ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs LSG: ಕ್ವಿಂಟನ್, ಪೂರನ್ ಆರ್ಭಟ; ಆರ್‌ಸಿಬಿಗೆ ಮತ್ತೊಂದು ಸೋಲು

Published 2 ಏಪ್ರಿಲ್ 2024, 19:06 IST
Last Updated 2 ಏಪ್ರಿಲ್ 2024, 19:06 IST
ಅಕ್ಷರ ಗಾತ್ರ

ಬೆಂಗಳೂರು: ವೇಗದ ಬೌಲಿಂಗ್‌ನ ನವತಾರೆ ಮಯಂಕ್ ಯಾದವ್ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೂಳೆಬ್ಬಿಸಿದರು.

ದೆಹಲಿಯ 21 ವರ್ಷದ ಮಯಂಕ್ (4–0–14–3) ಅವರ ಬೌಲಿಂಗ್‌ನಿಂದಾಗಿ ಲಖನೌ ಸೂಪರ್ ಜೈಂಟ್ಸ್ ತಂಡವು 28 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿತು. ‌ 182 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಬೆಂಗಳೂರು ತಂಡವು 19.4 ಓವರ್‌ಗಳಲ್ಲಿ 153 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.  ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿತು.

ಕಳೆದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ (22; 16) ಮತ್ತು ಫಫ್ ಡುಪ್ಲೆಸಿ (19 ರನ್) ಅವರು ಇಲ್ಲಿಯೂ ಉತ್ತಮ ಆರಂಭ ನೀಡಿದರು.  ಪದಾರ್ಪಣೆಯ ಐಪಿಎಲ್ ಟೂರ್ನಿ ಆಡುತ್ತಿರುವ ಮಣಿಮಾರನ್ ಸಿದ್ಧಾರ್ಥ್ ಹಾಕಿದ ಐದನೇ ಓವರ್‌ನಲ್ಲಿ ವಿರಾಟ್ ಅವರು ಪಡಿಕ್ಕಲ್ ಪಡೆದ ಅಮೋಘ ಕ್ಯಾಚ್‌ಗೆ ಔಟಾದರು. ಸಿದ್ಧಾರ್ಥ್ ಅವರಿಗೆ ಐಪಿಎಲ್‌ನಲ್ಲಿ ಇದು ಮೊಟ್ಟಮೊದಲ ವಿಕೆಟ್ ಆಯಿತು. ಇಂಪ್ಯಾಕ್ಟ್‌ ಪ್ಲೇಯರ್ ಮಹಿಪಾಲ್ ಲೊಮ್ರೊರ್ (33; 13ಎ) ಅವರ ಪ್ರಯತ್ನವೂ ಆರ್‌ಸಿಬಿಗೆ ಜಯ ತಂದುಕೊಡಲಿಲ್ಲ.

 ಫಫ್ ಡುಪ್ಲೆಸಿ ರನೌಟ್‌ಗೂ ಪಡಿಕ್ಕಲ್ ಕಾರಣರಾದರು. ಇದಾದ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರಾನ್ ಗ್ರೀನ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಮಯಂಕ್ ಮಿಂಚಿದರು. ಈ ಪಂದ್ಯದಲ್ಲಿ ಲಯಕ್ಕೆ ಮರಳಿದ್ದ ರಜತ್ ಪಾಟೀದಾರ್‌ಗೂ ಮಯಂಕ್ ಅವರೇ ಪೆವಿಲಿಯನ್ ದಾರಿ ತೋರಿಸಿದರು. ಅಫ್ಗನ್ ಬೌಲರ್ ನವೀನ್ ಉಲ್ ಹಕ್ ಕೂಡ ಎರಡು ವಿಕೆಟ್ ಗಳಿಸಿದರು. ಇನಿಂಗ್ಸ್‌ ಕೊನೆಯಲ್ಲಿ ಸಿರಾಜ್ ಹೊಡೆದ ಎರಡು ಸಿಕ್ಸರ್‌ಗಳ ನೆನಪಿನೊಂದಿಗೆ 33 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಮೈದಾನದಿಂದ ಹೊರನಡೆದರು.

ತುಟ್ಟಿಯಾದ ಕ್ಯಾಚ್ ಡ್ರಾಪ್

ಆತಿಥೇಯ ತಂಡವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳಿಗೆ ಸ. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತು ಸ್ಪೋಟಕ ಬ್ಯಾಟರ್ ನಿಕೊಲಸ್ ಪೂರನ್ ಅವರ ಕ್ಯಾಚ್‌ಗಳನ್ನು ಕೈಚೆಲ್ಲಿದ ಆತಿಥೇಯರು ಸಂಕಷ್ಟಕ್ಕೆ ಸಿಲುಕಿದರು.

ಅದರಲ್ಲೂ ಏಳನೇ ಓವರ್‌ನಲ್ಲಿ ಕ್ವಿಂಟನ್ ಮತ್ತು 17ನೇ ಓವರ್‌ನಲ್ಲಿ ನಿಕೊಲಸ್ ಪೂರನ್ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾದವು.  ಕ್ವಿಂಟನ್ (81; 56ಎ, 4X8, 6X5)  ಹಾಗೂ ಪೂರನ್ (ಔಟಾಗದೆ 40; 21ಎ, 4X1, 6X5) ಅವರಿಬ್ಬರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಲಖನೌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್ ಗಳಿಸಿತು. 

ಕ್ವಿಂಟನ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆದರೂ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಯಶ್ ದಯಾಳ್ ಅವರು ಶಿಸ್ತಿನ ದಾಳಿ ನಡೆಸಿ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದರು. ಅವರ ಶ್ರಮವನ್ನು ಪೂರನ್ ಮಣ್ಣುಪಾಲು ಮಾಡಿದರು.   ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಐದು ಸಿಕ್ಸರ್‌ಗಳನ್ನು ಎತ್ತಿದರು.  

ಮೈದಾನದಿಂದ ಹೊರಹೋದ ಚೆಂಡು

ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ 50 ರನ್‌ ಹರಿದುಬರಲು ನಿಕೋಲಸ್ ಪೂರನ್ ಕಾರಣರಾದರು.   ಟಾಪ್ಲಿ ಹಾಕಿದ್ದ 17ನೇ ಓವರ್‌ನಲ್ಲಿ  ಕ್ವಿಂಟನ್ ಔಟಾದರು. ಅದೇ ಓವರ್‌ನಲ್ಲಿ ಪೂರನ್ ಒಂದು ಜೀವದಾನ ಪಡೆದಿದ್ದರು. ಅವರ ಬ್ಯಾಟ್‌ ಮೇಲಂಚಿಗೆ ಬಡಿದು ಮೇಲಕ್ಕೆ ಚಿಮ್ಮಿದ್ದ ಚೆಂಡು ಕವರ್ಸ್‌ನತ್ತ ಹೋಗಿತ್ತು. ವಿಕೆಟ್‌ಕೀಪರ್ ಅನುಜ್ ರಾವತ್ ಓಡಿ ಹೋಗಿ ಕ್ಯಾಚ್ ಪಡೆಯುವ ಪ್ರಯತ್ನ ಮಾಡಿ ವಿಫಲರಾದರು. 

19ನೇ ಓವರ್‌ನಲ್ಲಿ ಪೂರನ್ ‘ಸಿಕ್ಸರ್‌ ಹ್ಯಾಟ್ರಿಕ್’ ಸಾಧಿಸಿದರು. ಅದರಲ್ಲಿ ಒಂದು ಸಿಕ್ಸರ್‌ನ ಚೆಂಡು ಡೀಪ್‌ ಮಿಡ್‌ವಿಕೆಟ್‌ ಮೇಲಿನ ಗ್ಯಾಲರಿಯ ಚಾವಣಿ ದಾಟಿ ಹೊರಗೆ ಹೋಗಿಬಿತ್ತು. ಕೊನೆಯ ಓವರ್‌ನಲ್ಲಿ ಸಿರಾಜ್ ಮೊದಲ ಮೂರು ಎಸೆತಗಳನ್ನು ಡಾಟ್ ಮಾಡಿದ್ದರು. ಆದರೆ ನಂತರದ ಎರಡೂ ಎಸೆತಗಳನ್ನು ಪೂರನ್ ಸಿಕ್ಸರ್‌ಗೆತ್ತಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT