ಭಾನುವಾರ, ಮೇ 16, 2021
22 °C

IPL 2021: ಐದು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಫಿಫ್ಟಿ ಬಾರಿಸಿದ ಮ್ಯಾಕ್ಸ್‌ವೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಐದು ವರ್ಷಗಳ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ರನ್ ಬರವನ್ನು ನೀಗಿಸಿದ್ದಾರೆ. 

ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಕೊನೆಯದಾಗಿ, 2016ರಲ್ಲಿ ಅರ್ಧಶತಕ ಸಾಧನೆ ಮಾಡಿದ್ದರು. ಅಲ್ಲಿಂದ ಬಳಿಕ ಆಡಿದ 40 ಇನ್ನಿಂಗ್ಸ್‌ಗಳಲ್ಲಿ ಫಿಫ್ಟಿ ಗೆರೆ ದಾಟಿರಲಿಲ್ಲ.   

ಐಪಿಎಲ್ 2021ನೇ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಮ್ಯಾಕ್ಸ್‌ವೆಲ್, ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಸಾಧನೆ ಮಾಡಿದರು. 

ವಿಕೆಟ್‌ನ ಒಂದು ತುದಿಯಲ್ಲಿ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ನಿಂತ ಮ್ಯಾಕ್ಸ್‌ವೆಲ್, ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. 

ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಅಸ್ಥಿರ ಫಾರ್ಮ್‌ ಎದುರಿಸುತ್ತಿರುವ ಮ್ಯಾಕ್ಸ್‌ವೆಲ್, ಕೊನೆಗೂ 50ರ ಗಡಿ ದಾಟುವಲ್ಲಿ ಯಶಸ್ವಿಯಾದರು. ಆ ಮೂಲಕ ಆರ್‌ಸಿಬಿ ತಂಡವು ಗೌರವಾನ್ವಿತ ಮೊತ್ತ ಪೇರಿಸಲು ನೆರವಾದರು. 

ಇಲ್ಲಿ ಮ್ಯಾಕ್ಸ್‌ವೆಲ್ ಅರ್ಧಶತಕ ಸಿಡಿಸಿದ್ದಾರೆ ಎನ್ನುವುದಕ್ಕಿಂತಲೂ ಮಿಗಿಲಾಗಿ ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ಪರಿಸ್ಥಿತಿ ನಿಭಾಯಿಸಿದ ರೀತಿಯು ಮೆಚ್ಚುಗೆಗೆ ಪಾತ್ರವಾಗಿದೆ. 

41 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಶಹಬಾಜ್ ನದೀಂ ಎಸೆದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 22 ರನ್ ಸೊರೆಗೈಯುವಲ್ಲಿ ಯಶಸ್ವಿಯಾಗಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು