ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಒಡ್ಡಿದ 93 ರನ್ ಗುರಿ 10 ಓವರ್‌ಗಳಲ್ಲೇ ಬೆನ್ನಟ್ಟಿದ ಕೆಕೆಆರ್!

Last Updated 20 ಸೆಪ್ಟೆಂಬರ್ 2021, 19:47 IST
ಅಕ್ಷರ ಗಾತ್ರ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ 200ನೇ ಪಂದ್ಯ ವಾಡಿದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಹಣಾಹಣಿಯಲ್ಲಿ ನೂರರ ಗಡಿ ದಾಟಲಿಲ್ಲ.

ಇದರಿಂದಾಗಿ ಟೂರ್ನಿಯ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು 9 ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡಕ್ಕೆ ಕೋಲ್ಕತ್ತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವಿಂಡೀಸ್ ದೈತ್ಯ ಆ್ಯಂಡ್ರೆ ರಸೆಲ್ ಬಲವಾದ ಪೆಟ್ಟು ಕೊಟ್ಟರು. ಇಬ್ಬರೂ ತಲಾ ಮೂರು ವಿಕೆಟ್ ಗಳಿಸಿದರು. ಇದರಿಂದಾಗಿ ವಿರಾಟ್ ಬಳಗವು 19 ಓವರ್‌ಗಳಲ್ಲಿ 92 ರನ್ ಗಳಿಸಿತು.

ಈ ಅಲ್ಪಮೊತ್ತ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡವು 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (48 ರನ್) ಮತ್ತು ವೆಂಕಟೇಶ್ ಅಯ್ಯರ್ (ಔಟಾಗದೇ 41) ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ ಅವರಂತಹ ಅನುಭವಿ ಆಟಗಾರರ ವೈಫಲ್ಯದಿಂದಾಗಿ ಆರ್‌ಸಿಬಿ ಸೋತಿತು.

ವಿರಾಟ್, ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದರು.

ಈ ಐಪಿಎಲ್ ನಂತರ ಆರ್‌ಸಿಬಿ ನಾಯಕತ್ವವನ್ನು ತೊರೆಯುವುದಾಗಿ ವಿರಾಟ್ ಘೋಷಿಸಿದ್ದಾರೆ. ‘ದ್ವಿಶತಕ’ದ ಪಂದ್ಯದಲ್ಲಿ ಅವರಿಂದ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಹುಸಿಯಾಯಿತು.

ದೇವದತ್ತ ಪಡಿಕ್ಕಲ್ (22 ರನ್), ಶ್ರೀಕರ್ ಭರತ್ (16 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (10) ಮತ್ತು ಕೊನೆಯಲ್ಲಿ ಹರ್ಷಲ್ ಪಟೇಲ್ (12 ರನ್) ಬಿಟ್ಟರೆ ಉಳಿದವರೆಲ್ಲರೂ ಒಂದಂಕಿಯೊಂದಿಗೆ ನಿರ್ಗಮಿಸಿದರು.

ಆಪದ್ಭಾಂದವ ಎಬಿ ಡಿವಿಲಿಯರ್ಸ್‌ ಅವರಿಗೆ ಖಾತೆ ತೆರೆಯಲು ರಸೆಲ್ ಬಿಡಲಿಲ್ಲ. ಎದುರಿಸಿದ ಮೊದಲ ಎಸೆತದಲ್ಲಿಯೇ ಅವರು ಬೌಲ್ಡ್‌ ಆದರು.

ಕೋಲ್ಕತ್ತ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಮೋಡಿಗೆ ಮ್ಯಾಕ್ಸ್‌ವೆಲ್, ಸಚಿನ್ ಬೇಬಿ ಮತ್ತು ಶ್ರೀಲಂಕಾದ ಆಟಗಾರ ವನಿಂದು ಹಸರಂಗಾ ಮರುಳಾದರು.

ದೇವದತ್ತ ಆಟಕ್ಕೆ ಲಾಕಿ ಫರ್ಗ್ಯುಸನ್ ತಡೆಯೊಡ್ಡಿದರು. ಕೊನೆಯ ಓವರ್‌ಗಳಲ್ಲಿ ರನ್‌ ಗಳಿಸುವ ಯತ್ನ
ದಲ್ಲಿದ್ದ ಹರ್ಷಲ್‌ ಪಟೇಲ್‌ಗೂ ಅವರೇ ಪೆವಿಲಿಯನ್ ದಾರಿ ತೋರಿದರು.

ಏಯಾನ್ ಮಾರ್ಗನ್ ನಾಯಕತ್ವದ ಬಳಗವು ಯಾವುದೇ ಹಂತದಲ್ಲಿಯೂ ಪಂದ್ಯದ ಮೇಲಿನ ಹಿಡಿತ ಸಡಿಲಿಸಲಿಲ್ಲ. ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡರು.

ಇದರಿಂದಾಗಿ ಆರ್‌ಸಿಬಿ ಇನಿಂಗ್ಸ್‌ ನಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ದಾಖಲಾಗಲಿಲ್ಲ. ಕೆಕೆಆರ್ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಸಿಡಿದವು.

200ನೇ ಪಂದ್ಯ ಆಡಿದ ಕೊಹ್ಲಿ
ವಿರಾಟ್ ಕೊಹ್ಲಿಯವರಿಗೆ ಇದು 200ನೇ ಪಂದ್ಯ. ಟೂರ್ನಿಯಲ್ಲಿ ಒಂದೇ ತಂಡದ ಪರವಾಗಿ ಇನ್ನೂರು ಪಂದ್ಯಗಳಲ್ಲಿ ಆಡಿದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

2008ರಲ್ಲಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.

ಆರ್‌ಸಿಬಿ ತಂಡದ ಆಟಗಾರರು ಈ ಪಂದ್ಯದಲ್ಲಿ ತಿಳಿನೀಲಿ ಬಣ್ಣದ ಪೋಷಾಕು ಧರಿಸಿ ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT