ಶನಿವಾರ, ಅಕ್ಟೋಬರ್ 24, 2020
23 °C
ಇದು ’ಮುಂಬೈಕರ್‌’ಗಳ ಹಣಾಹಣಿ

DC vs MI: ಮುಂಬೈ ಇಂಡಿಯನ್ಸ್‌–ಡೆಲ್ಲಿ ಕ್ಯಾಪಿಟಲ್ಸ್‌ ಹಣಾಹಣಿ ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಮಾಯಾನಗರಿ ಮುಂಬೈನ ಕ್ರಿಕೆಟ್‌ ಪ್ರತಿಭೆಗಳಾದ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ತಂಡಗಳು ಭಾನುವಾರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸದ್ಯ ಶ್ರೇಯಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು  ಹತ್ತು ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದೆ. ಎಂಟು ಪಾಯಿಂಟ್ ಗಳಿಸಿರುವ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಆರು ಪಂದ್ಯಗಳಲ್ಲಿ ಆಡಿವೆ.  ಈ ತಂಡಗಳ ಯಾವುದೇ ವಿಭಾಗದ ಬಲಾಬಲವನ್ನು ನೋಡಿದರೂ ಸಮಬಲಶಾಲಿಗಳೇ ಎದ್ದು ಕಾಣುತ್ತಾರೆ. ಆದ್ದರಿಂದ ಈ ಪಂದ್ಯವು ರೋಚಕವಾಗುವ ಎಲ್ಲ ಸಾಧ್ಯತೆಗಳೂ  ಇವೆ.

ಉಭಯ ತಂಡಗಳ ನಾಯಕರು ತಮ್ಮ ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ. ನಾಯಕತ್ವದಲ್ಲಿಯೂ ಚಾಣಾಕ್ಷತೆ ಮೆರೆಯುತ್ತಿದ್ದಾರೆ. ತಮ್ಮ ತಂಡಗಳಲ್ಲಿರುವ ಪ್ರತಿಭಾವಂತರನ್ನು ಜಾಣ್ಮೆಯಿಂದ ದುಡಿಸಿಕೊಳ್ಳುತ್ತಿರುವ ಇಬ್ಬರೂ ಮುಂಬೈಕರ್‌ಗಳು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಹಿಂದಿನ ಪಂದ್ಯದಲ್ಲಿ ಮಾಡಿದ ಲೋಪಗಳನ್ನು ತಿದ್ದಿಕೊಂಡು ಮುಂದುವರಿಯುವ ಜಾಣ್ಮೆ ಇಬ್ಬರಿಗೂ ಇದೆ. ಡೆಲ್ಲಿಯಲ್ಲಿ ಪೃಥ್ವಿ ಶಾ ಮತ್ತು ಶಿಖರ್ ಧವನ್ ಅವರಂತಹ ಆರಂಭಿಕರಿದ್ದರೆ, ಮುಂಬೈನಲ್ಲಿ ರೋಹಿತ್ ಮತ್ತು ಕ್ವಿಂಟನ್ ಡಿಕಾಕ್ ಇದ್ದಾರೆ. ನಂತರದ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಅವರ ಬಲ ಇದೆ.

ಡೆಲ್ಲಿಯಲ್ಲಿ ಶ್ರೇಯಸ್, ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್, ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ ಅವರಂತಹ ಆಲ್‌ರೌಂಡರ್‌ಗಳೂ ಇದ್ದಾರೆ.

ಕಗಿಸೊ ರಬಾಡ, ಆರ್ ಅಶ್ವಿನ್ ಮತ್ತು ಸ್ಟೋಯಿನಿಸ್‌ ತಮ್ಮ ಪರಿಣಾಮಕಾರಿ ಬೌಲಿಂಗ್ ಮೂಲಕ ಎದುರಾಳಿಗಳಿಗೆ ದುಃಸ್ವಪ್ನರಾಗಿದ್ದಾರೆ. ಮುಂಬೈ ತಂಡದಲ್ಲಿರುವ ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಎದುರಿಸಲು ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ಹೆಚ್ಚುವರಿ ತಾಲೀಮಿನೊಂದಿಗೇ ಕಣಕ್ಕಿಳಿಯಬೇಕು. ಈ ಬಗ್ಗೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಈಗಾಗಲೇ ‘ಕ್ಲಾಸ್‌’ ತೆಗೆದುಕೊಂಡಿದ್ದಾರೆ. 

ಅದಕ್ಕುತ್ತರವಾಗಿ ಮುಂಬೈ ಕೋಚ್ ಮಹೇಲಾ ಜಯವರ್ಧನೆ ಕೂಡ ತಂತ್ರ ಹೆಣೆಯುತ್ತಿದ್ದಾರೆ. ಇವರಿಬ್ಬರಲ್ಲಿ ಯಾರ ತಂತ್ರಕ್ಕೆ ಜಯ ಒಲಿಯುವುದು  ಎಂಬ ಕುತೂಹಲ ಈಗ ಗರಿಗೆದರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು