ಭಾನುವಾರ, ಅಕ್ಟೋಬರ್ 25, 2020
28 °C

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೇಲ್‌ಗೆ ಅವಕಾಶ ನೀಡಿ: ಕಿಂಗ್ಸ್‌ಗೆ ವೀರೂ ಸಲಹೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.

ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿ, ಆರರಲ್ಲಿ ಸೋಲು ಕಂಡಿರುವ ಕಿಂಗ್ಸ್‌ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಈ ತಂಡದ ಆರಂಭಿಕ ಆಟಗಾರರಿಬ್ಬರೂ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ. ನಾಯಕ ಕೆಎಲ್‌ ರಾಹುಲ್‌ 387 ರನ್‌ ಗಳಿಸಿದ್ದರೆ, ಮಯಂಕ್‌ ಅಗರವಾಲ್‌ 337 ರನ್‌ ಬಾರಿಸಿದ್ದಾರೆ. ಟೂರ್ನಿಯಲ್ಲಿ ದಾಖಲಾಗಿರುವ 2 ಶತಕಗಳೂ ಇವರ ಬ್ಯಾಟ್‌ನಿಂದಲೇ ಬಂದಿವೆ ಎಂಬುದು ವಿಶೇಷ. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಕಿಂಗ್ಸ್‌ ಕೇವಲ ಒಂದು ಪಂದ್ಯವನ್ನು ಮಾತ್ರವೇ ಗೆದ್ದಿದೆ.

ಮುಂದಿನ ಹಂತಕ್ಕೆ ಸಾಗಬೇಕಾದರೆ ಈ ತಂಡ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವುದು ಅಗತ್ಯವಾಗಿದೆ.

ಗೇಲ್‌ ಈ ಬಾರಿಯ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಆಡಿಲ್ಲ. ಆರಂಭದ ಕೆಲ ಪಂದ್ಯಗಳಿಂದ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿತ್ತು. ಆದರೆ, ಅನಾರೋಗ್ಯದ ಕಾರಣದಿಂದಾಗಿ ಕೊನೆಯ ಎರಡು ಮೂರು ಪಂದ್ಯಗಳನ್ನು ಅವರು ತಪ್ಪಿಸಿಕೊಂಡಿದ್ದಾರೆ.

‘ಚೇತರಿಕೆಯ ನಂತರ ಕ್ರಿಸ್‌ ಗೇಲ್‌ ಆಸ್ಪತ್ರೆಯಿಂದ ವಾಪಸ್ ಆಗಿದ್ದಾರೆ ಎಂಬ ಸುದ್ದಿ ಇದೆ. ಎದುರಾಳಿಗಳಿಗೆ ಹಾನಿ ಮಾಡಲು ಯುವಕರಿಗೆ ಸಾಧ್ಯವಾಗಲಿಲ್ಲ. ಇದೀಗ ಗೇಲ್‌ ಅವರನ್ನು ಕರೆ ತನ್ನಿ’ ಎಂದು ಯುಟ್ಯೂಬ್‌ ಕಾರ್ಯಕ್ರಮ ‘ವೀರೂ ಕಿ ಬೈಠಕ್‌’ನಲ್ಲಿ ಸೆಹ್ವಾಗ್‌ ಹೇಳಿದ್ದಾರೆ.

ಕ್ರಿಸ್‌ ಗೇಲ್‌ ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ವಿವರಿಸಿರುವ ಅವರು, ಶಾರ್ಜಾದ ಚಿಕ್ಕ ಕ್ರೀಡಾಂಗಣದಲ್ಲಿ ಆಡಲಿರುವುದು ದೊಡ್ಡ ಹೊಡೆತಗಳನ್ನು ಬಾರಿಸುವ ಜಮೈಕಾದ ಬ್ಯಾಟ್ಸ್‌ಮನ್‌ಗೆ ಸೂಕ್ತವಾಗಿದೆ ಎಂದಿದ್ದಾರೆ.

‌‘ಗೇಲ್‌ ಆರ್‌ಸಿಬಿ ವಿರುದ್ಧ ಹೊಂದಿರುವ ದಾಖಲೆ ಅಸಾಧಾರಣವಾಗಿದೆ ಎಂಬುದನ್ನು ಗಮನಿಸಿ. 54ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಅವರು ಯಾವ ಸ್ಟ್ರೈಕ್‌ರೇಟ್‌ನಲ್ಲಿ ಬೌಲಿಂಗ್‌ ಮಾಡುತ್ತಾರೆ ಎಂಬುದು ಎಲ್ಲ ಬೌಲರ್‌ಗಳಿಗೂ ತಿಳಿದಿದೆ. ಹಾಗಾಗಿ ಸೀರಿಯಸ್‌ ಮ್ಯಾನ್‌ ಮಯಂಕ್‌ ಅಗರವಾಲ್‌ ಅವರೊಂದಿಗೆ ಗೇಲ್‌ ಇನಿಂಗ್ಸ್ ಆರಂಭಿಸಲು ಬಿಡಿ. ಜೊತೆಗೆ ತಂಡದ ಸಮತೋಲವನ್ನು ಕಾಪಾಡಿಕೊಳ್ಳಲು ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಆಡಲಿ’ ಎಂದು ಸಲಹೆ ನೀಡಿದ್ದಾರೆ.

ಟಿ20 ಕ್ರಿಕೆಟ್‌ನ ಪ್ರಮುಖ ಬ್ಯಾಟ್ಸ್‌ಮನ್‌ ಎನಿಸಿರುವ ಕ್ರಿಸ್‌ ಗೇಲ್‌, ಐಪಿಎಲ್‌ನಲ್ಲಿ 125 ಪಂದ್ಯಗಳಿಂದ 41.13ರ ಸರಾಸರಿಯಲ್ಲಿ 4,482 ರನ್‌ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 28 ಅರ್ಧಶತಕಗಳು ಸೇರಿವೆ. ಅತಿಹೆಚ್ಚು ಸಿಕ್ಸರ್‌ (326) ಮತ್ತು ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ (175) ಕಲೆಹಾಕಿದ ಸಾಧನೆ ಸೇರಿ ಹಲವು ದಾಖಲೆಗಳು ಅವರ ಹೆಸರಿನಲ್ಲಿವೆ.

2012ರಿಂದ 2017 ವರೆಗೆ ಆರ್‌ಸಿಬಿ ಪರವಾಗಿ ಆಡಿದ್ದ ಗೇಲ್‌ ಅವರನ್ನು ಈ ಬಾರಿ ಕಿಂಗ್ಸ್‌ ಪಂಜಾಬ್‌ ₹ 2 ಕೋಟಿ ನೀಡಿ ಖರೀದಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು