ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಮೊಹಮ್ಮದ್ ಸಿರಾಜ್ ಮೇಡನ್‌: ಆರ್‌ಸಿಬಿ ವಿನ್‌

ಏಯಾನ್‌ ಮಾರ್ಗನ್‌ ಬಳಗಕ್ಕೆ ಸೋಲು; ಯಜುವೇಂದ್ರ ಚಾಹಲ್‌ಗೆ ಎರಡು ವಿಕೆಟ್‌
Last Updated 22 ಅಕ್ಟೋಬರ್ 2020, 8:46 IST
ಅಕ್ಷರ ಗಾತ್ರ
ADVERTISEMENT
""

ಅಬುಧಾಬಿ: ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಬುಧವಾರ ಸತತ ಎರಡು ಓವರ್‌ಗಳನ್ನು ಮೇಡನ್ ಮಾಡಿ ದಾಖಲೆ ಬರೆದರು. ಜೊತೆಗೆ ಮೂರು ವಿಕೆಟ್‌ ಕೂಡ ಗಳಿಸಿದ ಅವರು,ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊಟ್ಟಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾದರು. ತಮ್ಮ ಆರಂಭಿಕ ಎರಡು ಓವರ್‌ಗಳಲ್ಲಿ (2–2–0–3) ಮಿಂಚಿದ ಅವರು ಕೋಲ್ಕತ್ತ ತಂಡದ ಕುಸಿತಕ್ಕೆ ಕಾರಣರಾದರು. ಅದರಿಂದಾಗಿ ಕೋಲ್ಕತ್ತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ ಕೇವಲ 84 ರನ್‌ಗಳನ್ನು ಗಳಿಸಿತು.

ಅದಕ್ಕುತ್ತರವಾಗಿ ಆರ್‌ಸಿಬಿ 13.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 85 ರನ್‌ ಗಳಿಸಿ, ಎಂಟು ವಿಕೆಟ್‌ಗಳಿಂದ ಗೆದ್ದಿತು.ಪಾಯಿಂಟ್ಸ್ ಪಟ್ಟಿಯಲ್ಲಿ ಒಟ್ಟು 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ ತಂಡಕ್ಕೆ ಸಿರಾಜ್ ಆರಂಭದಲ್ಲಿಯೇ ಬಲವಾದ ಪೆಟ್ಟು ಕೊಟ್ಟರು. ಇನಿಂಗ್ಸ್‌ನ ಎರಡನೇ ಓವರ್‌ ಬೌಲಿಂಗ್ ಮಾಡಿದ ಅವರು ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಕ್ರಮವಾಗಿ ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಅವರನ್ನು ಔಟ್ ಮಾಡಿದರು. ಆದರೆ ಹ್ಯಾಟ್ರಿಕ್ ಕನಸು ನನಸಾಗಲಿಲ್ಲ.

ಇನಿಂಗ್ಸ್‌ನ ನಾಲ್ಕನೇ ಓವರ್ ಬೌಲಿಂಗ್ ಮಾಡಿದ ‘ಹೈದರಾಬಾದಿ ಹುಡುಗ’ ಸಿರಾಜ್, ಟಾಮ್ ಬೆಂಟನ್ ವಿಕೆಟ್ ಗಳಿಸಿದರು. ತಮ್ಮ ಇನ್ನುಳಿದ ಎರಡು ಓವರ್‌ಗಳಲ್ಲಿ ಕೇವಲ ಎಂಟು ರನ್‌ ಬಿಟ್ಟುಕೊಟ್ಟರು. ಇನ್ನೊಂದು ಬದಿಯಿಂದ ನವದೀಪ್ ಸೈನಿ ಕೂಡ ಮಿಂಚಿದರು. ಇದರಿಂದಾಗಿ ಕೋಲ್ಕತ್ತ 14 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಪರದಾಡಿತು.

ಆರ್‌ಸಿಬಿಯ ಕ್ರಿಸ್ ಮೊರಿಸ್ ಈ ಪಂದ್ಯದಲ್ಲಿ ವಿಕೆಟ್ ಗಳಿಸಲಿಲ್ಲ. ಆದರೆ, ಒಂದು ಮೇಡನ್ ಓವರ್ ಮಾಡಿದರು. ಇನ್ನುಳಿದ ಮೂರು ಓವರ್‌ಗಳಲ್ಲಿ ಒಟ್ಟು 16 ರನ್‌ ಕೊಟ್ಟರು. ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಎರಡು, ವಾಷಿಂಗ್ಟನ್ ಸುಂದರ್ ಮತ್ತು ಸೈನಿ ತಲಾ ಒಂದು ವಿಕೆಟ್ ಗಳಿಸಿದರು.ಕೋಲ್ಕತ್ತ ತಂಡದ ನಾಯಕ ಏಯಾನ್ ಮಾರ್ಗನ್ (30; 34ಎ, 3ಬೌಂ, 1ಸಿ) ಮತ್ತು ಕೊನೆಯಲ್ಲಿ ಲಾಕಿ ಫರ್ಗ್ಯುಸನ್ (19 ರನ್) ಸ್ವಲ್ಪ ದಿಟ್ಟತನ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT