ಸೋಮವಾರ, ಮೇ 16, 2022
28 °C

IPL 2022 DC vs SRH: ಡೆಲ್ಲಿ ದರ್ಬಾರ್; ಹೈದರಾಬಾದ್‌ಗೆ ಹ್ಯಾಟ್ರಿಕ್ ಸೋಲು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಡೇವಿಡ್ ವಾರ್ನರ್ (92*) ಹಾಗೂ ರೋವ್‌ಮ್ಯಾನ್ ಪೊವೆಲ್ (67*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 21 ರನ್ ಅಂತರದ ಗೆಲುವು ದಾಖಲಿಸಿದೆ. 

ಈ ಮೂಲಕ ಡೆಲ್ಲಿ ಗೆಲುವಿನ ಹಾದಿಗೆ ಮರಳಿದೆ. ಅತ್ತ ಸನ್‌ರೈಸರ್ಸ್ ಸತತ ಮೂರನೇ ಸೋಲಿಗೆ ಶರಣಾಗಿದೆ. 

ಇದರೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲು ದಾಖಲಿಸಿರುವ ಡೆಲ್ಲಿ ತಂಡವು ಹೈದರಾಬಾದ್ ತಂಡವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ. ಅಷ್ಟೇ ಪಂದ್ಯಗಳಲ್ಲಿ 10 ಅಂಕ ಗಳಿಸಿರುವ ಹೊರತಾಗಿಯೂ ಸನ್‌ರೈಸರ್ಸ್ ರನ್‌ರೇಟ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿದೆ. 

ಬ್ರೆಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಮೂರು ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು.  

ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಕೋಲಸ್ ಪೂರನ್ (62) ಹಾಗೂ ಏಡನ್ ಮಾರ್ಕರಮ್ (42) ಹೋರಾಟದ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಬೃಹತ್ ಮೊತ್ತ ಬೆನ್ನಟ್ಟಿದ ಎಸ್‌ಆರ್‌ಎಚ್ ಆರಂಭದಲ್ಲೇ ಎಡವಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ (7) ಹಾಗೂ ನಾಯಕ ಕೇನ್ ವಿಲಿಯಮ್ಸನ್ (4) ನಿರಾಸೆ ಮೂಡಿಸಿದರು. 

ರಾಹುಲ್ ತ್ರಿಪಾಠಿ (22) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 

ನಾಲ್ಕನೇ ವಿಕೆಟ್‌ಗೆ ಏಡನ್ ಮಾರ್ಕರಮ್ (42) ಹಾಗೂ ನಿಕೋಲಸ್ ಪೂರನ್ ಅರ್ಧಶತಕ ಜೊತೆಯಾಟ ಕಟ್ಟಿದರು. 25 ಎಸೆತಗಳನ್ನು ಎದುರಿಸಿದ ಮಾರ್ಕರಮ್ 42 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಇನ್ನೊಂದೆಡೆ ಅಮೋಘ ಆಟ ಪ್ರದರ್ಶಿಸಿದ ಪೂರನ್, 29 ಎಸೆತಗಳಲ್ಲಿ ಐಪಿಎಲ್‌ನಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದರು. ಈ ನಡುವೆ ಶಶಾಂಕ್ ಸಿಂಗ್ (10) ಹಾಗೂ ಸೀನ್ ಅಬಾಟ್ (7) ನಿರ್ಗಮಿಸಿದರು. 

ಕೊನೆಯ ಹಂತದಲ್ಲಿ ಪೂರನ್ ಪ್ರಯತ್ನಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಮೂಲಕ ರನ್ 21 ಅಂತರದ ಸೋಲಿಗೆ ಶರಣಾಯಿತು. 

34 ಎಸೆತಗಳನ್ನು ಎದುರಿಸಿದ ಪೂರನ್ ಆರು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 62 ರನ್ ಗಳಿಸಿದರು. ಇನ್ನುಳಿದಂತೆ ಶ್ರೇಯಸ್ ಗೋಪಾಲ್ 9*, ಕಾರ್ತಿಕ್ ತ್ಯಾಗಿ 7 ಹಾಗೂ ಭುವನೇಶ್ವರ್ ಕುಮಾರ್ 5* ರನ್ ಗಳಿಸಿದರು. ಡೆಲ್ಲಿ ಪರ ಖಲೀಲ್ ಅಹ್ಮದ್ ಮೂರು ಹಾಗೂ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಗಳಿಸಿದರು. 

ವಾರ್ನರ್-ರೋವ್‌ಮ್ಯಾನ್ ಅಬ್ಬರ...

ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (92*) ಹಾಗೂ ರೋವ್‌ಮ್ಯಾನ್ ಪೊವೆಲ್ ( 67*)  ಸ್ಫೋಟಕ ಅರ್ಧಶತಕಗಳ ನೆರವಿನಿಂದ ಹೈದರಾಬಾದ್ ತಂಡವು ಮೂರು ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಡೆಲ್ಲಿ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಮನದೀಪ್ ಸಿಂಗ್ ಶೂನ್ಯಕ್ಕೆ ಔಟ್ ಆದರು. ಮಿಚೆಲ್ ಮಾರ್ಷ್ (10) ಅವರಿಗೆ ಸೀನ್ ಅಬಾಟ್ ಪೆವಿಲಿಯನ್ ಹಾದಿ ತೋರಿಸಿದರು. 

ಮೂರನೇ ವಿಕೆಟ್‌ಗೆ ಜೊತೆ ಸೇರಿದ ಡೇವಿಡ್ ವಾರ್ನರ್ ಹಾಗೂ ನಾಯಕ ರಿಷಭ್ ಪಂತ್ 48 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 

ವಾರ್ನರ್ ಹಾಗೂ ಪಂತ್ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. ಶ್ರೇಯಸ್ ಗೋಪಾಲ್ ಎಸೆದ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ  ಹ್ಯಾಟ್ರಿಕ್ ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಪಂತ್ 23 ರನ್ ಗಳಿಸಿದರು. ಬಳಿಕ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಔಟ್ ಆದರು. 

ಅತ್ತ ಅಮೋಘ ಆಟವಾಡಿದ ವಾರ್ನರ್ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ನಾಲ್ಕನೇ ಹಾಗೂ ಒಟ್ಟಾರೆಯಾಗಿ ದಾಖಲೆಯ 54ನೇ ಅರ್ಧಶತಕ ಗಳಿಸಿದರು. 

ವಾರ್ನರ್‌ಗೆ ರೋವ್‌ಮ್ಯಾನ್ ಪೊವೆಲ್ ಅವರಿಂದ ಉತ್ತಮ ಬೆಂಬಲ ದೊರಕಿತು. ಅಲ್ಲದೆ ವಾರ್ನರ್ ಜೊತೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 

ಡೆಲ್ಲಿ ಬೌಲರ್‌ಗಳನ್ನು ದಂಡಿಸಿದ ಪೊವೆಲ್ ಕೇವಲ 30 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 

ಅಂತಿಮವಾಗಿ ಡೆಲ್ಲಿ ಮೂರು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ವಾರ್ನರ್ ಹಾಗೂ ಪೊವೆಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 66 ಎಸೆತಗಳಲ್ಲಿ 122 ರನ್ ಪೇರಿಸಿದರು. 

58 ಎಸೆತಗಳನ್ನು ಎದುರಿಸಿದ ವಾರ್ನರ್ 12 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಔಟಾಗದೆ ಉಳಿದರು. ಅತ್ತ ಪೊವೆಲ್ 35 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 67 ರನ್ ಗಳಿಸಿ ಅಜೇಯರಾಗುಳಿದರು. 

ಉಮ್ರಾನ್ ಮಲಿಕ್ ನಾಲ್ಕು ಓವರ್‌ಗಳಲ್ಲಿ 52 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದರೂ ಐಪಿಎಲ್ ಇತಿಹಾಸದಲ್ಲೇ ಗಂಟೆಗೆ 157 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ನೂತನ ದಾಖಲೆ ಬರೆದರು. 
 

ಹೈದರಾಬಾದ್ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. 

ಡೆಲ್ಲಿ ತಂಡದಲ್ಲಿ ನಾಲ್ಕು ಹೈದರಾಬಾದ್ ತಂಡದಲ್ಲಿ ಮೂರು ಬದಲಾವಣೆ:

ಇತ್ತಂಡಗಳ ಪಾಲಿಗೆ ಈ ಪಂದ್ಯ ಮುಖ್ಯವೆನಿಸಿದೆ. ಈವರೆಗೆ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿರುವ ಹೈದರಾಬಾದ್ ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 

ಅತ್ತ ಡೆಲ್ಲಿ ಒಂಬತ್ತು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಐದರಲ್ಲಿ ಸೋಲು ಅನುಭವಿಸಿದ್ದು, ಒಟ್ಟು ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. 

ಹಾಗಾಗಿ ಯಾವೆಲ್ಲ ತಂಡಗಳು ಪ್ಲೇ-ಆಫ್ ಹಂತವನ್ನು ಪ್ರವೇಶಿಸಲಿವೆ ಎಂಬುದು ಕುತೂಹಲವೆನಿಸಿವೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು