ಶನಿವಾರ, ನವೆಂಬರ್ 28, 2020
19 °C

ಮೆಸ್ಸಿ, ರೊನಾಲ್ಡೊ ಅವರಂತೆ ವಿರಾಟ್ ಕೊಹ್ಲಿ ‘ಆಧುನಿಕ ಶ್ರೇಷ್ಠ’ ಆಟಗಾರ: ಓಜಾ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುುಂಬೈ: ಟೀಂ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ಅವರು ಬ್ಯಾಟ್ಸ್‌ಮನ್‌ ಆಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇನ್ನುಮುಂದೆ ತಮ್ಮ ತಂಡದ ಜೊತೆ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಯೋಚಿಸಲಿದ್ದಾರೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್‌ ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟಿದ್ದಾರೆ.

ಸ್ಪೋರ್ಟ್ಸ್ ಟುಡೆ ಜೊತೆ ಮಾತನಾಡಿರುವ ಅವರು, ಕೊಹ್ಲಿಯವರನ್ನು ಆಧುನಿಕ ಕಾಲಘಟ್ಟದ ಶ್ರೇಷ್ಠ ಆಟಗಾರ ಎಂದು ಹೇಳಿದ್ದು, ಪ್ರಶಸ್ತಿಗಳನ್ನು ಗೆಲ್ಲುವತ್ತ ಅವರು (ಕೊಹ್ಲಿ) ಹೊಂದಿರುವ ಹಸಿವನ್ನು ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಉಸೇನ್ ಬೋಲ್ಟ್ ಜೊತೆಗೆ ಹೋಲಿಸಿದ್ದಾರೆ.

‘ವಿರಾಟ್ ಕೊಹ್ಲಿ ಆಧುನಿಕ ಶ್ರೇಷ್ಠ ಆಟಗಾರ. ಈ ಕಾಲಘಟ್ಟದ ಶ್ರೇಷ್ಠ ಕ್ರೀಡಾಳುಗಳೆಂದು ನೀವು ಮೆಸ್ಸಿ, ರೊನಾಲ್ಡೊ ಅವರತ್ತ, ಬೋಲ್ಟ್‌ ಅವರತ್ತ ನೋಡುತ್ತೀರಿ. ಅವರು ತಮ್ಮದೇ ಆದ ಸ್ಪರ್ಧೆಯನ್ನು ಹೊಂದಿದ್ದಾರೆ. ತಮ್ಮ ಹಾದಿಯಲ್ಲಿ ಸಾಗುವಾಗ, ಪ್ರತಿಯೊಂದನ್ನೂ ಗೆಲ್ಲಲು ನೋಡುತ್ತಿರುತ್ತಾರೆ. ಅದೇರೀತಿ ವಿರಾಟ್‌ ಕೊಹ್ಲಿ ಅಲೋಚಿಸಬೇಕು. ಒಬ್ಬ ಬ್ಯಾಟ್ಸ್‌ಮನ್‌ ಆಗಿ ನಾನು ಸಾಕಷ್ಟು ಸಾಧಿಸಿದ್ದೇನೆ. ಇದೀಗ ನಾಯಕನಾಗಿ ನಾನು ವಿಶ್ವಕಪ್‌ ಗೆಲ್ಲಬೇಕು. ಐಸಿಸಿ ಪಂದ್ಯಾವಳಿಗಳು ಮತ್ತು ಟೆಸ್ಟ್‌ ಪಂದ್ಯಗಳನ್ನು ಗೆಲ್ಲಬೇಕು’ ಎಂದು ಅವರು ಚಿಂತಿಸಬೇಕು. ಐಪಿಎಲ್‌ನಲ್ಲಿ ‘ನಾನಿದನ್ನು ಸಾಧಿಸುತ್ತೇನೆ’ ಎಂದು ಅವರ ಮನಸ್ಸೂ ಅವರಿಗೆ ಹೇಳಲಿದೆ’ ಎಂದಿದ್ದಾರೆ.

ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಯುಎಇಯಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ. ಆರ್‌ಸಿಬಿ ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಟ ನಡೆಸಲಿದ್ದು, ಗೆಲ್ಲುವ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಆದರೆ, ಸೋಲುವ ತಂಡ ಕಡಿಮೆ ಅಂತರದಿಂದ ಸೋತರೂ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಒಂದುವೇಳೆ ಡೆಲ್ಲಿ ಅಥವಾ ಆರ್‌ಸಿಬಿ ದೊಡ್ಡ ಅಂತರದಿಂದ ಸೋಲು ಕಂಡರೆ, ಮಂಗಳವಾರ ನಡೆಯುವ ಪಂದ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಆ ಪಂದ್ಯದಲ್ಲಿ ಸನ್‌ರೈಸರ್ಸ್‌ ಗೆಲುವು ಸಾಧಿಸಿದರೆ, ಇಂದಿನ ಪಂದ್ಯದ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಉಳಿಯುವ ತಂಡ ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ. ಸದ್ಯ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನದಲ್ಲಿದ್ದು, ಆರ್‌ಸಿಬಿ, ಡೆಲ್ಲಿ ಮತ್ತು ಕೆಕೆಆರ್ ಕ್ರಮವಾಗಿ 2, 3 ಮತ್ತು 4ನೇ ಸ್ಥಾನಗಳಲ್ಲಿವೆ.

ಒತ್ತಡ ಸಂದರ್ಭದಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ. ಹಾಗಾಗಿ ಆರ್‌ಸಿಬಿ ಗೆಲ್ಲುವ ಸಾಧ್ಯತೆ ಇದೆ ಎಂದು ಓಜಾ ಅಭಿಪ್ರಾಯಪಟ್ಟಿದ್ದಾರೆ. ‘ವಿರಾಟ್‌ ಕೊಹ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಲಿದ್ದಾರೆ ಎಂಬ ನಂಬಿಕೆ ಇದೆ. ಪ್ರಮುಖ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿಯೇ ನಾವೆಲ್ಲರೂ ಅವರ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿನ ಪಂದ್ಯದಲ್ಲಿ ಗೆಲ್ಲಲು ತಂಡಗಳು ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು