ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟೆಸ್ಟ್ ಕ್ರಿಕೆಟ್ ಇಂದಿನಿಂದ: ಜಯದ ದಾಖಲೆ ಮೇಲೆ ಹರ್ಮನ್ ಪಡೆ ಕಣ್ಣು

ಭಾರತ–ಆಸ್ಟ್ರೇಲಿಯಾ ಹಣಾಹಣಿ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಗುರುವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆಡಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ  ಆಸ್ಟ್ರೇಲಿಯಾ ಎದುರು ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಆತಿಥೇಯ ಬಳಗವಿವೆ. ಕಳೆದ 46 ವರ್ಷಗಳಲ್ಲಿ ಉಭಯ ತಂಡಗಳು ಹತ್ತು ಬಾರಿ ಮುಖಾಮುಖಿಯಾಗಿವೆ.  ಆಸ್ಟ್ರೇಲಿಯಾ ನಾಲ್ಕು ಬಾರಿ ಜಯಿಸಿದೆ. ಆರು ಪಂದ್ಯಗಳು ಡ್ರಾ ಆಗಿವೆ.

ಉಭಯ ತಂಡಗಳು ಎರಡು ವರ್ಷಗಳ ಹಿಂದೆ ಕೆರಾರಾದಲ್ಲಿ ನಡೆದಿದ್ದ ಟೆಸ್ಟ್ ನಲ್ಲಿ ಹಣಾಹಣಿ ನಡೆಸಿದ್ದವು. ಅದರಲ್ಲಿ ಸ್ಮೃತಿ ಮಂದಾನ ಶತಕ ಗಳಿಸಿದ್ದರು. ಪಂದ್ಯ ಡ್ರಾ ಆಗಿತ್ತು. ಮೊದಲ ಜಯ ದಾಖಲಿಸಲು ಭಾರತಕ್ಕೆ ಈಗ ಉತ್ತಮ ಅವಕಾಶವಿದೆ. 

ಈಚೆಗೆ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ್ದ ಭಾರತ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಆ ಪಂದ್ಯದಲ್ಲಿ ಮಿಂಚಿದ್ದ ದೀಪ್ತಿ ಶರ್ಮಾ ಅವರ ಸ್ಪಿನ್ ದಾಳಿಯು ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲಾಗುವ ಸಾಧ್ಯತೆ ಇದೆ. ಪಂದ್ಯ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದ ಪಿಚ್ ಕೂಡ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ.

ಆತಿಥೇಯ ತಂಡದ ಮಧ್ಯಮವೇಗಿ ರೇಣುಕಾ ಸಿಂಗ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರಿಗೆ ಪೂಜಾ ವಸ್ತ್ರಾಕರ್ ಕೂಡ ಉತ್ತಮ ಬೆಂಬಲ ನೀಡಬಲ್ಲರು. ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದೆ. ಇಂಗ್ಲೆಂಡ್ ಎದುರು ಜೆಮಿಮಾ ರಾಡ್ರಿಗಸ್, ಯಷ್ಟಿಕಾ ಭಾಟಿಯಾ ಮತ್ತು ನಾಯಕಿ ಹರ್ಮನ್ ಅಮೋಘ ಬ್ಯಾಟಿಂಗ್ ಮಾಡಿದ್ದರು.

ಆ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಮೈಸೂರಿನ ಶುಭಾ ಸತೀಶ್ ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಹರ್ಲಿನ್ ಡಿಯೊಲ್ ಸ್ಥಾನ ಪಡೆಯಬಹುದು.

40 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮಹಿಳಾ ತಂಡವು ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಆಡಿತ್ತು. ಇದೇ ವಾಂಖೆಡೆಯಲ್ಲಿ ಆ ಪಂದ್ಯ ನಡೆದಿತ್ತು. ದೀರ್ಘ ಅವಧಿಯ ನಂತರ ತಂಡವು ಇಲ್ಲಿಗೆ ಬಂದಿದೆ. ಈಚೆಗೆ ಮೆಗ್‌ಲ್ಯಾನಿಂಗ್‌ ನಿವೃತ್ತಿಯ ನಂತರ  ನಾಯಕಿಯಾಗಿ  ನೇಮಕವಾಗಿರುವ ಅಲೀಸಾ ಹೀಲಿ ಅವರಿಗೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಈ ಪಂದ್ಯವು ಮಹತ್ವದಾಗಿದೆ. ಆ್ಯಷ್ಲೆ ಗಾರ್ಡನರ್, ಬೆತ್ ಮೂನಿ ಮತ್ತು ತಹಿಲಾ ಮೆಕ್‌ಗ್ರಾ ಅವರಂತಹ ಅನುಭವಿಗಳು ಇರುವುದರಿಂದ ಭಾರತ ತಂಡದ ಪೈಪೋಟಿ ಎದುರಿಸಿ ನಿಲ್ಲುವ ಉತ್ಸಾಹದಲ್ಲಿದೆ. 

ಆಸ್ಟ್ರೇಲಿಯಾ ತಂಡದ ನಾಯಕಿ ಅಲೀಸಾ ಹೀಲಿ
ಆಸ್ಟ್ರೇಲಿಯಾ ತಂಡದ ನಾಯಕಿ ಅಲೀಸಾ ಹೀಲಿ

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ದೀಪ್ತಿ ಶರ್ಮಾ ಯಷ್ಟಿಕಾ ಭಾಟಿಯಾ (ವಿಕೆಟ್‌ಕೀಪರ್) ರಿಚಾ ಘೋಷ್ (ವಿಕೆಟ್‌ಕೀಪರ್) ಸ್ನೇಹಾ ರಾಣಾ ಶುಭಾ ಸತೀಶ್ ಹರ್ಲೀನ್ ಡಿಯೊಲ್ ಸೈಕಾ ಇಶಾಕಿ ರೇಣುಕಾ ಸಿಂಗ್ ಠಾಕೂರ್ ತಿತಾಸ್ ಸಾಧು ಮೇಘನಾ ಸಿಂಗ್ ರಾಜೇಶ್ವರಿ ಗಾಯಕವಾಡ ಪೂಜಾ ವಸ್ತ್ರಾಕರ್.

ಆಸ್ಟ್ರೇಲಿಯಾ: ಅಲೀಸಾ ಹೀಲಿ (ನಾಯಕಿ–ವಿಕೆಟ್‌ಕೀಪರ್) ಡಾರ್ಸಿ ಬ್ರೌನ್ ಲರೆನ್ ಚೀಟಲ್ ಹೀಥರ್ ಗ್ರಹಾಂ ಆ್ಯಷ್ಲೆ ಗಾರ್ಡನರ್ ಕಿಮ್ ಗಾರ್ಥ್ ಜೆಸ್ ಜೊನಾಸೆನ್ ಅಲನಾ ಕಿಂಗ್ ಫೋಬಿ ಲಿಚ್‌ಫೀಲ್ಡ್ ತಹಿಲಾ ಮೆಕ್‌ಗ್ರಾ ಬೆತ್ ಮೂನಿ (ವಿಕೆಟ್‌ಕೀಪರ್) ಎಲೈಸ್ ಪೆರಿ ಮೇಘನ್ ಶೂಟ್ ಅನಾಬೆಲ್ ಸದರ್ಲೆಂಡ್ ಜಾರ್ಜಿಯಾ ವಾರೆಹಾಮ್. ಪಂದ್ಯ ಆರಂಭ: ಬೆಳಿಗ್ಗೆ 9.30 ನೇರಪ್ರಸಾರ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT