ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಹರಾಜಿನಲ್ಲಿ ಗರಿಷ್ಠ ಬೆಲೆ ದಕ್ಕಿಸಿಕೊಂಡ ವರುಣ್ ಯಾರು ಗೊತ್ತೆ?

ಮತ್ತೆ ರಾಜಸ್ಥಾನ ರಾಯಲ್ಸ್‌ ಪಾಲಾದ ಜಯದೇವ್ ಉನದ್ಕತ್‌: ಚೇತೇಶ್ವರ ಪೂಜಾರ, ಬ್ರೆಂಡನ್‌ ಮೆಕ್ಲಮ್‌ಗೆ ಸಿಗದ ‘ಬೆಲೆ’: ಯುವಿಗೆ ₹ 1 ಕೋಟಿ ಮೊತ್ತ
Last Updated 19 ಡಿಸೆಂಬರ್ 2018, 1:17 IST
ಅಕ್ಷರ ಗಾತ್ರ

ಜೈಪುರ: ತಮಿಳುನಾಡಿನ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ₹ 8.4 ಕೋಟಿ ಮೊತ್ತ ಪಡೆದು ಅಚ್ಚರಿ ಮೂಡಿಸಿದ್ದಾರೆ.

ವರುಣ್‌ ಅವರನ್ನು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಸೆಳೆದುಕೊಂಡಿದೆ. ಹರಾಜು ನಡೆಸಿಕೊಟ್ಟ ಹ್ಯೂ ಎಡ್ಮಿಡಸ್‌ ಅವರು ವರುಣ್ ಹೆಸರು ಕೂಗುತ್ತಿದ್ದಂತೆ ಫ್ರಾಂಚೈಸ್‌ಗಳು ಜಿದ್ದಿಗೆ ಬಿದ್ದ ಹಾಗೆ ಬಿಡ್‌ ಮಾಡಿದವು. ಹೀಗಾಗಿ ‘ಬೆಲೆ’ ಏರುತ್ತಲೇ ಹೋಯಿತು. ಅಂತಿಮವಾಗಿ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವನ್‌ ವರುಣ್‌ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ವರುಣ್‌ ಯಾರು ಗೊತ್ತೆ?

ವಾಸ್ತು ವಿನ್ಯಾಸಕಾರ (ಆರ್ಕಿಟೆಕ್ಟ್‌) ವರುಣ್‌ ಅವರು 13ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಶುರುಮಾಡಿದ್ದರು. 17ನೇ ವಯಸ್ಸಿನವರೆಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿದ್ದರು. ಅವರಿಗೆ ವಿವಿಧ ವಯೋಮಾನದ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಗಲಿಲ್ಲ. ಹೀಗಿದ್ದರೂ ಅವರ ಕ್ರಿಕೆಟ್‌ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ.

ಪದವಿ ವ್ಯಾಸಂಗದ ನಂತರ ಕ್ರೊಮ್‌ಬೆಸ್ಟ್‌ ಕ್ಲಬ್‌ಗೆ ಸೇರಿದ ಅವರು ವೇಗದ ಬೌಲರ್‌ ಆಗಿ ಗುರುತಿಸಿಕೊಂಡರು. ಪಂದ್ಯ ವೊಂದರ ವೇಳೆ ಗಂಭೀರವಾಗಿ ಗಾಯಗೊಂಡು ಕೆಲ ಕಾಲ ಅಂಗಳದಿಂದ ದೂರ ಉಳಿದಿದ್ದರು. ಅದರಿಂದ ಚೇತರಿಸಿಕೊಂಡ ನಂತರ ಜ್ಯೂಬಿಲಿ ಕ್ಲಬ್‌ ಸೇರಿದರು. ಈ ಕ್ಲಬ್‌ ಪರ ರೋಬಸ್ಟ್‌ ಚೆನ್ನೈ ಲೀಗ್‌ನಲ್ಲಿ ಆಡಿದ್ದ ವರುಣ್‌, ಆಫ್‌ಬ್ರೇಕ್‌, ಲೆಗ್‌ಬ್ರೇಕ್‌, ಗೂಗ್ಲಿ, ಕೇರಂ ಬಾಲ್‌, ಫ್ಲಿಪ್ಪರ್‌ ಮತ್ತು ಟಾಪ್‌ ಸ್ಪಿನ್‌ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದರು. ಏಳು ಪಂದ್ಯಗಳನ್ನು ಆಡಿದ್ದ ಅವರು 8.26ರ ಸರಾಸರಿಯಲ್ಲಿ 31 ವಿಕೆಟ್‌ ಉರುಳಿಸಿದ್ದರು.

ಈ ವರ್ಷ ನಡೆದಿದ್ದ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌), ವರುಣ್‌ ಕ್ರೀಡಾ ಬದುಕಿಗೆ ತಿರುವು ನೀಡಿತು. ಮಧುರೈ ಪ್ಯಾಂಥರ್ಸ್‌ ತಂಡದ ಪರ ಆಡಿದ್ದ ಅವರು ಮೋಡಿ ಮಾಡಿದ್ದರು.

ಟಿಎನ್‌ಪಿಎಲ್‌ಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳ ಆಟಗಾರರಿಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ವಿಎಪಿ ಟ್ರೋಫಿ ಕ್ರಿಕೆಟ್‌ ಲೀಗ್‌ನಲ್ಲಿ ವಿಜಯ ಕ್ಲಬ್‌ ಪರ ಆಡಿ ಗಮನ ಸೆಳೆದಿದ್ದ ಅವರಿಗೆ ಈ ಬಾರಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುವ ಅವಕಾಶ ಸಿಕ್ಕಿತ್ತು. ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳಿಂದ 22 ವಿಕೆಟ್‌ ಕಬಳಿಸಿ ಸಾಮರ್ಥ್ಯವನ್ನುಜಗಜ್ಜಾಹೀರುಗೊಳಿಸಿದ್ದರು.

ಜಯದೇವ್‌ಗೂ ಭಾರಿ ಬೆಲೆ

ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ಕೂಡಾ ₹ 8.4 ಕೋಟಿ ಮೌಲ್ಯ ಪಡೆದರು. ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ ಖರೀದಿಸಿತು. ಜಯದೇವ್‌ ಅವರು ಈ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 11ನೇ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದು ದಾಖಲೆ ನಿರ್ಮಿಸಿದ್ದರು. ಅವರನ್ನು ರಾಯಲ್ಸ್‌ ₹11.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ತಂಡದಿಂದ ಕೈಬಿಟ್ಟು ಹಿಂದಿಗಿಂತಲೂ ಕಡಿಮೆ ಮೊತ್ತಕ್ಕೆ ಸೆಳೆದುಕೊಳ್ಳುವಲ್ಲಿ ರಾಯಲ್ಸ್‌ ಯಶಸ್ವಿಯಾಗಿದೆ.

ಶ್ರೀಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಮೂಲ ಬೆಲೆಗೆ (₹ 2 ಕೋಟಿ) ಸೆಳೆದುಕೊಂಡಿದೆ. ಲಸಿತ್‌ ಅವರು ಹಿಂದಿನ ಆವೃತ್ತಿಯಲ್ಲಿ ಮುಂಬೈ ತಂಡದ ಬೌಲಿಂಗ್‌ ಸಲಹೆಗಾರರಾಗಿದ್ದರು.

ವಿಂಡೀಸ್‌ ಆಟಗಾರರಿಗೂ ಬೇಡಿಕೆ

ವೆಸ್ಟ್‌ ಇಂಡೀಸ್‌ ಆಟಗಾರರಿಗೂ ಹರಾಜಿನಲ್ಲಿ ಉತ್ತಮ ಮೊತ್ತ ಮೊತ್ತ ಲಭಿಸಿದವು. ₹ 50 ಲಕ್ಷ ಮೂಲಬೆಲೆ ಹೊಂದಿದ್ದ ಶಿಮ್ರನ್‌ ಹೆಟ್ಮೆಯರ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ₹ 4.2 ಕೋಟಿ ನೀಡಿ ಖರೀದಿಸಿತು.

ಆಲ್‌ರೌಂಡರ್‌ ಕಾರ್ಲೊಸ್‌ ಬ್ರಾಥ್‌ವೇಟ್‌ ಅವರಿಗೆ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ₹ 5 ಕೋಟಿ ನೀಡಿ ತನ್ನದಾಗಿಸಿಕೊಂಡಿತು. ಭಾರತದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೂ ₹ 5 ಕೋಟಿ ಲಭಿಸಿತು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನದಾಗಿಸಿಕೊಂಡಿತು.

ಮುಂಬೈ ಇಂಡಿಯನ್ಸ್‌ಗೆ ಯುವಿ

ಭಾರತದ ಅನುಭವಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರನ್ನು ಮುಂಬೈ ಇಂಡಿಯನ್ಸ್‌ ತನ್ನದಾಗಿಸಿಕೊಂಡಿತು. ಮೊದಲ ಬಾರಿ ಯುವಿ ಹೆಸರು ಹರಾಜಿನಲ್ಲಿ ಕೂಗಿದಾಗ ಅವರನ್ನು ಖರೀದಿಸಲು ಯಾರೂ ಆಸಕ್ತಿ ತೋರಲಿಲ್ಲ. ಮೊದಲ ಸುತ್ತಿನ ಹರಾಜು ಮುಗಿದ ನಂತರ ಮತ್ತೊಮ್ಮೆ ಯುವಿ ಹೆಸರು ಕೂಗಲಾಯಿತು. ಆಗ ಮುಂಬೈ ಇಂಡಿಯನ್ಸ್‌ ತಂಡ ಬಿಡ್‌ ಮಾಡಿತು. ನೀತಾ ಅಂಬಾನಿ ಒಡೆತನದ ಮುಂಬೈ ಫ್ರಾಂಚೈಸ್‌ ಯುವಿಗೆ ₹ 1 ಕೋಟಿ ನೀಡಿತು.ಯುವಕರತ್ತ ಒಲವು:ಈ ಬಾರಿಯ ಆಟಗಾರರ ಹರಾಜಿನಲ್ಲಿ ಫ್ರಾಂಚೈಸ್‌ಗಳು ಯುವಕರತ್ತ ಹೆಚ್ಚು ಒಲವು ತೋರಿದವು. ಪ್ರಯಾಸ್‌ ರೇ ಬರ್ಮನ್‌, ಪ್ರಭ್‌ ಸಿಮ್ರನ್‌ ಸಿಂಗ್‌ ಅವ ರಂತಹ ಚಿಗುರು ಮೀಸೆಯ ಹುಡುಗರು ಕುಬೇರರಾದರು.

ಪಶ್ಚಿಮ ಬಂಗಾಳದ 16ರ ಹರೆ ಯದ ಪ್ರಯಾಸ್‌ ಅವರನ್ನು ಆರ್‌ಸಿಬಿ ಸೆಳೆದುಕೊಂಡಿತು. ಪ್ರಯಾಸ್‌, ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದರು. ಪ್ರಭ್ ಸಿಮ್ರನ್‌ ಸಿಂಗ್, ಕಿಂಗ್ಸ್‌ ಇಲೆ ವನ್‌ ಪಂಜಾಬ್‌ ತಂಡದ ಪಾಲಾದರು. ₹ 20 ಲಕ್ಷ ಮೂಲಬೆಲೆ ಹೊಂದಿದ್ದ ಇವರಿಗೆ ಸಿಕ್ಕಿದ್ದು ₹ 4.8 ಕೋಟಿ.

ಮುಂಬೈಗೆ ಜಹೀರ್‌ ನಿರ್ದೇಶಕ

ಭಾರತದ ಹಿರಿಯ ವೇಗದ ಬೌಲರ್‌ ಜಹೀರ್‌ ಖಾನ್‌ ಅವರು ಮುಂಬೈ ಇಂಡಿಯನ್ಸ್‌ ತಂಡದ ಕ್ರಿಕೆಟ್‌ ಆಪರೇಷನ್ಸ್‌ ವಿಭಾಗದ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಮುಂಬೈ ತಂಡ ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ ಈ ವಿಷಯ ಪ್ರಕಟಿಸಿದೆ. ಜಹೀರ್‌ ಅವರು 2009, 2010 ಮತ್ತು 2014ರ ಐಪಿಎಲ್‌ ಟೂರ್ನಿಗಳಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದರು. ಒಟ್ಟು 30 ಪಂದ್ಯಗಳನ್ನು ಆಡಿ 29 ವಿಕೆಟ್‌ ಉರುಳಿಸಿದ್ದರು.

ಮಾರಾಟವಾಗದವರು(₹ 20 ಲಕ್ಷ ಮೂಲಬೆಲೆ ಹೊಂದಿದ್ದವರು)
ಮನನ್‌ ವೊಹ್ರಾ, ಸಚಿನ್‌ ಬೇಬಿ, ಅಂಕಿತ್‌ ಬಾವ್ನೆ, ಅರ್ಮಾನ್‌ ಜಾಫರ್‌, ಆಕಾಶ್‌ದೀಪ್‌ ನಾಥ್‌, ಆಯುಷ್‌ ಬದೋನಿ, ಜಲಜ್‌ ಸಕ್ಸೇನಾ, ಶೆಲ್ಡನ್‌ ಜಾಕ್ಸನ್‌, ಬಾಬಾ ಇಂದ್ರಜಿತ್‌, ಅನುಜ್‌ ರಾವತ್‌, ಕೆ.ಎಸ್‌.ಭರತ್‌, ಕೆ.ಬಿ.ಅರುಣ್‌ ಕಾರ್ತಿಕ್‌, ಅನಿಕೇತ್‌ ಚೌಧರಿ, ಇಶಾನ್‌ ಪೊರೆಲ್‌, ರಜನೀಶ್‌ ಗುರುಬಾನಿ, ಚಾಮಾ ಮಿಲಿಂದ್‌, ತುಷಾರ್‌ ದೇಶ‍ಪಾಂಡೆ, ಯುವರಾಜ್‌ ಚೂಡಸಾಮಾ, ಜಹೀರ್‌ ಖಾನ್‌ ಪಕ್ತೀನ್‌, ರವಿಸಾಯಿ ಕಿಶೋರ್‌, ಎಂ.ಅಶ್ವಿನ್‌.

ಮಾರಟವಾಗದ ಕನ್ನಡಿಗರು
ಜೆ.ಸುಚಿತ್‌ (₹ 20 ಲಕ್ಷ)
ಕೆ.ಸಿ.ಕಾರ್ಯಪ್ಪ (₹ 20 ಲಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT