ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RCB vs GT: ಗುಜರಾತ್‌ ಗೆಲುವಿನ ಓಟ; ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು

Last Updated 30 ಏಪ್ರಿಲ್ 2022, 14:09 IST
ಅಕ್ಷರ ಗಾತ್ರ

ಮುಂಬೈ: ರಾಹುಲ್ ತೆವಾಟಿಯಾ (43*) ಹಾಗೂ ಡೇವಿಡ್ ಮಿಲ್ಲರ್ (39*) ಅಬ್ಬರದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ವಿರಾಟ್ ಕೊಹ್ಲಿ ಹೋರಾಟ ವ್ಯರ್ಥವೆನಿಸಿದೆ. ಅಲ್ಲದೆ ಆರ್‌ಸಿಬಿ ಸತತ ಮೂರನೇ ಸೋಲಿಗೆ ಶರಣಾಗಿದೆ.

ಅತ್ತ ಗೆಲುವಿನ ಓಟ ಮುಂದುವರಿಸಿರುವ ಗುಜರಾತ್, ಒಂಬತ್ತು ಪಂದ್ಯಗಳಲ್ಲಿ ಎಂಟನೇ ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇನ್ನೊಂದೆಡೆ 10 ಪಂದ್ಯಗಳಲ್ಲಿ ಐದನೇ ಸೋಲಿಗೆ ಶರಣಾಗಿರುವ ಆರ್‌ಸಿಬಿ, ಈ ಸೋಲಿನ ಹೊರತಾಗಿಯೂ ಐದನೇ ಸ್ಥಾನ ಕಾಪಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ವಿರಾಟ್ ಕೊಹ್ಲಿ (58) ಹಾಗೂ ರಜತ್ ಪಾಟಿದಾರ್ (52) ಅರ್ಧಶತಕಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಗುಜರಾತ್, ತೆವಾಟಿಯಾ ಹಾಗೂ ಮಿಲ್ಲರ್ ಸ್ಫೋಟಕ ಆಟದ ನೆರವಿನಿಂದ ಇನ್ನೂ ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ 19.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ (29) ಹಾಗೂ ಶುಭಮನ್ ಗಿಲ್ (31) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 51 ರನ್ ಪೇರಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ ಜೋಡಿ ಶಾಬಾಜ್ ಅಹಮದ್ ಹಾಗೂ ವನಿಂದು ಹಸರಂಗ, ಗುಜರಾತ್ ಓಟಕ್ಕೆ ಕಡಿವಾಣ ಹಾಕಿದರು.

ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (3) ವಿಕೆಟ್‌ಗಳನ್ನು ಶಾಬಾಜ್ ಪಡೆದರೆ ಸಹಾ ಹಾಗೂ ಸಾಯಿ ಸುದರ್ಶನ್ (20) ವಿಕೆಟ್‌ಗಳನ್ನು ಹಸರಂಗ ಗಳಿಸಿದರು. ಪರಿಣಾಮ 95ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಗುಜರಾತ್ ಸಂಕಷ್ಟಕ್ಕೊಳಗಾಯಿತು.

ಈ ವೇಳೆ ಜೊತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವಾಟಿಯಾ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ನಿರ್ಭಿತಿಯಿಂದ ಬ್ಯಾಟ್ ಬೀಸಿದ ಈ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು.

ನಿಧಾನವಾಗಿ ಪಂದ್ಯದಲ್ಲಿ ಆರ್‌ಸಿಬಿ ಹಿಡಿತವನ್ನು ಕಳೆದುಕೊಂಡಿತು. ಮುರಿಯದ ಐದನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ಕಟ್ಟಿದ ಮಿಲ್ಲರ್ ಹಾಗೂ ತೆವಾಟಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು.

25 ಎಸೆತಗಳನ್ನು ಎದುರಿಸಿದ ತೆವಾಟಿಯಾ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾಗದೆ ಉಳಿದರು. 24 ಎಸೆತಗಳನ್ನು ಎದುರಿಸಿದ ಮಿಲ್ಲರ್ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಅಜೇಯರಾಗುಳಿದರು.

ಕೊಹ್ಲಿ, ಪಾಟಿದಾರ್ ಅರ್ಧಶತಕ ಸಾಧನೆ...
ಈ ಮೊದಲುಕೊಹ್ಲಿ ಹಾಗೂ ಪಾಟಿದಾರ್ (52) ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ, ಆರು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.

ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಮಗದೊಮ್ಮೆ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಡುಪ್ಲೆಸಿ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಹಿಂತಿರುಗಿದರು.

ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಕಳೆದ ಕೆಲವು ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಕೊಹ್ಲಿ, ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದರು.

ಕೊಹ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಪಾಟಿದಾರ್ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅತ್ತ ಪಾಟಿದಾರ್ 29 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಅಲ್ಲದೆ ದ್ವಿತೀಯ ವಿಕೆಟ್‌ಗೆ 99 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

32 ಎಸೆತಗಳನ್ನು ಎದುರಿಸಿದ ಪಾಟಿದಾರ್ 52 ರನ್ (5 ಬೌಂಡರಿ, 2 ಸಿಕ್ಸರ್) ಗಳಿಸಿದರು. ಅತ್ತ ಐಪಿಎಲ್‌ನಲ್ಲಿ 43ನೇ ಅರ್ಧಶತಕ ಗಳಿಸಿದ ಕೊಹ್ಲಿ 53 ಎಸೆತಗಳಲ್ಲಿ 58 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಕೊನೆಯ ಹಂತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (33 ರನ್‌, 18 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂಮಹಿಪಾಲ್ ಲೊಮ್ರೊರ್ (16 ರನ್, 8 ಎಸೆತ) ಉಪಯುಕ್ತ ಕಾಣಿಕೆ ನೀಡಿದರು. ಈ ಮೂಲಕ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಆದರೆದಿನೇಶ್ ಕಾರ್ತಿಕ್ (2) ನಿರಾಸೆ ಮೂಡಿಸಿದರು.

ಗುಜರಾತ್ ಪರ ಪ್ರದೀಪ್ ಸಾಂಗ್ವಾನ್ 19 ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು.

ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ...
ಈ ಮೊದಲು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ಡುಪ್ಲೆಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ಉತ್ತಮ ಮೊತ್ತದತ್ತ ದಾಪುಗಾಲನ್ನಿಟ್ಟಿದೆ. ತಾಜಾ ವರದಿಗಳ ವೇಳೆಗೆ ಆರ್‌ಸಿಬಿ 13 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿರುವ ರಜತ್ ಪಾಟಿದಾರ್ (46) ಕ್ರೀಸಿನಲ್ಲಿದ್ದಾರೆ.

ಹನ್ನೊಂದರ ಬಳಗ

ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲಿಗೆ ಶರಣಾಗಿರುವ ಆರ್‌ಸಿಬಿ, ಈ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.

ಇನ್ನೊಂದೆಡೆ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT