ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RCB vs GT: ಕೊಹ್ಲಿ ಮಿಂಚು; ಗುಜರಾತ್ ಮಣಿಸಿದ ಆರ್‌ಸಿಬಿ ಕನಸು ಜೀವಂತ

ಅಕ್ಷರ ಗಾತ್ರ

ಮುಂಬೈ: ವಿರಾಟ್ ಕೊಹ್ಲಿ (73) ಹಾಗೂ ಫಫ್ ಡುಪ್ಲೆಸಿ (44) ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲು ಅನುಭವಿಸಿದರೆ ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆಯಿಡಲಿದೆ.

ಆರ್‌ಸಿಬಿ 14 ಪಂದ್ಯಗಳಲ್ಲಿ ಎಂಟನೇ ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಡೆಲ್ಲಿ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.

ಆರ್‌ಸಿಬಿ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯಿಂದ ನಿರ್ಗಮಿಸಿದೆ.

ಇನ್ನೊಂದೆಡೆ ಈ ಸೋಲಿನ ಹೊರತಾಗಿಯೂ ಗುಜರಾತ್, 20 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಗೆ ನಾಯಕ ಫಫ್ ಡುಪ್ಲೆಸಿ ಹಾಗೂ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ಬಿರುಸಿನ ಆರಂಭವೊದಗಿಸಿದರು. ಫಫ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ವಿರಾಟ್ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.

ಪರಿಣಾಮ 5.3 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ವಿರಾಟ್, 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.

ಕೊಹ್ಲಿ-ಡುಪ್ಲೆಸಿ ಜೋಡಿ ಗುಜರಾತ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೆ ಶತಕದ ಜೊತೆಯಾಟವನ್ನು ಕಟ್ಟಿದರು.

12ನೇ ಓವರ್‌ನಲ್ಲಿ ತಂಡದ ಮೊತ್ತ 100ರ ಗಡಿ ದಾಟಿತು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ನಾಯಕ ಡುಪ್ಲೆಸಿ ಅವರನ್ನು ರಶೀದ್ ಖಾನ್ ಔಟ್ ಮಾಡಿದರು.

ಆಗಲೇ ಕೊಹ್ಲಿ ಜೊತೆಗೆ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 115 ರನ್‌ಗಳ ಜೊತೆಯಾಟ ಕಟ್ಟಿದರು. 38 ಎಸೆತಗಳನ್ನು ಎದುರಿಸಿದ ಡುಪ್ಲೆಸಿ ಐದು ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿದರು.

ಬಳಿಕ ಮ್ಯಾಕ್ಸ್‌ವೆಲ್ ಜೊತೆ ಸೇರಿದ ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಗೆಲುವಿನ ಅಂಚಿನಲ್ಲಿ ಔಟ್ ಆದರು. 54 ಎಸೆತಗಳನ್ನು ಎದುರಿಸಿದ ಕೊಹ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.

ಅತ್ತ ಕೇವಲ 18 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿದ ಮ್ಯಾಕ್ಸ್‌ವೆಲ್,ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೂಲಕ ಇನ್ನೂ ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಗುಜರಾತ್ ಪರ ರಶೀದ್ ಎರಡು ವಿಕೆಟ್ ಗಳಿಸಿದರು.

ಹಾರ್ದಿಕ್ ಹೋರಾಟ ವ್ಯರ್ಥ...

ಈ ಮೊದಲು ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ (62*) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ಗೆ, ಜೋಶ್ ಹ್ಯಾಜಲ್‌ವುಡ್ ಮೊದಲ ಆಘಾತ ನೀಡಿದರು. ಶುಭಮನ್ ಗಿಲ್ (1) ಬ್ಯಾಟ್‌ಗೆ ಸವರಿದ ಚೆಂಡನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು.

ಬಳಿಕ ಮ್ಯಾಥ್ಯೂ ವೇಡ್ (16) ಅವರನ್ನು ಮ್ಯಾಕ್ಸ್‌ವೆಲ್ ಔಟ್ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಹಾ (31) ರನೌಟ್ ಆದರು. ಇದರಿಂದಾಗಿ 62ಕ್ಕೆ ಮೂರು ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆ ಸೇರಿದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಆರ್‌ಸಿಬಿ ಪಾಳಯದಲ್ಲಿ ಆಂತಕ ಸೃಷ್ಟಿಸಿದರು.

ಅವರಿಬ್ಬರು ದ್ವಿತೀಯ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ಕಟ್ಟಿದರು. 16ನೇ ಓವರ್‌ನಲ್ಲಿ ತಮ್ಮದೇ ಓವರ್‌ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದ ವನಿಂದು ಹಸರಂಗ, ಅಪಾಯಕಾರಿ ಮಿಲ್ಲರ್ ಅವರನ್ನು ಹೊರದಬ್ಬಿದರು. 25 ಎಸೆತಗಳನ್ನು ಎದುರಿಸಿದ ಮಿಲ್ಲರ್ ಮೂರು ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.

ಅತ್ತ ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ ಸಾಧನೆ ಮಾಡಿದರು.

ಕೊನೆಯ ಹಂತದಲ್ಲಿ ನಾಯಕ ಪಾಂಡ್ಯಗೆ ರಶೀದ್ ಖಾನ್ ಉತ್ತಮ ಬೆಂಬಲ ನೀಡಿದರು. ಈ ಮೂಲಕ ಗುಜರಾತ್ 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

47 ಎಸೆತಗಳನ್ನು ಎದುರಿಸಿದ ಪಾಂಡ್ಯ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ಔಟಾಗದೆ ಉಳಿದರು. ರಶೀದ್ ಖಾನ್ 6 ಎಸೆತಗಳಲ್ಲಿ ಅಜೇಯ19 ರನ್ (2 ಸಿಕ್ಸರ್, 1 ಬೌಂಡರಿ) ಗಳಿಸಿದರು.

ಆರ್‌ಸಿಬಿ ಪರ ಹ್ಯಾಜಲ್‌ವುಡ್ ಎರಡು ಮತ್ತು ಮ್ಯಾಕ್ಸ್‌ವೆಲ್ ಹಾಗೂ ಹಸರಂಗ ತಲಾ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್...

ಈ ಮೊದಲು ಟಾಸ್ ಗೆದ್ದಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಸಿದ್ದಾರ್ಥ್ ಕೌಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.


ಹನ್ನೊಂದರ ಬಳಗ:

ಆರ್‌ಸಿಬಿ ಪ್ಲೇ-ಆಫ್ ಕನಸು...

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಟೂರ್ನಿಯಿಂದ ಬೇಗನೇ ಹೊರಬೀಳುವ ಆತಂಕ ಎದುರಿಸುತ್ತಿದೆ. ಗುರುವಾರ ನಡೆಯಲಿರುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಿಂದ ಜಯಿಸಲೇಬೇಕಾದ ಒತ್ತಡದಲ್ಲಿದೆ. ಅಷ್ಟೇ ಅಲ್ಲ ನಾಲ್ಕನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಪರಾಭವಗೊಳ್ಳುವುದನ್ನು ಎದುರು ನೋಡಬೇಕು.

ಒಂದೊಮ್ಮೆ ಆರ್‌ಸಿಬಿ ಮತ್ತು ಡೆಲ್ಲಿ ತಮ್ಮ ಕೊನೆಯ ಪಂದ್ಯಗಳಲ್ಲಿ ಗೆದ್ದರೆ ಉಭಯ ತಂಡಗಳು ತಲಾ 16 ಅಂಕಗಳಿಸುತ್ತವೆ. ಆಗ ನೆಗೆಟಿವ್ ನೆಟ್‌ ರನ್‌ರೇಟ್ (–0.323) ಹೊಂದಿರುವ ಆರ್‌ಸಿಬಿಯು ಹೊರಬೀಳುವುದು ಖಚಿತ. ಬಹಳ ದೊಡ್ಡ ಅಂತರದ ಜಯಸಾಧಿಸಿ, ರನ್‌ರೇಟ್ ಕೂಡ ಉತ್ತಮಪಡಿಸಿಕೊಳ್ಳುವ ಅಗತ್ಯ ಆರ್‌ಸಿಬಿಗೆ ಇದೆ. ಎರಡೂ ತಂಡಗಳು ಸೋತರೂ ಆರ್‌ಸಿಬಿ ಹೊರಬೀಳುವುದು.

ಬೆಂಗಳೂರು ಮತ್ತು ಡೆಲ್ಲಿ ತಂಡ ಗಳು ಸೋತು, ಇತ್ತ 12 ಅಂಕ ಗಳಿಸಿ ರುವ ಪಂಜಾಬ್ ಉಳಿದಿರುವ ಪಂದ್ಯ ಗೆದ್ದರೆ 14 ಅಂಕ ಗಳಿಸಿದ ತಂಡಗಳ ನಡುವೆ ಪೈಪೋಟಿ ಬೀಳಲಿದೆ. ಆರ್‌ಸಿಬಿ ಬಿಟ್ಟರೆ ಉಳಿದ ಮೂರು ತಂಡಗಳು ಪಾಸಿಟಿವ್ ರನ್‌ರೇಟ್ ಹೊಂದಿವೆ.

ಇದೇ ಮೊದಲ ಬಾರಿ ಆಡುತ್ತಿರುವ ಗುಜರಾತ್ ಟೈಟನ್ಸ್ ತಂಡವು ಈಗಾಗಲೇ 20 ಅಂಕ ಗಳಿಸಿ ಪ್ಲೇ ಆಫ್‌ ಪ್ರವೇಶಿಸಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಳಗವು ಗೆಲುವಿನ ಓಟ ಮುಂದುವರಿಸುವ ಛಲದಲಿದ್ದು, ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ. ಅದರಲ್ಲಿಯೂ ಫಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್, ಶಾಬಾಜ್ ಅಹಮದ್ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜಲ್‌ವುಡ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದಿರುವುದು ಚಿಂತೆಯ ವಿಷಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT