ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಪೃಥ್ವಿ ಅಬ್ಬರ; ಕೆಕೆಆರ್ ತತ್ತರ; ಆರ್‌ಸಿಬಿ ಹಿಂದಿಕ್ಕಿದ ಡೆಲ್ಲಿ ನಂ.2

Last Updated 29 ಏಪ್ರಿಲ್ 2021, 17:31 IST
ಅಕ್ಷರ ಗಾತ್ರ

ಅಹಮದಾಬಾದ್: ಆರಂಭಿಕರಾದ ಪೃಥ್ವಿ ಶಾ (82) ಹಾಗೂ ಶಿಖರ್ ಧವನ್ (46) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಆ್ಯಂಡ್ರೆ ರಸೆಲ್ (45*) ಹಾಗೂ ಶುಭಮನ್ ಗಿಲ್ (43) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 154 ರನ್‌ಗಳ ಗೌರವಾರ್ಹ ಮೊತ್ತ ಪೇರಿಸಿತ್ತು.

ಆದರೆ ಡೆಲ್ಲಿ ಪಾಲಿಗೆ ಈ ಮೊತ್ತ ಯಾವ ಹಂತದಲ್ಲೂ ಸವಾಲೆನಿಸಲೇ ಇಲ್ಲ. ಅಲ್ಲದೆ ಕೇವಲ 16.3 ಓವರ್‌ಗಳಲ್ಲೇ ಗೆಲುವಿನ ಗುರಿ ತಲುಪಿ ಆರ್ಭಟಿಸಿತ್ತು.

ಈ ಗೆಲುವಿನೊಂದಿಗೆ ಆರ್‌ಸಿಬಿ ಹಿಂದಿಕ್ಕಿರುವ ಡೆಲ್ಲಿ, ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಆರ್‌ಸಿಬಿ, ರನ್ ರೇಟ್ ಆಧಾರದಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಅತ್ತ ಕೆಕೆಆರ್ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಶಿವಂ ಮಾವಿ ಎಸೆದ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಆರು ಬೌಂಡರಿಗಳನ್ನು ಸಿಡಿಸಿದ ಪೃಥ್ವಿ ಶಾ ದಾಖಲೆ ಬರೆದರು. ಅಷ್ಟೇ ಯಾಕೆ ಶಿಖರ್ ಧವನ್ ಜೊತೆಗೆ ಪವರ್ ಪ್ಲೇನಲ್ಲೇ 67 ರನ್‌ಗಳನ್ನು ಸೊರೆಗೈದರು.

ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮೈಗೂಡಿಸಿರುವ ಪೃಥ್ವಿ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಪರಿಣಾಮ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರನ್ ಹೊಳೆಯೇ ಹರಿದಿತ್ತು.

ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದ ಪೃಥ್ವಿ ಶಾ, ಪ್ರಸಕ್ತ ಸಾಲಿನ ಅತಿ ವೇಗದ ಫಿಫ್ಟಿ ಸಾಧನೆ ಮಾಡಿದರು. ಅಲ್ಲದೆ ಧವನ್ ಜೊತೆಗೆ 10.2 ಓವರ್‌ಗಳಲ್ಲಿ ಶತಕದ ಜೊತೆಯಾಟ ನೀಡಿ ಅಬ್ಬರಿಸಿದರು.

ಈ ನಡುವೆ 46 ರನ್ ಗಳಿಸಿದ್ದ ಧವನ್ ವಿಕೆಟ್ ಒಪ್ಪಿಸಿದರು. ಆಗಲೇ ಪೃಥ್ವಿ ಶಾ ಜೊತೆಗೆ ಮೊದಲ ವಿಕೆಟ್‌ಗೆ 13.5 ಓವರ್‌ಗಳಲ್ಲಿ 132 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಗೆಲುವಿನಂಚಿನಲ್ಲಿ ಪೃಥ್ವಿ ಶಾ ಕೂಡಾ ಪೆವಿಲಿಯನ್‌ಗೆ ಮರಳಿದರು. 41 ಎಸೆತಗಳನ್ನು ಎದುರಿಸಿದ ಪೃಥ್ವಿ, 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 82 ರನ್ ಸಿಡಿಸಿದ್ದರು.

ಅಂತಿಮವಾಗಿ 16.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತ್ತು. ಇನ್ನುಳಿದಂತೆ ನಾಯಕ ರಿಷಭ್ ಪಂತ್ (16) ಹಾಗೂ ಮಾರ್ಕಸ್ ಸ್ಟೋಯಿನಿಸ್ (6*) ರನ್ ಗಳಿಸಿದರು. ಕೆಕೆಆರ್ ಪರ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಪಡೆದರೂ ಆಗಲೇ ಕಾಲ ಮಿಂಚಿ ಹೋಗಿತ್ತು.

ರಸೆಲ್ ಅಬ್ಬರ: ಕೋಲ್ಕತ್ತ ಗೌರವಾರ್ಹ ಮೊತ್ತ
ಈ ಮೊದಲು ಇನಿಂಗ್ಸ್‌ನ ಆರಂಭದಲ್ಲಿ ಶುಭಮನ್ ಗಿಲ್ ಮತ್ತು ಅಂತ್ಯದಲ್ಲಿ ಆ್ಯಂಡ್ರೆ ರಸೆಲ್ ಅಬ್ಬರಿಸಿದ್ದರಿಂದಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 154 ರನ್ ಗಳಿಸಿತು.

ಡೆಲ್ಲಿ ತಂಡದ ಅಕ್ಷರ್ ಪಟೇಲ್ (32ಕ್ಕೆ2) ಮತ್ತು ಲಲಿತ್ ಯಾದವ್ (13ಕ್ಕೆ2) ಚುರುಕಾದ ದಾಳಿಯಿಂದಾಗಿ ಕೋಲ್ಕತ್ತ ತಂಡವು 16.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಕ್ರೀಸ್‌ನಲ್ಲಿದ್ದ ಆ್ಯಂಡ್ರೆ ರಸೆಲ್ ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದ ಬೌಲರ್‌ಗಳನ್ನು ಕಂಗೆಡಿಸಿದರು.

ನಾಲ್ಕು ಸಿಕ್ಸರ್, ಎರಡು ಬೌಂಡರಿ ಸಿಡಿಸಿದರು. ಕೇವಲ 27 ಎಸೆತಗಳಲ್ಲಿ 45 ರನ್‌ಗಳನ್ನು ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು 150ರ ಗಡಿ ದಾಟಿತು.

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಕೊಡುವಲ್ಲಿ ನಿತೀಶ್ ರಾಣಾ ವಿಫಲರಾದರು. ನಂತರ ರಾಹುಲ್ ತ್ರಿಪಾಠಿ ಕೂಡ ಹೆಚ್ಚು ರನ್ ಗಳಿಸಲಿಲ್ಲ. ನಾಯಕ ಏಯಾನ್ ಮಾರ್ಗನ್ ಮತ್ತು ಸುನಿಲ್ ನಾರಾಯಣ್ ಖಾತೆಯನ್ನೇ ತೆರೆಯಲಿಲ್ಲ.

ಆದರೆ, ಏಕಾಂಗಿ ಹೋರಾಟ ಮಾಡಿದ ಗಿಲ್ (43; 38ಎಸೆತ) 13ನೇ ಓವರ್‌ನವರೆಗೂ ಹೋರಾಟ ನಡೆಸಿದರು. ಆದರೆ ಅರ್ಧಶತಕ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಆವೇಶ್ ಖಾನ್ ಎಸೆತದಲ್ಲಿ ಔಟಾದರು.

ದಿನೇಶ್ ಕಾರ್ತಿಕ್ ಮತ್ತು ಪ್ಯಾಟ್ ಕಮಿನ್ಸ್‌ ಅವರು ರಸೆಲ್‌ಗೆ ಉತ್ತಮ ಜೊತೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT