ಶುಕ್ರವಾರ, ಜೂನ್ 18, 2021
24 °C

IPL 2021: ಮಾರ್ಗನ್ ನಾಯಕನ ಆಟ; ಸೋಲಿನ ಸರಪಣಿ ಕಳಚಿಕೊಂಡ ಕೆಕೆಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಮೊದಲು ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ಬಳಿಕ ನಾಯಕ ಏಯಾನ್ ಮಾರ್ಗನ್ (47*) ಹಾಗೂ ರಾಹುಲ್ ತ್ರಿಪಾಠಿ (41) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ. 

ಇದರೊಂದಿಗೆ ಸತತ ನಾಲ್ಕು ಸೋಲುಗಳ ಸರಪಣಿಯನ್ನು ಕಳಚಿಕೊಂಡಿರುವ ಕೆಕೆಆರ್, ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಅತ್ತ ಹೀನಾಯ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಪಡೆಯು ಮಗದೊಮ್ಮೆ ಸೋಲಿನ ಮುಖಭಂಗಕ್ಕೊಳಗಾಗಿದೆ. 

ಈ ಗೆಲುವಿನೊಂದಿಗೆ ಕೆಕೆಆರ್, ಆಡಿರುವ ಆರು ಪಂದ್ಯಗಳಲ್ಲಿ ಒಟ್ಟು ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಿಂದ ಐದನೇ ಸ್ಥಾನಕ್ಕೆ ನೆಗೆತ ಕಂಡಿದೆ. ಇನ್ನೊಂದೆಡೆ ಅಷ್ಟೇ ಅಂಕಗಳನ್ನು ಹೊಂದಿರುವ ರಾಹುಲ್ ಪಡೆಯು ಆರನೇ ಸ್ಥಾನಕ್ಕೆ ಕುಸಿದಿದೆ. 

ಕನ್ನಡಿಗ ಪ್ರಸಿದ್ಧ ಕೃಷ್ಣ (30ಕ್ಕೆ 3 ವಿಕೆಟ್) ಸೇರಿದಂತೆ ಕೋಲ್ಕತ್ತ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಪಂಜಾಬ್ ಒಂಬತ್ತು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನತ್ತಿದ ಕೆಕೆಆರ್ ಒಂದು ಹಂತದಲ್ಲಿ 17 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೂ ತ್ರಿಪಾಠಿ ಹಾಗೂ ನಾಯಕ ಮಾರ್ಗನ್ ಮಹತ್ವದ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. 

ನಿತೀಶ್ ರಾಣಾ (0) ಹಾಗೂ ಶುಭಮನ್ ಗಿಲ್ (9) ನಿರಾಸೆ ಮೂಡಿಸಿದರು. ಅತ್ತ 32 ಎಸೆತಗಳನ್ನು ಎದುರಿಸಿದ ತ್ರಿಪಾಠಿ ಏಳು ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿದರು. ಇನ್ನೊಂದೆಡೆ ಫಾರ್ಮ್‌ಗೆ ಮರಳಿದ ನಾಯಕ ಮಾರ್ಗನ್ 40 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. 

ಇದರೊಂದಿಗೆ 16.4 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಆ್ಯಂಡ್ರೆ ರಸೆಲ್ (10) ಹಾಗೂ ದಿನೇಶ್ ಕಾರ್ತಿಕ್ (12*)ಕೆಕೆಆರ್ ಗೆಲುವನ್ನು ಸುಲಭಗೊಳಿಸಿದರು. 

ಕೆಕೆಆರ್ ಬೌಲರ್‌ಗಳ ಮಿಂಚು, ಪಂಜಾಬ್ ತತ್ತರ...  
ಈ ಮೊದಲು ಕೆಕೆಆರ್ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಸಾಧ್ಯವಾಗಿದೆ. 

ಪ್ರಸಿದ್ಧ ಕೃಷ್ಣ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ, ಪ್ಯಾಟ್ ಕಮಿನ್ಸ್ ಹಾಗೂ ಶಿವಂ ಮಾವಿ ಪ್ರಭಾವಿ ದಾಳಿ ಸಂಘಟಿಸುವ ಮೂಲಕ ಪಂಜಾಬ್ ಓಟಕ್ಕೆ ಕಡಿವಾಣ ಹಾಕಿದರು. ಕೊನೆಯ ಹಂತದಲ್ಲಿ ಕೇವಲ 18 ಎಸೆತಗಳಲ್ಲಿ 30 ರನ್ ಗಳಿಸಿದ ಕ್ರಿಸ್ ಜಾರ್ಡನ್ ಪಂಜಾಬ್‌ಗೆ ನೆರವಾದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡಕ್ಕೆ ಆರಂಭಿಕರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ನಿಧಾನಗತಿಯ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 36 ರನ್ ಗಳಿಸಿದರು. 

ಆದರೆ ಈ ವಿಕೆಟ್ ಪತನದ ಬೆನ್ನಲ್ಲೇ ಪಂಜಾಬ್ ದಿಢೀರ್ ಪತನವನ್ನು ಅನುಭವಿಸಿತ್ತು. ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಗೋಲ್ಡನ್ ಡಕ್‌ಗೆ ಬಲಿಯಾದರು. ದೀಪಕ್ ಹೂಡಾ (1), ಮೊಯಿಸೆಸ್ ಹೆನ್ರಿಕ್ಸ್ (2) ನಿರಾಸೆ ಮೂಡಿಸಿದರು. ಇದರೊಂದಿಗೆ 75 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಪತನವಾಯಿತು. 

ನಿಕೋಲಸ್ ಪೂರನ್ (19) ಉತ್ತಮ ನಿರೀಕ್ಷೆ ಮೂಡಿಸಿದರೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಕೊನೆಯ ಹಂತದಲ್ಲಿ ಕ್ರಿಸ್ ಜಾರ್ಡನ್ ಬಿರುಸಿನ 30 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ತಲುಪಿಸಿದರು. 18 ಎಸೆತಗಳನ್ನು ಎದುರಿಸಿದ ಜಾರ್ಡನ್ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. 

ಇನ್ನುಳಿದಂತೆ ಶಾರೂಕ್ ಖಾನ್ (13), ರವಿ ಬಿಶ್ನೋಯ್ (1) ರನ್ ಗಳಿಸಿದರು. ಕೆಕೆಆರ್ ಪರ ಪ್ರಸಿದ್ಧ ಕೃಷ್ಣ ಮೂರು, ನಾರಾಯಣ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ಮತ್ತು ವರುಣ್ ಚಕ್ರವರ್ತಿ ಹಾಗೂ ಶಿವಂ ಮಾವಿ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.  ಈ ಪೈಕಿ ಮಾವಿ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 14 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು