವೆಸ್ಟ್‌ ಇಂಡೀಸ್‌: ಕಾರ್ಲೋಸ್‌ ಬ್ರಾಥ್‌ವೇಟ್‌ (ನಾಯಕ), ಡರೆನ್‌ ಬ್ರಾವೊ, ಶಿಮ್ರೊನ್‌ ಹೆಟ್ಮೆಯರ್‌, ಶಾಯ್‌ ಹೋಪ್‌, ಒಬೆದ್‌ ಮೆಕ್‌ಕಾಯ್‌, ಕೀಮೊ ಪಾಲ್‌, ಖಾರಿ ಪಿಯೆರೆ, ಕೀರನ್‌ ‍‍ಪೊಲಾರ್ಡ್‌, ನಿಕೊಲಸ್‌ ಪೂರಣ್‌, ರಾವಮನ್‌ ಪೋವೆಲ್‌, ದಿನೇಶ್‌ ರಾಮ್ದಿನ್‌ (ವಿಕೆಟ್‌ ಕೀಪರ್‌), ಶೆರ್ಫಾನೆ ರುದರ್‌ಫೋರ್ಡ್‌ ಮತ್ತು ಒಶಾನೆ ಥಾಮಸ್‌.

ಆರಂಭ: ರಾತ್ರಿ 7
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT