ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 KKR vs LSG | ಈಡನ್‌ನಲ್ಲಿ 'ಬೀಸಾಟ ವೀರ'ರ ಮುಖಾಮುಖಿ

ಕೋಲ್ಕತ್ತ ನೈಟ್ ರೈಡರ್ಸ್–ಲಖನೌ ಸೂಪರ್ ಜೈಂಟ್ಸ್‌ ಹಣಾಹಣಿ ಇಂದು
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕೋಲ್ಕತ್ತ: ಲಖನೌ ಸೂಪರ್‌ ಜೈಂಟ್ಸ್‌ನಲ್ಲಿ ಕ್ವಿಂಟನ್ ಡಿಕಾಕ್, ನಿಕೊಲಸ್ ಪೂರನ್ ಇದ್ದರೆ, ಇನ್ನೊಂದೆಡೆ ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ  ಸುನಿಲ್ ನಾರಾಯಣ್ ಮತ್ತು ಆ್ಯಂಡ್ರೆ ರಸೆಲ್ ಅವರಿದ್ದಾರೆ. ಅದರಿಂದಾಗಿಯೇ ಭಾನುವಾರ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಈ ಎರಡೂ ತಂಡಗಳ ಹಣಾಹಣಿಯಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಯುವ ನಿರೀಕ್ಷೆ ಗರಿಗೆದರಿದೆ.

ಆದರೆ ಕ್ರಿಕೆಟ್ ಎಂಬ ಅನಿಶ್ಚಿತತೆಗಳ ಆಟದಲ್ಲಿ ಏನು ಬೇಕಾದರೂ ಆಗಬಹುದು. ಅದಕ್ಕೆ ಈ ಎರಡೂ ತಂಡಗಳೇ ಸೂಕ್ತ ಉದಾಹರಣೆ.

ಲಖನೌ ತಂಡವು ತನ್ನ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತಿತ್ತು. ಡೆಲ್ಲಿ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಮುಂದೆ ಪೂರನ್ ಖಾತೆಯನ್ನೇ ತೆರೆಯಲಿಲ್ಲ. ಡಿಕಾಕ್ ಕೂಡ ಹೆಚ್ಚು ಅಬ್ಬರಿಸಿರಲಿಲ್ಲ. ಆದರೆ ಲಖನೌ ತಂಡದ ಯುವಪ್ರತಿಭೆ ಆಯುಷ್ ಬಡೋನಿ ಮಿಂಚಿದ್ದರು. ನಾಯಕ ಕೆ.ಎಲ್. ರಾಹುಲ್ 177ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದರು. ದೇವದತ್ತ ಪಡಿಕ್ಕಲ್ ವೈಫಲ್ಯ ಮುಂದುವರಿಯಿತು. ಸ್ಟೊಯಿನಿಸ್ ಅನಿಶ್ಚಿತ ಫಾರ್ಮ್ ಕೂಡ ಸುಧಾರಿಸಲಿಲ್ಲ.

ಆದರೆ ಗಳಿಸಿದ್ದ ಗೌರವಾರ್ಹ ಮೊತ್ತವನ್ನು ರಕ್ಷಿಸಿಕೊಳ್ಳಲು ತಂಡದ ಬೌಲರ್‌ಗಳಿಗೆ ಸಾಧ್ಯವಾಗಿರಲಿಲ್ಲ.  ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಯಶ್ ಠಾಕೂರ್ ಬಿಟ್ಟರೆ ಉಳಿದ ಬೌಲರ್‌ಗಳು ದುಬಾರಿಯಾದರು. 

ಲಖನೌ ತಂಡವು ಇದುವರೆಗೆ ಐದು ಪಂದ್ಯಗಳಲ್ಲಿಆಡಿದೆ. ಅದರಲ್ಲಿ ಮೂರು ಗೆದ್ದು ಎರಡರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕೋಲ್ಕತ್ತ ತಂಡವು ನಾಲ್ಕು ಪಂದ್ಯ ಆಡಿದ್ದು ಮೂರರಲ್ಲಿ ಜಯಿಸಿ, ಒಂದರಲ್ಲಿ ಸೋತಿದೆ. ಎರಡನೇ ಸ್ಥಾನದಲ್ಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿ  ಲಖನೌ ಗೆದ್ದರೆ ಈ ಸ್ಥಾನಗಳು ಅದಲು ಬದಲಾಗಬಹುದು.

ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ತಂಡವು ತನ್ನ ಮೂರು ಪಂದ್ಯಗಳಲ್ಲಿಯೂ ಸತತ ಜಯ ಸಾಧಿಸಿತ್ತು. ಆದರೆ ನಾಲ್ಕನೆಯದ್ದರಲ್ಲಿ ಚೆನ್ನೈ ಎದುರು ಸೋತಿತು. ಸ್ಪಿನ್ನರ್ ರವೀಂದ್ರ ಜಡೇಜ ಮೋಡಿಗೆ ಮಣಿಯಿತು.

ಫಿಲ್ ಸಾಲ್ಟ್, ಸುನಿಲ್, ಅಂಗ್‌ಕ್ರಿಷ್‌ ರಘುವಂಶಿ, ಶ್ರೇಯಸ್ ಅಯ್ಯರ್‌, ವೆಂಕಟೇಶ್ ಅಯ್ಯರ್, ರಿಂಕುಸಿಂಗ್, ರಸೆಲ್ ಮತ್ತು ರಮಣದೀಪ್ ಸಿಂಗ್ ಅವರೆಲ್ಲರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವವರೇ. ಒಬ್ಬರು ಬಿಟ್ಟರೆ ಇನ್ನೊಬ್ಬರು ಬೌಲರ್‌ಗಳ ಮೇಲೆ ನಿರ್ದಯ ಪ್ರಹಾರ ಮಾಡುವವರೇ. ಆದರೂ ಚೆನ್ನೈ ಎದುರು ಮಂಕಾಗಿದ್ದರು.

ಇದೀಗ ತವರಿನಲ್ಲಿ ಮತ್ತೆ ಜಯದ ಹಾದಿಗೆ ಮರಳುವ ಛಲದಲ್ಲಿದ್ದಾರೆ. ಸುನಿಲ್ ಮತ್ತು ರಸೆಲ್ ಬೌಲಿಂಗ್‌ನಲ್ಲಿಯೂ ಪ್ರತಾಪ ಮೆರೆಯಬಲ್ಲರು. ‘ದುಬಾರಿ’ ಬೌಲರ್ ಮಿಚೆಲ್ ಸ್ಟಾರ್ಕ್ ಹಾಗೂ ‘ಮಿಸ್ಟರಿ ಬೌಲರ್’ ವರುಣ್ ಚಕ್ರವರ್ತಿ ವಿಕೆಟ್ ಗಳಿಸಿದರೆ ತಂಡಕ್ಕೆ ಹೆ್ಚ್ಚು ಅನುಕೂಲವಾಗಬಹುದು. 

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್.

ಸುನಿಲ್ ನಾರಾಯಣ ಮತ್ತು ಶ್ರೇಯಸ್ ಅಯ್ಯರ್  –ಪಿಟಿಐ ಚಿತ್ರ
ಸುನಿಲ್ ನಾರಾಯಣ ಮತ್ತು ಶ್ರೇಯಸ್ ಅಯ್ಯರ್  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT