ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ರಾಹುಲ್, ಹರಪ್ರೀತ್ ಮಿಂಚು; ಆರ್‌ಸಿಬಿಗೆ ಸೋಲಿನ ಆಘಾತ

Last Updated 1 ಮೇ 2021, 13:01 IST
ಅಕ್ಷರ ಗಾತ್ರ

ಅಹಮದಬಾದ್: ನಾಯಕ ಕೆ.ಎಲ್. ರಾಹುಲ್ ಸ್ಪೋಟಕ ಬ್ಯಾಟಿಂಗ್ (91*) ಹಾಗೂ ಹರಪ್ರೀತ್ ಬ್ರಾರ್ ಆಲ್‌ರೌಂಡರ್ ಪ್ರದರ್ಶನದ (ಅಜೇಯ 25 ರನ್ ಹಾಗೂ 3 ವಿಕೆಟ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಕೆ.ಎಲ್. ರಾಹುಲ್ ಅಮೋಘ ಅರ್ಧಶತಕ (91*) ಹಾಗೂ ಕ್ರಿಸ್ ಗೇಲ್ (46) ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ತಂಡವು 179 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಹರಪ್ರೀತ್ ಬ್ರಾರ್ ಸೇರಿದಂತೆ ಕಿಂಗ್ಸ್ ದಾಳಿಗೆ ತತ್ತರಿಸಿದ ಬೆಂಗಳೂರು ಎಂಟು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಈ ಸೋಲಿನ ಹೊರತಾಗಿಯೂ ಆರ್‌ಸಿಬಿ 10 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಅತ್ತ ಪ್ರಂಜಾಬ್ ಆರು ಅಂಕಗಳೊಂದಿಗೆ ಐದನೇ ಸ್ಥಾನ ಆಲಂಕರಿಸಿದೆ. ಅಲ್ಲದೆ ಪ್ಲೇ-ಆಫ್‌ ಸ್ಪರ್ಧೆಯಲ್ಲಿ ಮತ್ತಷ್ಟು ರೋಚಕತೆ ಸೃಷ್ಟಿಯಾಗಿದೆ.

ಮೊದಲು ಬ್ಯಾಟಿಂಗ್‌ನಲ್ಲಿ 25 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಸೇರಿದಂತೆ ನಾಯಕ ರಾಹುಲ್ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದ ಬ್ರಾರ್ ಬಳಿಕ ಬೌಲಿಂಗ್‌ನಲ್ಲಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ವಿಕೆಟ್‌ಗಳನ್ನು ಕಬಳಿಸಿ ಪಂಜಾಬ್ ಗೆಲುವಿನಲ್ಲಿ ನಿರ್ಣಾಯ ಪಾತ್ರ ವಹಿಸಿದರು.

ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ (35), ರಜತ್ ಪಾಟೀದಾರ್ (31), ಹರ್ಷಲ್ ಪಟೇಲ್, ಕೈಲ್ ಜೇಮಿಸನ್ (16*), ದೇವದತ್ತ ಪಡಿಕ್ಕಲ್ (7), ಗ್ಲೆನ್ ಮ್ಯಾಕ್ಸ್‌ವೆಲ್ (0), ಎಬಿ ಡಿ ವಿಲಿಯರ್ಸ್ (3), ಶಹಬಾಜ್ ಅಹಮ್ಮದ್ (8), ಡ್ಯಾನಿಯನ್ ಸ್ಯಾಮ್ಸ್ (3) ನಿರಾಸೆ ಮೂಡಿಸಿದರು. ಎಂಟನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ಕಟ್ಟಿದ ಹರ್ಷಲ್ ಹಾಗೂ ಜೆಮಿಸನ್, ಕಿಂಗ್ಸ್ ಗೆಲುವನ್ನು ಅಲ್ಪ ವಿಳಂಬಗೊಳಿಸಿದರು.

ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಅವರನ್ನು ಸತತವಾದ ಎಸೆತಗಳಲ್ಲಿ ಕ್ಲೀನ್ ಬೌಲ್ಡ್ ಮಾಡಿದ ಬ್ರಾರ್, ಉಜ್ವಲ ಭವಿಷ್ಯವನ್ನು ಸಾರಿದರು. ಬಳಿಕ ಎಬಿ ಡಿ ಅವರಿಗೂ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಕೈಚಳಕ ಮೆರೆದರು. ಐಪಿಎಲ್‌ನಲ್ಲಿ ಬ್ರಾರ್ ಗಳಿಸಿದ ಮೊದಲ ಮೂರು ವಿಕೆಟ್ ಇದಾಗಿದೆ.

ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಒಂದು ಮೇಡನ್ ಸೇರಿದಂತೆ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇನ್ನುಳಿದಂತೆ ರವಿ ಬಿಷ್ಣೋಯಿ ಎರಡು ಮತ್ತು ರಿಲೇ ಮೆರೆಡಿತ್, ಮೊಹಮ್ಮದ್ ಶಮಿಹಾಗೂ ಕ್ರಿಸ್ ಜಾರ್ಡನ್ ತಲಾ ಒಂದು ವಿಕೆಟ್ಕಿತ್ತು ಮಿಂಚಿದರು.

ರಾಹುಲ್‌–ಗೇಲ್ ಆರ್ಭಟ: ಪಂಜಾಬ್ ಹೋರಾಟದ ಮೊತ್ತ...
ಈ ಮೊದಲು ನಾಯಕ ಕೆ.ಎಲ್. ರಾಹುಲ್ ಮತ್ತು ಒಂದೇ ಓವರ್‌ನಲ್ಲಿ ಐದು ಬೌಂಡರಿ ಬಾರಿಸಿದ ಕ್ರಿಸ್ ಗೇಲ್ ಅಬ್ಬರದಿಂದಾಗಿ ಪಂಜಾಬ್ ಕಿಂಗ್ಸ್ ತಂಡವು ಸವಾಲಿನ ಮೊತ್ತ ಪೇರಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಹುಲ್ (ಔಟಾಗದೆ 91; 57ಎಸೆತ, 7ಬೌಂಡರಿ, 5ಸಿಕ್ಸರ್) ಮತ್ತು ಗೇಲ್ (46; 24ಎ, 6ಬೌಂ, 2ಸಿ) ಬಲದಿಂದ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 179 ರನ್‌ ಗಳಿಸಿತು.

ಗಾಯಗೊಂಡಿರುವ ಮಯಂಕ್ ಅಗರವಾಲ್ ಬದಲು ಪ್ರಭಸಿಮ್ರನ್ ಸಿಂಗ್ ಅವರು ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದರು. ಆದರೆ, ನಾಲ್ಕನೇ ಓವರ್‌ನಲ್ಲಿ ಕೈಲ್ ಜಿಮಿಸನ್ ಎಸೆತದಲ್ಲಿ ಔಟಾದರು. ಈ ಹಂತದಲ್ಲಿ ರಾಹುಲ್ ಜೊತೆಗೂಡಿದ ಗೇಲ್ ಇನಿಂಗ್ಸ್‌ನ ದಿಕ್ಕನ್ನೇ ಬದಲಿಸಿದರು.

ಆರನೇ ಓವರ್‌ನಲ್ಲಿ ಜಿಮಿಸನ್‌ ದಂಡನೆಗೊಳಗಾದರು. ಈ ಓವರ್‌ನಲ್ಲಿ ಐದು ಬಾರಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ನ ಪೃಥ್ವಿ ಶಾ ಒಂದೇ ಓವರ್‌ನಲ್ಲಿ ಸತತ ಆರು ಬೌಂಡರಿ ಹೊಡೆದಿದ್ದರು. ಗೇಲ್ ಆ ದಾಖಲೆಯನ್ನು ಮುಟ್ಟಲಿಲ್ಲ. ರಾಹುಲ್ ಮತ್ತು ಗೇಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು. ತಂಡದ ಮೊತ್ತವು ನೂರರ ಗಡಿ ಮುಟ್ಟಲು ಒಂದು ರನ್‌ ಬಾಕಿಯಿದ್ದ ಸಂದರ್ಭದಲ್ಲಿ ಗೇಲ್ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಎಬಿ ಡಿವಿಲಿಯರ್ಸ್‌ ಸಂಭ್ರಮಿಸಿದರು.

ನಿಕೋಲಸ್ ಪೂರನ್‌ಗೆ ಖಾತೆ ತೆರೆಯಲೂ ಜೆಮಿಸನ್ ಬಿಡಲಿಲ್ಲ. ದೀಪಕ್ ಹೂಡ ಆರ್ಭಟ ಆರಂಭಿಸುವ ಮುನ್ನವೇ ಶಾಬಾಜ್ ಅಹಮದ್ ತಮ್ಮ ಕೈಚಳಕ ಮೆರೆದರು. ಶಾರೂಕ್‌ ಖಾನ್ ಖಾತೆ ತೆರೆಯುವ ಮುನ್ನವೇ ಯಜುವೇಂದ್ರ ಚಾಹಲ್ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು.

ಐದು ಓವರ್‌ 60 ರನ್: ಒಂದು ಕಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ರಾಹುಲ್ ಮಾತ್ರ ದಿಟ್ಟತನದಿಂದ ಬ್ಯಾಟ್ ಬೀಸಿದರು. 14.4 ಓವರ್‌ ಗಳಲ್ಲಿ 5 ವಿಕೆಟ್‌ಗೆ 118 ರನ್‌ ಇದ್ದ ತಂಡದ ಮೊತ್ತಕ್ಕೆ ಕೊನೆಯ ಐದು ಓವರ್‌ಗಳಲ್ಲಿ 60 ರನ್‌ ಸೇರಲು ಅವರ ಆಟವೇ ಕಾರಣವಾಯಿತು.

ಅವರಿಗೆ ಉತ್ತಮ ಜೊತೆ ನೀಡಿದ ಹರಪ್ರೀತ್ ಬ್ರಾರ್‌ (ಔಟಾಗದೆ 25; 17ಎ, 1ಬೌಂ, 2ಸಿ) ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಸೇರಿಸಲು ಕಾರಣರಾದರು. ಪಂಜಾಬ್ ಇನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳು ದಾಖಲಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT