ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 PBKS vs SRH: ಎಡವಿದ ಪಂಜಾಬ್; ಸನ್‌ರೈಸರ್ಸ್‌ಗೆ ಸತತ 4ನೇ ಗೆಲುವು

Last Updated 17 ಏಪ್ರಿಲ್ 2022, 13:56 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಳು ವಿಕೆಟ್ ಅಂತರದ ಸುಲಭಗೆಲುವು ದಾಖಲಿಸಿದೆ.

ಟೂರ್ನಿ ಆರಂಭದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಹೈದರಾಬಾದ್ ಬಳಿಕದ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇನ್ನೊಂದೆಡೆ ಪಂಜಾಬ್ ತಂಡವು ಆಡಿರುವ ಆರು ಪಂದ್ಯಗಳಲ್ಲಿ ಮೂರನೇ ಸೋಲಿಗೆ ಶರಣಾಗಿದೆ.

ನಾಯಕ ಮಯಂಕ್ ಅಗರವಾಲ್ ಅನುಪಸ್ಥಿತಿಯು ಪಂಜಾಬ್‌ಗೆ ಕಾಡಿತ್ತು. ಉಮ್ರಾನ್ ಮಲಿಕ್ (28ಕ್ಕೆ 4 ವಿಕೆಟ್) ಹಾಗೂ ಭುವನೇಶ್ವರ್ ಕುಮಾರ್ (22ಕ್ಕೆ 3 ವಿಕೆಟ್) ದಾಳಿಗೆ ನಲುಗಿದ ಪಂಜಾಬ್, ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕದ (60) ಹೊರತಾಗಿಯೂ 151 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಇನ್ನೂ ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ 18.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ನಾಯಕ ಕೇನ್ ವಿಲಿಯಮ್ಸನ್ (3) ವಿಕೆಟ್ ಬೇಗನೆ ನಷ್ಟವಾದರೂ ಅಭಿಷೇಕ್ ಶರ್ಮಾ (31), ರಾಹುಲ್ ತ್ರಿಪಾಠಿ (34), ಏಡನ್ ಮಾರ್ಕರಮ್ (41*) ಹಾಗೂ ನಿಕೋಲಸ್ ಪೂರನ್ (35*) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪೈಕಿ ಏಡನ್ ಹಾಗೂ ಪೂರನ್ ಮುರಿಯದ ನಾಲ್ಕನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಪಂಜಾಬ್ ಪರ ರಾಹುಲ್ ಚಾಹರ್ ಎರಡು ವಿಕೆಟ್ ಕಬಳಿಸಿದರು.

ಉಮ್ರಾನ್ ಜಾದೂ, ಲಿವಿಂಗ್‌ಸ್ಟೋನ್ ಹೋರಾಟ ವ್ಯರ್ಥ...

ಈ ಮೊದಲು ಉಮ್ರಾನ್ ಮಲಿಕ್ ದಾಳಿಗೆ ತತ್ತರಿಸಿದ ಪಂಜಾಬ್ 151ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 61 ರನ್ ಗಳಿಸುವಷ್ಟರಲ್ಲಿ ಉಸ್ತುವಾರಿ ನಾಯಕ ಶಿಖರ್ ಧವನ್ (8), ಪ್ರಭಸಿಮ್ರಾನ್ ಸಿಂಗ್ (14), ಜಾನಿ ಬೆಸ್ಟೊ (12) ಹಾಗೂ ಜಿತೇಶ್ ಶರ್ಮಾ (11) ವಿಕೆಟ್‌ಗಳನ್ನು ಕಳೆದುಕೊಂಡಿತು.

ಆದರೆ ವಿಕೆಟ್ ಬಿದ್ದರೂ ಆಕ್ರಮಣಕಾರಿಯಾಗಿ ಆಡುವ ಪಂಜಾಬ್ ರಣನೀತಿಯಿಂದಾಗಿ ಎಸ್‌ಆರ್‌ಎಚ್‌ಗೆ ತಿರುಗೇಟು ನೀಡಲು ಸಾಧ್ಯವಾಯಿತು. ಕೌಂಟರ್ ಅಟ್ಯಾಕ್ ಮಾಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಐದನೇ ವಿಕೆಟ್‌ಗೆ ಶಾರೂಕ್ ಖಾನ್ ಜೊತೆ ಸೇರಿ 61 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಲಿವಿಂಗ್‌ಸ್ಟೋನ್ ಅಬ್ಬರಿಸಿದರು. ಇನ್ನೊಂದೆಡೆ ಶಾರೂಕ್ ಖಾನ್ 26 ರನ್ ಗಳಿಸಿ ಔಟ್ ಆದರು.

33 ಎಸೆತಗಳನ್ನು ಎದುರಿಸಿದ ಲಿವಿಂಗ್‌ಸ್ಟೋನ್ 60 ರನ್ (5 ಬೌಂಡರಿ, 4 ಸಿಕ್ಸರ್) ಗಳಿಸಿದರು.ಇನ್ನುಳಿದಂತೆ ಒಡೀನ್ ಸ್ಮಿತ್ 13 ರನ್ ಗಳಿಸಿದರು.

ಹೈದರಾಬಾದ್ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.


ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಯಕ ಮಯಂಕ್ ಅಗರವಾಲ್ ಸೇವೆಯಿಂದ ಪಂಜಾಬ್ ವಂಚಿತವಾಗಿದೆ. ಈ ಹಿನ್ನೆಲೆಯಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ರೋಚಕ ಹಣಾಹಣಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಏಕೆಂದರೆ, ಎರಡೂ ತಂಡಗಳೂ ಈ ಟೂರ್ನಿಯಲ್ಲಿ ಸಿಹಿ, ಕಹಿಯನ್ನು ಸಮನಾಗಿ ಅನುಭವಿಸಿವೆ.

ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದರಾಬಾದ್ ತಂಡವು ಸತತ ಮೂರು ಜಯ ಸಾಧಿಸಿತು. ಜೇಸನ್ ರಾಯ್ ಮತ್ತು ಕೇನ್ ಉತ್ತಮ ಲಯದಲ್ಲಿದ್ದಾರೆ. ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್ ಮತ್ತು ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಕೊನೆಯ ಎಸೆತದವರೆಗೂ ಛಲದ ಹೋರಾಟ ಮಾಡುವ ನುರಿತ ಬೌಲರ್‌ಗಳು.

ಪಂಜಾಬ್ ತಂಡವು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳನ್ನು ಸೋಲಿಸಿದೆ. ತಾನು ಸೋತ ಪಂದ್ಯಗಳಲ್ಲಿಯೂ ವಿರೋಚಿತ ಹೋರಾಟ ಮಾಡಿತ್ತು.ಮಯಂಕ್, ಶಿಖರ್ ಧವನ್, ಹೊಸಪ್ರತಿಭೆ ಜಿತೇಶ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ಒಡೀನ್ ಸ್ಮಿತ್ ಪಂದ್ಯವನ್ನು ಗೆದ್ದುಕೊಡುವ ಆಟಗಾರನೆಂದು ಸಾಬೀತು ಮಾಡಿದ್ದಾರೆ. ರಬಾಡ ಮತ್ತು ಆರ್ಷದೀಪ್ ಸಿಂಗ್ ಕೂಡ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT