ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ನಕಣ್ಮಣಿಗಳು

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರಾಧಾ ಯಾದವ್

ಮುಂಬೈನ ಕಾಂದಿವಿಲಿಯಲ್ಲಿ ಒಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯೊಂದರಲ್ಲಿ ಸ್ಥಾಪಿತವಾದ ಸೊಸೈಟಿಯ ಕಟ್ಟಡವಿದೆ. ಅದರ ಎದುರಿನ ಖಾಲಿ ಜಾಗದಲ್ಲಿ ಓಂಪ್ರಕಾಶ್ ಯಾದವ್ ಅವರ ತರಕಾರಿ ಅಂಗಡಿ. ಆದರೆ, ನೆಟ್ಟಗೆ ಒಂದು ಸೂರು ಕೂಡ ಇಲ್ಲ. ಆ ಅಂಗಡಿಗೆ ಹೊಂದಿಕೊಂಡ 225 ಚದರಡಿ ಜಾಗದಲ್ಲಿರುವ ಪುಟ್ಟ ಮನೆಯಲ್ಲಿ ಅವರ ಕುಟುಂಬದ ವಾಸ. ಅದೇ ಮನೆಯ ಹುಡುಗಿ ರಾಧಾ ಯಾದವ್. ಭಾರತ ಮಹಿಳೆಯರ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ವಿಶ್ವ ಮಹಿಳೆಯರ ಟಿ20 ಫೈನಲ್ ತಲುಪಲು ಕಾರಣರಾದವರಲ್ಲಿ 19 ವರ್ಷದ ರಾಧಾ ಕೂಡ ಒಬ್ಬರು. ಎ ಗುಂಪಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾಲ್ಕುವಿಕೆಟ್ ಗಳಿಸಿದ್ದ ಎಡಗೈ ಸ್ಪಿನ್ನರ್ ರಾಧಾ, ಪಂದ್ಯಶ್ರೇಷ್ಠ ಆಟಗಾರ್ತಿ ಗೌರವ ಗಳಿಸಿದ್ದರು. ಅವರ ಉತ್ತಮ ಬೌಲಿಂಗ್‌ನಿಂದ ಲಂಕಾ ತಂಡವು 113 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿತ್ತು. ಭಾರತವು ಸುಲಭ ಜಯ ಸಾಧಿಸಿತ್ತು. ಈ ಹಂತಕ್ಕೆ ಬರಲು ರಾಧಾ ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿದವರು. ಮೂಲತಃ ಉತ್ತರಪ್ರದೇಶದ ಕುಟುಂಬ ಅವರದ್ದು ತಂದೆಯು ತನ್ನ ಕುಟುಂಬದೊಂದಿಗೆ ಉದ್ಯೋಗ ಅರಸಿ ಮುಂಬೈಗೆ ಬಂದವರು. 12 ವರ್ಷದ ರಾಧಾ ತಮ್ಮ ಮನೆಯ ಅಕ್ಕಪಕ್ಕದ ಹುಡುಗರೊಂದಿಗೆ ಕ್ರಿಕೆಟ್ ಆಡುವುದನ್ನು ಕೋಚ್ ಪ್ರಫುಲ್ ನಾಯಕ ನೋಡಿದ್ದರು. ಅಕೆಯ ಪ್ರತಿಭೆ ಗುರುತಿಸಿದ ಅವರು ಸ್ವಲ್ಪ ಕಾಲ ತಾವೇ ಕೋಚಿಂಗ್ ಮಾಡಿದರು. ನಂತರ ಬೋರಿವಿಲಿಯ ಆನಂದಿಬಾಯಿ ದಾಮೋದರ್ ಕಾಳೆ ವಿದ್ಯಾಲಯಕ್ಕೆ ಸೇರಿಸಿದರು. ಅಲ್ಲಿ ಅವರಿಗೆ ಉತ್ತಮ ತರಬೇತಿ ದೊರೆಯಿತು. ಸದ್ಯ ರಾಧಾ ವಿದ್ಯಾಕುಂಜ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಮೇಲೆ ಕುಟುಂಬದ ಪರಿಸ್ಥಿತಿಯು ಸುಧಾರಿಸುತ್ತಿದೆ.

ಶಫಾಲಿ ವರ್ಮಾ

ಹರಿಯಾಣದ 16ರ ಪೋರಿ ಶಫಾಲಿ ವರ್ಮಾ ಈಗ ವಿಶ್ವ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿ್ದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಆಟ ನೋಡುತ್ತ ನೋಡುತ್ತ ತಾನೂ ಕ್ರಿಕೆಟ್ ಬ್ಯಾಟ್ ಹಿಡಿದ ಹುಡುಗಿ ಇವತ್ತು ಭಾರತ ತಂಡದ ಆರಂಭಿಕ ಆಟಗಾರ್ತಿಯಾಗಿದ್ದಾರೆ. ಮನೆ ತುಂಬಾ ಸಚಿನ್ ಚಿತ್ರಗಳನ್ನು ಅಂಟಿಸಿಕೊಂಡಿರುವ ಹುಡುಗಿ ಅವರಂತೇ ಬ್ಯಾಟಿಂಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ಸಚಿನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗಿ ಶಫಾಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಭಾರತದ ಮಹಿಳಾ ಕ್ರಿಕೆಟ್‌ ಭವಿಷ್ಯವನ್ನು ಉಜ್ವಲಗೊಳಿಸುವ ಸಮರ್ಥ ಹುಡುಗಿ ಈಕೆ.

ಜೆಮಿಮಾ ರಾಡ್ರಿಗಸ್

ಯೂಟ್ಯೂಬ್‌ನ ಸರ್ಚ್‌ನಲ್ಲಿ ಹೋಗಿ ಜೆಮಿಮಾ ರಾಡ್ರಿಗಸ್ ಹೆಸರು ಹುಡುಕಿದರೆ ಸಾಕು. ಕ್ರಿಕೆ್ಟ್, ಹಾಕಿ, ಡ್ಯಾನ್ಸ್, ಹಾಡು, ಚಿಟ್ ಚಾಟ್ ಇತ್ಯಾದಿಗಳಲ್ಲಿ ಮಿಂಚುತ್ತಿರುವ 19 ವರ್ಷ ಹುಡುಗಿಯ ವಿಡಿಯೋಗಳು ಸಾಲುಗಟ್ಟುತ್ತವೆ. ವಿಶ್ವಕಪ್ ಟೂರ್ನಿಯಲ್ಲಿ ಅನುಭವಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದಾಗ ತಂಡಕ್ಕೆ ಆಸರೆಯಾದ ಹುಡುಗಿ ಜೆಮಿಮಾ. ಬಲಗೈ ಬ್ಯಾಟ್ಸ್‌ವುಮನ್ ತಮ್ಮ ಬಿರುಸಿನ ಸಿಕ್ಸರ್‌ಗಳ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದವರು. ಕ್ರೀಡಾ ಹಿನ್ನೆಲೆಯ ಕುಟುಂಬ ಇವರದ್ದು. ಮುಂಬೈನಲ್ಲಿ ಅಪ್ಪನ ಮಾರ್ಗದರ್ಶನದಲ್ಲಿ ಕ್ರೀಡಾಪಟುವಾಗಿ ಬೆಳೆದ ಜೆಮಿಮಾ 17 ವರ್ಷಕ್ಕೆ ಭಾರತ ತಂಡಕ್ಕೆ ಕಾಲಿಟ್ಟರು. ತಂಡದಲ್ಲಿ ಈಗ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲರನ್ನೂ ಹರ್ಷದ ಹೊನಲಲ್ಲಿ ತೇಲಿಸುವ ಹುಡುಗಿ ಜೆಮಿಮಾ.

ತಾನಿಯಾ ಭಾಟಿಯಾ

ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳ ಯಶಸ್ಸಿನಲ್ಲಿ ವಿಕೆಟ್‌ಕೀಪರ್ ತಾನಿಯಾ ಭಾಟಿಯಾ ಅವರದ್ದೂ ಸಿಂಹಪಾಲು ಇದೆ. ತಂಡದ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮವೇಗಿಗಳ ಎಸೆತಗಳನ್ನು ಕರಾರುವಾಕ್ ಆಗಿ ಗುರುತಿಸುತ್ತಿರುವ 22 ವರ್ಷದ ತಾನಿಯಾ ಸ್ಟಂಪ್‌ಗಳ ಹಿಂದೆ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಲೀಗ್‌ ಹಂತದ ನಾಲ್ಕು ಪಂದ್ಯಗಳಲ್ಲಿ ಕ್ರೀಸ್‌ ಬಿಟ್ಟು ಮುಂದೆ ಆಡಲು ಹೋಗಿ ಬೀಟ್ ಆದ ಬ್ಯಾಟ್ಸ್‌ವುಮನ್‌ಗಳಿಗೆ ಪೆವಿಲಿಯನ್ ದಾರಿ ತೋರಿದ ಶ್ರೇಯ ತಾನಿಯಾ ಅವರದ್ದು. ನಾಲ್ಕು ಅಮೋಘ ಕ್ಯಾಚ್‌ ಮತ್ತು ಮೂರು ಸ್ಟಂಪಿಂಗ್‌ಗಳು ಅವರ ಖಾತೆಯಲ್ಲಿವೆ. ಆಸ್ಟ್ರೇಲಿಯಾ ಎದುರಿನ ಫೈನಲ್ ಪಂದ್ಯವು ಅವರ ವೃತ್ತಿಜೀವನದ 50ನೇ ಟಿ20 ಆಗಿದೆ. ಚಂಡೀಗಡದ ತಾನಿಯಾ ಅವರ ತಂದೆ ಸಂಜಯ್ ಭಾಟಿಯಾ ಸೆಂಟ್ರಲ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮಗಳನ್ನು ಕ್ರಿಕೆಟ್ ಆಟಗಾರ್ತಿಯನ್ನಾಗಿ ಬೆಳೆಸುವ ಅವರ ಕನಸು ಸಾಕಾರವಾಗಿದೆ. ಯೋಗರಾಜ್ ಸಿಂಗ್ (ಯುವರಾಜ್ ಸಿಂಗ್ ತಂದೆ) ಅವರ ತರಬೇತಿಯಲ್ಲಿ ತಾನಿಯಾ ಪ್ರತಿಭೆ ಅರಳಿದೆ.

ಪೂನಂ ಯಾದವ್

ಭಾರತಕ್ಕೆ ಪ್ರವಾಸ ಬರುವ ವಿದೇಶಿಗರಿಗೆ ತಾಜ್‌ ಮಹಲ್‌ಗೆ ನೋಡದೇ ಇರುವುದಿಲ್ಲ. ಇದೀಗ ತಾಜ್ ಮಹಲ್ ಇರುವ ಊರಿನ ಹುಡುಗಿ ಪೂನಂ ಯಾದವ್ ಅವರೆಂದರೆ ವಿದೇಶಿ ತಂಡಗಳ ಬ್ಯಾಟ್ಸ್‌ವುಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಐದಡಿ ಎತ್ತರದ ಪೂನಂ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್‌ಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. 28 ವರ್ಷದ ಪೂನಂ ಅವರ ಲೆಗ್‌ಸ್ಪಿನ್ ಎಸೆತಗಳಿಗೆ ನಾಲ್ಕು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ಆಘಾತ ಅನುಭವಿಸಿತು. ಫೈನಲ್‌ನಲ್ಲಿ ಅವರ ಎಸೆತ ಎದುರಿಸಲೆಂದೇ ವಿಶೇಷ ಅಭ್ಯಾಸ ಮಾಡಿದ್ದು ಆತಿಥೇಯ ಆಸ್ಟ್ರೇಲಿಯಾ. ಸದ್ಯ ತಂಡದಲ್ಲಿರುವ ಹೆಚ್ಚು ಅನುಭವಿ ಬೌಲರ್ ಇವರು. 66 ಟಿ20 ಪಂದ್ಯಗಳಲ್ಲಿ 94 ವಿಕೆಟ್ ಗಳಿಸಿದ್ದಾರೆ. ವಿಶ್ವಕಪ್ ಟೂರ್ನಿಗೆ ಕೆಲವೇ ವಾರಗಳ ಮುನ್ನ ಎಡಗೈ ಬೆರಳಿಗೆ ಆದ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದಿದ್ದರು. ಆದ್ದರಿಂದ ತಂಡಕ್ಕೆ ಆಯ್ಕೆಯಾಗುವುದು ಖಚಿತವಾಗಿತ್ತು. ಆದರ ತಮ್ಮ ಗಾಯಕ್ಕೆ ಪಟ್ಟಿ ಕಟ್ಟಿಕೊಂಡೇ ಅಭ್ಯಾಸಕ್ಕೆ ಇಳಿದರು. ತಮ್ಮ ಸಾಮರ್ಥ್ಯ ಸಾಬೀತು ಮಾಡಿ ತಂಡದಲ್ಲಿ ಸ್ಥಾನ ಗಳಿಸಿದರು. ಸೇನೆಯ ನಿವೃತ್ತ ಅಧಿಕಾರಿಯಾಗಿರುವ ತಂದೆ ರಘುವೀರ್ ಸಿಂಗ್ ಯಾದವ್ ಅವರ ಶಿಸ್ತಿನ ತರಬೇತಿಯಲ್ಲಿ ಬೆಳೆದಿರುವ ಪೂನಂ, ಎಂತಹ ಒತ್ತಡದ ಸನ್ನಿವೇಶದಲ್ಲಿಯೂ ನಗುನಗುತ್ತ ಇರುತ್ತಾರೆ. ಅವರ ಸಹ ಆಟಗಾರ್ತಿಯರಿಗೆ ಹಾಸ್ಯ ಚಟಾಕಿ ಹೇಳಿ ನಗಿಸುತ್ತಾರೆ. ತಂಡದಲ್ಲಿಉಲ್ಲಾಸದ ವಾತಾವರಣ ಇರಲು ಕಾರಣರಾಗಿದ್ದಾರೆ.

ರಾಜೇಶ್ವರಿ ಗಾಯಕವಾಡ್

ಕರ್ನಾಟಕದ ವಿಜಯಪುರದ ರಾಜೇಶ್ವರಿ ಗಾಯಕವಾಡ್ ತಮ್ಮ ಎಡಗೈ ಸ್ಪಿನ್ ಮೂಲಕ ಗಮನ ಸೆಳೆದವರು. ಟರ್ಫ್‌ ವಿಕೆಟ್‌ನಂತಹ ಸೌಲಭ್ಯವೇ ಇರದ ಊರಿನಲ್ಲಿ ಕ್ರಿಕೆಟ್ ಪ್ರೀತಿ ಬೆಳೆಸಿಕೊಂಡು ಈ ಮಟ್ಟಕ್ಕೆ ಸಾಧಿಸಿರುವುದು ಸಣ್ಣ ಮಾತಲ್ಲ. ಕೆಳಮಧ್ಯಮ ವರ್ಗದ ಕುಟುಂಬದ ರಾಜೇಶ್ವರಿಗೆ ಅಪ್ಪನೇ ಪ್ರೇರಣೆ. ಆದರೆ, 2014ರಲ್ಲಿ ರಾಜೇಶ್ವರಿ ಭಾರತ ತಂಡದ ಪರ ಮೊದಲ ಅಂತರರಾಷ್ಟ್ರೀಯ ಸರಣಿ ಆಡಿ ಬಂದ ಮೇಲೆ ಅಪ್ಪನ ಅಗಲಿಕೆಯ ದುಃಖ ಅನುಭವಿಸಿದರು. ಆದರೆ, ಅಪ್ಪನ ಕನಸು ಸಾಕಾರಗೊಳಿಸುವತ್ತ ನಿರಂತರ ಹೋರಾಟ ನಡೆಸಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿ ತಂಡಗಳ ಜೊತೆಯಾಟಗಳನ್ನು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT