ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಹಾಡಿನಲ್ಲಿ ಕನ್ನಡ ಕಡಿಮೆ, ಹಿಂದಿ ಜಾಸ್ತಿ; ಅಭಿಮಾನಿಗಳ ಅಸಮಾಧಾನ

Last Updated 9 ಏಪ್ರಿಲ್ 2021, 13:15 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ ಗೀತೆಯನ್ನು ಬಿಡುಗಡೆಗೊಳಿಸಿದೆ. ಆದರೆ ಈ ಬಾರಿಯೂ ಕನ್ನಡ ಪದಗಳ ಕಡಿಮೆ ಬಳಕೆ ಮತ್ತು ಹಿಂದಿ ಹಾಗೂ ಆಂಗ್ಲ ಭಾಷೆಯ ಪದಗಳ ಜಾಸ್ತಿ ಬಳಕೆಯ ಬಗ್ಗೆ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

'ಬೆಂಗಳೂರು ಲಯನ್ಸ್ ಕೇಳಿ ಇವರ ಘರ್ಜನೆ' ಎಂಬ ಟ್ಯಾಗ್ ಅಡಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಥೀಮ್ ಸಾಂಗ್ ಬಿಡುಗಡೆಗೊಳಿಸಿತ್ತು. ಆದರೆ ಕರ್ನಾಟಕ ಹಾಗೂ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಹೊರತಾಗಿಯೂ ಕನ್ನಡ ಪದಗಳಿಗೆ ಹೆಚ್ಚಿನ ಆಸ್ಪದ ನೀಡದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕ್ರುಶಿಕ ಎಂಬವರು, 'ಹಾಗೆ ಕತೆ. ಊರಿನ ಹೆಸರು ಹಾಳು ಮಾಡೋಕೆ ಅಂತಾನೆ ತಂಡ ಕಟ್ಟಿಕೊಂಡು ಪ್ರತಿವರ್ಷ ಕಪ್ ನಮ್ಮದೇ ಅಂತ ಇರೋದು ಅನ್ಸುತ್ತೆ,
ಈ ರೀತಿ ಹಿಂದಿ-ಇಂಗ್ಲಿಷ್ ಗುಲಾಮಗಿರಿಯ ಶೋಕಿ ಕನ್ನಡ ಬಳಸದೆ ಹೋದ್ರೆ ನಿಮಗೆ ಚಿಪ್ಪು ಪಕ್ಕ ಕಪ್ ಅಲ್ಲ. ಕನ್ನಡವೇ ಬೇಡ ಅಂತ ಇದ್ದ ಮೇಲೆ ಬೆಂಗಳೂರು ಹೆಸರು ಯಾಕೆ? ನಾವು ಕನ್ನಡಿಗರು ಏನು ಕೇಳಿರಲಿಲ್ಲ. ಹಿಂದಿ ಹೇರಿಕೆಯನ್ನು ನಿಲ್ಲಿಸಿ' ಎಂದಿದ್ದಾರೆ.

ಇದನ್ನೂ ಓದಿ:

ಅರ್ಚನಾ ಎಂಬಾಕೆ ಆಂಗ್ಲ ಭಾಷೆಯಲ್ಲೇ ಉತ್ತರಿಸಿದ್ದು, 'ಇದು ಹಾಸ್ಯಾಸ್ಪದ, ಕನ್ನಡದಲ್ಲಿ ಎರಡು ಸಾಲುಗಳನ್ನು ಹೊರತುಪಡಿಸಿ, ಈ ಹಾಡು ಪ್ರಮುಖವಾಗಿಯೂ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿದೆ. ಪ್ರಾದೇಶಿಕ ಹೆಮ್ಮೆ ಎಂದು ಕರೆಯಲ್ಪಡುವ ವಿಷಯವೊಂದಿದೆ. ಅದನ್ನು ಕಳೆದ ಕೆಲವು ವರ್ಷಗಳಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಂಪೂರ್ಣವಾಗಿ ಕಡೆಗಣಿಸಿದ್ದು, ಹಾನಿ ಮಾಡಿದೆ. ಇದು ಸರಿಯಲ್ಲ' ಎಂದು ಟೀಕಿಸಿದ್ದಾರೆ.

ಈ ಆರೋಪಗಳಿಗೆ ಹರ್ಷ್ ಶ್ರೀವಾಸ್ತವ ಎಂಬವರು ಪ್ರತಿಕ್ರಿಯೆ ನೀಡಿದ್ದು, 'ಇದು ನಿಮ್ಮ ಆಲೋಚನೆಯಾಗಿದ್ದರೆ, ಹಿಂದಿ ಮಾತನಾಡುವ ಉತ್ತರ ಭಾರತದ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ತೆಗೆದುಹಾಕಿ. ಹೇಗಿದ್ದರೂ ವಿರಾಟ್ ಅವರಿಂದಾಗಿ ಶೇಕಡಾ 80ರಷ್ಟು ಫ್ಯಾನ್ ಬೇಸ್ ಇದೆ. ವಿರಾಟ್ ಎಲ್ಲಿ ಹೋಗುತ್ತಾರೋ ಅವರೊಂದಿಗೆ ಅವರು ಹೊರಟು ಹೋಗಲಿದ್ದಾರೆ. ಬಹುಶಃ ಮುಂದಿನ ವರ್ಷ ಲಕ್ನೋಗೆ' ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:

ಚಂದ್ರಶೇಖರ ಗೌಡ ಎಂಬವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನೋಡಿ ಕಲಿಯುವಂತೆ ಸಲಹೆ ಮಾಡಿದ್ದಾರೆ. 'ಕನ್ನಡಿಗರು ಹಿಂದಿ ಹೇರಿಕೆ ವಿರುದ್ಧ ಸಮರ ಮಾಡ್ತಿದ್ರೆ. ಆರ್‌ಸಿಬಿ, ನೀವು ಪ್ರತಿವರ್ಷ ನಿಮ್ಮ ಪ್ರೊಮೊದಲ್ಲಿ ಹಿಂದಿ ಯಾಕೆ ತೂರಿಸ್ತೀರಾ ? ಚೆನ್ನೈ ಸೂಪರ್ ಕಿಂಗ್ಸ್ ನೋಡಿ ಕಲಿಯಿರಿ' ಎಂದು ಹೇಳಿದ್ದಾರೆ.

ಅರ್ಜುನ್ ಎಂಬವರು ಎರಡೂ ಭಾಷೆಯಲ್ಲಿ ಹಾಡು ಬಿಡುಗಡೆ ಮಾಡಬಹದಿತ್ತು ಎಂದು ಸಲಹೆ ಮಾಡಿದ್ದಾರೆ. 'ಕಳೆದ ವರ್ಷದ ಅದೇ ಹಾಡಿಗೆ ಮಧ್ಯದಲ್ಲಿ 2-3 ಕನ್ನಡ ಪದಗಳನ್ನು ಸೇರಿಸಲಾಗಿದೆ. ಉಳಿದೆಲ್ಲವು ಅದೇ ಹಾಡು. ಇದೇ ಟ್ಯೂನ್‌ನಲ್ಲಿ ಸಂಪೂರ್ಣ ಕನ್ನಡ ಹಾಡನ್ನು ಏಕೆ ಮಾಡಬಾರದು? ನೀವು ಎರಡು ಹಾಡುಗಳನ್ನು ರಚಿಸಬಹುದಿತ್ತು. ಇದೊಂದು ಮತ್ತು ಸಂಪೂರ್ಣ ಕನ್ನಡದೊಂದಿಗೆ ಮತ್ತೊಂದು ಹಾಡು ರಚಿಸಬಹುದಿತ್ತು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT