ಭಾನುವಾರ, ಅಕ್ಟೋಬರ್ 17, 2021
23 °C
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾ ವಸ್ತ್ರಕಾರ್; ತಿರುವು ನೀಡಿದ ತಹಲಿಯಾ ಮೆಗ್ರಾ ಇನಿಂಗ್ಸ್‌

ಟಿ20 ಸರಣಿ, 2ನೇ ಪಂದ್ಯ: ಆಸ್ಟ್ರೇಲಿಯಾಗೆ ಮಣಿದ ಭಾರತ ಮಹಿಳಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋಲ್ಡ್ ಕೋಸ್ಟ್‌: ಬ್ಯಾಟರ್‌ಗಳು ವೈಫಲ್ಯ ಕಂಡ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಗೆಲುವಿಗಾಗಿ ಎಲ್ಲ ರೀತಿಯ ಪ್ರಯತ್ನವನ್ನೂ ನಡೆಸಿದರು. ಆದರೆ ಕೊನೆಯ ಹಂತದಲ್ಲಿ ತಹಲಿಯಾ ಮೆಕ್‌ಗ್ರಾ ಭರ್ಜರಿ ಆಟವಾಡಿ ಗೆಲುವನ್ನು ಕಸಿದುಕೊಂಡರು. ಭಾರತ ಮಹಿಳೆಯರ ಎದುರಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಮೂರು ‍ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಗೆ 118 ರನ್ ಗಳಿಸಿತ್ತು. ಆತಿಥೇಯರು 19.1 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 119 ರನ್ ಗಳಿಸಿದರು. ನಾಲ್ಕು ರನ್‌ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾದ ಮೊದಲ ವಿಕೆಟ್ ಉರುಳಿಸಿದ ಭಾರತ ನಂತರ ಸತತ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು.

ಆರಂಭಿಕ ಬ್ಯಾಟರ್ ಬೇಥ್ ಮೂನಿ (34; 36ಎಸೆತ, 4 ಬೌಂಡರಿ) ಏಕಾಂಗಿ ಹೋರಾಟ ನಡೆಸಿ ಇನಿಂಗ್ಸ್ ಮುನ್ನಡೆಸಿದರು. 14ನೇ ಓವರ್‌ನಲ್ಲಿ ಅವರ ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಆದರೆ ಆರನೇ ಕ್ರಮಾಂಕದ ತಹಲಿಯಾ ಮೆಗ್ರಾ ತಂಡಕ್ಕೆ ಆಸರೆಯಾದರು. ಆದರೂ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ಶಿಖಾ ಪಾಂಡೆ ಅವರ 18ನೇ ಓವರ್‌ನಲ್ಲಿ 14 ರನ್‌ ಮತ್ತು ರೇಣುಕಾ ಸಿಂಗ್ ಅವರ 19ನೇ ಓವರ್‌ನಲ್ಲಿ 13 ರನ್‌ ಗಳಿಸಿದ ಮೆಗ್ರಾ ಸಂಪೂರ್ಣವಾಗಿ ಪಂದ್ಯವನ್ನು ಭಾರತದ ಹಿಡಿತದಿಂದ ಕಸಿದುಕೊಂಡರು. 33 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 42 ರನ್‌ ಗಳಿಸಿದ ಅವರು ಜಯದ ರೂವಾರಿ ಆದರು. 

ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ತಂಡದ ಮೊತ್ತ 12 ರನ್ ಆಗುವಷ್ಟರಲ್ಲಿ ಮರಳಿದರು. ಮೂರನೇ ಕ್ರಮಾಂಕದ ಜೆಮಿಮಾ ರಾಡ್ರಿಗಸ್ ಕೂಡ ಬೇಗನೇ ಔಟಾದರು. ಯಾಷ್ಟಿಕಾ ಭಾಟಿಯಾ ಮತ್ತು ರಿಚಾ ಘೋಷ್ ಕೂಡ ವೈಫಲ್ಯ ಕಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಐದು ಬೌಂಡರಿಗಳೊಂದಿಗೆ 28 ರನ್ ಗಳಿಸಿ ತಂಡದ ಗೌರವ ಉಳಿಸಲು ಪ್ರಯತ್ನಿಸಿದರು. 

ಅಂತಿಮ ಓವರ್‌ಗಳಲ್ಲಿ ಪೂಜಾ ವಸ್ತ್ರಕಾರ್ (37; 26 ಎ, 3 ಬೌಂ, 2 ಸಿ) ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಹರ್ಮನ್‌ಪ್ರೀತ್‌, ದೀಪ್ತಿ ಶರ್ಮಾ ಮತ್ತು ಪೂಜಾ ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಎರಡಂಕಿ ಮೊತ್ತ ದಾಟಲು ಆಗಲಿಲ್ಲ. ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರಿಂದ ‘ಚೋಟಾ ಹಾರ್ದಿಕ್‌’ ಎಂದು ಕರೆಸಿಕೊಂಡಿರುವ ಪೂಜಾ ಎದುರಾಳಿ ಬೌಲರ್‌ಗಳನ್ನು ಕಾಡಿದರು. 

17ನೇ ಓವರ್ ಮುಕ್ತಾಯಗೊಂಡಾಗ ಭಾರತ ಒಂಬತ್ತು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿತ್ತು. ಕೊನೆಯ ಮೂರು ಓವರ್‌ಗಳಲ್ಲಿ ತಂಡ 37 ರನ್ ಕಲೆ ಹಾಕಿತು. ಇದರಲ್ಲಿ ರಾಜೇಶ್ವರಿ ಗಾಯಕವಾಡ್ ಕಾಣಿಕೆ ಏನೂ ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು