ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 PBKS vs LSG: ಎಡವಿದ ಪಂಜಾಬ್; ಲಖನೌಗೆ 20 ರನ್ ಜಯ

Last Updated 29 ಏಪ್ರಿಲ್ 2022, 18:28 IST
ಅಕ್ಷರ ಗಾತ್ರ

ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ 20 ರನ್ ಅಂತರದ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಎಂಟು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಬಳಿಕ ರನ್ ಬೆನ್ನಟ್ಟಿದ ಪಂಜಾಬ್, ಬ್ಯಾಟಿಂಗ್ ವೈಫಲ್ಯ ಕಂಡು ಎಂಟು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಲಖನೌ, ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರು ಜಯದೊಂದಿಗೆ ಒಟ್ಟು 12 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಇನ್ನೊಂದೆಡೆ ಪಂಜಾಬ್ ಒಂಬತ್ತು ಪಂದ್ಯಗಳಲ್ಲಿ ಐದನೇ ಸೋಲಿಗೆ ಶರಣಾಗಿದೆ.

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 46 ರನ್ ಗಳಿಸುವಷ್ಟರಲ್ಲಿ ನಾಯಕ ಮಯಂಕ್ ಅಗರವಾಲ್ (25) ಹಾಗೂ ಶಿಖರ್ ಧವನ್ (5) ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾನುಕ ರಾಜಪಕ್ಸ (9) ಅವರಿಗೂ ಪ್ರಭಾವಿ ಎನಿಸಿಕೊಳ್ಳಲಾಗಲಿಲ್ಲ. ಅಂತಿಮ 60 ಎಸೆತಗಳಲ್ಲಿಗೆಲುವಿಗೆ 87 ರನ್ ಬೇಕಾಗಿತ್ತು.

ಇಲ್ಲಿಂದ ಬಳಿಕವೂ ಪಂಜಾಬ್ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಲಿಯಾಮ್ ಲಿವಿಂಗ್‌ಸ್ಟೋನ್ (18) ಹಾಗೂ ಜಾನಿ ಬೆಸ್ಟೊ (32) ವಿಕೆಟ್ ಪತನದೊಂದಿಗೆ ಗೆಲುವಿನ ಆಸೆ ಕಮರಿತು.

ಅಂತಿಮವಾಗಿ 133ರನ್‌ ಗಳಿಸಲಷ್ಟೇ ಸಾಧ್ಯವಾಯಿತು.ರಿಷಿ ಧವನ್ 21 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಜಿತೇಶ್ ಶರ್ಮಾ (2), ಕಗಿಸೊ ರಬಾಡ (2), ರಾಹುಲ್ ಚಾಹರ್ (4) ನಿರಾಸೆ ಮೂಡಿಸಿದರು.

ಲಖನೌ ಪರ 24 ರನ್ ತೆತ್ತು ಮೂರು ವಿಕೆಟ್ ಕಬಳಿಸಿದ ಮೊಹಸಿನ್ ಮಿಂಚಿದರು. ಕೃಣಾಲ್ ಪಾಂಡ್ಯ 11 ರನ್ನಿಗೆ ಎರಡು ವಿಕೆಟ್ ಪಡೆದರು. ಚಮೀರ ಸಹ ಎರಡು ವಿಕೆಟ್ ಗಳಿಸಿದರು.

ಲಖನೌ ಸ್ಪರ್ಧಾತ್ಮಕ ಮೊತ್ತ...

ಈ ಮೊದಲು ಕಗಿಸೊ ರಬಾಡ (38ಕ್ಕೆ 4 ವಿಕೆಟ್) ಸೇರಿದಂತೆ ಪಂಜಾಬ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಲಖನೌ, ಎಂಟುವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಲಖನೌ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದ ಶತಕ ವೀರ, ನಾಯಕ ಕೆ.ಎಲ್. ರಾಹುಲ್ ಕೇವಲ 6 ರನ್ ಗಳಿಸಿ ರಬಾಡ ಎಸೆತದಲ್ಲಿ ಔಟಾದರು.

ಬಳಿಕ ಜೊತೆಗೂಡಿದ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ದ್ವಿತೀಯ ವಿಕೆಟ್‌ಗೆ 85 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಡಿ ಕಾಕ್ ಕೇವಲ ನಾಲ್ಕು ರನ್ನಿನಿಂದ ಅರ್ಧಶತಕ (46) ವಂಚಿತರಾದರು. 37 ಎಸೆತಗಳನ್ನು ಎದುರಿಸಿದ ಡಿ ಕಾಕ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು.

ಬೆನ್ನಲ್ಲೇ ದೀಪಕ್ ಹೂಡಾ ರನೌಟ್ ಆದರು. 28 ಎಸೆತಗಳನ್ನು ಎದುರಿಸಿದ ಹೂಡಾ 34 ರನ್ (1 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಕೃಣಾಲ್ ಪಾಂಡ್ಯ (7) ಹಾಗೂ ಆಯುಷ್ ಬಡೋನಿ (4) ಅವರನ್ನು ಕಗಿಸೊ ರಬಾಡ ಹೊರದಬ್ಬಿದರು. ಪರಿಣಾಮ 109ಕ್ಕೆ ಐದು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.

ಮಾರ್ಕಸ್ ಸ್ಟೋಯಿನಿಸ್ (1) ಹಾಗೂ ಜೇಸನ್ ಹೋಲ್ಡರ್‌ಗೆ (11) ರಾಹುಲ್ ಚಾಹರ್ ಪೆವಿಲಿಯನ್ ಹಾದಿ ತೋರಿಸಿದರು.

ಅಂತಿಮವಾಗಿ ಲಖನೌ ಎಂಟು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಶಕ್ತವಾಯಿತು.ಇನ್ನುಳಿದಂತೆ ದುಶ್ಮಂತ ಚಮೀರ 17 ಹಾಗೂ ಮೊಹಸಿನ್ ಖಾನ್ 13* ರನ್ ಗಳಿಸಿದರು.ಪಂಜಾಬ್ ಪರ ರಬಾಡ ನಾಲ್ಕು ಹಾಗೂ ಚಾಹರ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಪಂಜಾಬ್ ಫೀಲ್ಡಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಂಕ್ ಅಗರವಾಲ್, ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಹನ್ನೊಂದರ ಬಳಗ:

ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

ಐಪಿಎಲ್‌ಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿರುವ ಲಖನೌ, ಎಂಟು ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕ ಸಂಪಾದಿಸಿದ್ದು, ನಾಲ್ಕನೇ ಸ್ಥಾನದಲ್ಲಿದೆ.

ಅತ್ತ ಪಂಜಾಬ್ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಹಾಗೂ ಸೋಲು ಅನುಭವಿಸಿದ್ದು, ಎಂಟು ಅಂಕಗಳೊಂದಿಗೆಏಳನೇ ಸ್ಥಾನದಲ್ಲಿದೆ.

ಈ ಹಿನ್ನೆಲೆಯಲ್ಲಿ ಇತ್ತಂಡಗಳಿಗೂ ಈ ಪಂದ್ಯ ಮುಖ್ಯವೆನಿಸಿದ್ದು, ಎಂಸಿಎಎಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವು ಹೆಚ್ಚು ರೋಚಕತೆಗೆ ಸಾಕ್ಷಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT