ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ನಡೆದರೆ ಬೆಂಗಳೂರಿಗೆ ಸಿಂಹಪಾಲು?

ರಾಜ್ಯ ಸಂಸ್ಥೆಗಳಿಗೆ ಸೌರವ್‌ ಗಂಗೂಲಿ ಹಾಕಿದ ಪತ್ರ ಮೂಡಿಸಿದ ಸಂಚಲನ
Last Updated 11 ಜೂನ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಗೊಂಡರೆ ಬೆಂಗ ಳೂರಿಗೆ ಹೆಚ್ಚು ಲಾಭವಾಗಲಿದೆಯೇ?

‘ಹೌದು’ ಎನ್ನುತ್ತವೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು. ಪ್ರತಿ ವರ್ಷ ಐಪಿಎಲ್ ನಡೆಯುವ ಬಹುತೇಕ ನಗರಗಳಲ್ಲಿ ಕೊರೊನಾ ವೈರಸ್ ಹಾವಳಿ ಮುಗಿಲುಮುಟ್ಟಿದೆ. ಅದರಲ್ಳೂ ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈ ನಗರಗಳಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಈ ಎಲ್ಲ ಮಹಾನಗರಗಳಿಗೆ ಹೋಲಿಸಿದರೆ ಮೊಹಾಲಿ ಮತ್ತು ಬೆಂಗಳೂರಿನ ಪರಿಸ್ಥಿತಿ ಚೆನ್ನಾಗಿದೆ. ಆದರೆ, ಕ್ರಿಕೆಟ್‌ ಸೌಲಭ್ಯಗಳ ವಿಷಯದಲ್ಲಿ ಮೊಹಾಲಿಗಿಂತ ಉದ್ಯಾನನಗರಿಯೇ ಮುಂಚೂಣಿಯಲ್ಲಿದೆ. ಆದ್ದರಿಂದ ಒಂದೊಮ್ಮೆ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಟೂರ್ನಿ ನಡೆದರೆ ಬಹುಪಾಲು ಪಂದ್ಯಗಳಿಗೆ ಬೆಂಗಳೂರು ವೇದಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

‘ಮೂರು–ನಾಲ್ಕು ಕ್ರೀಡಾಂಗಣಗಳು ಇರುವ ನಗರದಲ್ಲಿ ಟೂರ್ನಿಯ ಲೀಗ್‌ ಪಂದ್ಯಗಳನ್ನು ಆಯೋಜಿಸಿದರೆ ತಂಡಗಳು, ಸಿಬ್ಬಂದಿಯ ಪ್ರಯಾಣವನ್ನು ಮೊಟಕುಗೊಳಿಸಬಹುದು. ಅದರಿಂದ ಕೊರೊನಾ ಸೋಂಕು ಪ್ರಸರಣದ ಆತಂಕವನ್ನೂ ತಪ್ಪಿಸಿಕೊಳ್ಳಬಹುದು’ ಎಂದು ಈಚೆಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದರು.

ಮೂರ್ನಾಲ್ಕು ನಗರಗಳಲ್ಲಿಯೂ ಪಂದ್ಯಗಳನ್ನು ನಡೆಸಬಹುದು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೂಡ ಅಭಿಪ್ರಾಯಪಟ್ಟಿದ್ದರು.

‘ಬೆಂಗಳೂರಿನಲ್ಲಿ ಇಂತಹ ಸೌಲಭ್ಯ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿದಿನ ಎರಡು ಪಂದ್ಯಗಳನ್ನು ನಡೆಸಬಹುದು. ತಂಡಗಳ ಅಭ್ಯಾಸಕ್ಕೆ ನಗರದ ಹೊರವಲಯದ ಆಲೂರು ಕ್ರೀಡಾಂಗಣ (ಮೂರು ಮೈದಾನಗಳಿವೆ)ದಲ್ಲಿ ವ್ಯವಸ್ಥೆ ಮಾಡಬಹುದು. ಪಂಚತಾರಾ ಹೋಟೆಲ್, ರಸ್ತೆ ಸಾರಿಗೆ ವ್ಯವಸ್ಥೆಗೂ ಕೊರತೆಯಿಲ್ಲ’ ಎಂದು ಕೆಎಸ್‌ಸಿಎದ ಸದಸ್ಯರೊಬ್ಬರು ಹೇಳುತ್ತಾರೆ.

ಹೇಗಿದ್ದರೂ ‘ಖಾಲಿ’ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಬೇರೆ ಬೇರೆ ಊರುಗಳಲ್ಲಿ ಪಂದ್ಯಗಳನ್ನು ನಡೆಸುವುದಕ್ಕಿಂತ ಒಂದೇ ಕಡೆ ಇದ್ದರೆ ಬಹಳಷ್ಟು ಅನುಕೂಲವಾಗುತ್ತದೆ. ಟಿವಿ ಪ್ರಸಾರಕ್ಕೂ ಹೆಚ್ಚು ಅನುಕೂಲವಿರುತ್ತದೆ ಎಂದೂ ಹೇಳಲಾಗುತ್ತಿದೆ.

ಹೋದ ವರ್ಷ ಐಪಿಎಲ್ ಟೂರ್ನಿಯಲ್ಲಿ ಒಟ್ಟು 60 ಪಂದ್ಯಗಳು ನಡೆದಿದ್ದವು. ಒಟ್ಟು ಎಂಟು ತಾಣಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಬಾರಿಯೂ ಪೂರ್ಣಪ್ರಮಾಣದ ಟೂರ್ನಿ ನಡೆದರೆ ಅಷ್ಟೇ ಸಂಖ್ಯೆಯ ಪಂದ್ಯಗಳು ನಡೆಯಬಹುದು. ಟೂರ್ನಿಯ ಆಯೋಜನೆಯ ವೇಳೆಯವರೆಗೂ ಕೊರೊನಾ ಪ್ರಸರಣದ ಸ್ಥಿತಿ–ಗತಿ ಇದೇ ರೀತಿ ಇದ್ದರೆ, ಲೀಗ್ ಹಂತದ ಪಂದ್ಯಗಳನ್ನು ಬೆಂಗಳೂರು ಮತ್ತು ಪ್ಲೇಆಫ್‌ ಹಂತದ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸಭೆ ಇಂದು: ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರ ಸಭೆಯು ಶುಕ್ರವಾರ ನಡೆಯಲಿದೆ. ಗಂಗೂಲಿಯವರು ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳೂ ಸೇರಿದಂತೆ ಕೆಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

‘ಜುಲೈ ಮೊದಲ ವಾರದಲ್ಲಿ ಇಲ್ಲಿಯ ಕ್ರಿಕೆಟ್ ಚಟುವಟಿಕೆಗಳನ್ನು ಮರುಆರಂಭ ಮಾಡುವ ಉದ್ದೇಶವಿದೆ. ಆ ಸಮಯಕ್ಕೆ ಇರುವ ಪರಿಸ್ಥಿತಿ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ನೋಡಿಕೊಂಡು ಮುಂದುವರಿಯುತ್ತೇವೆ. ಗಂಗೂಲಿ ಅವರು ಕೆಲವು ಕಾರ್ಯಸೂಚಿಗಳನ್ನು ತಿಳಿಸಿದ್ದಾರೆ. ಅವುಗಳನ್ನೂ ಪಾಲಿಸಲಾಗುವುದು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ಹೇಳಿದ್ದಾರೆ.

ವಿದೇಶಿ ಆಟಗಾರರು?: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಕೋವಿಡ್–19 ಇಳಿಮುಖವಾಗಿದೆ. ಇಂಗ್ಲೆಂಡ್‌ನಲ್ಲಿಯೂ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ವಿಂಡೀಸ್ ತಂಡವು ಮೂರು ದಿನಗಳ ಹಿಂದೆ ಇಂಗ್ಲೆಂಡ್ ತಲುಪಿದೆ. ಐಪಿಎಲ್‌ನಲ್ಲಿ ಈ ನಾಲ್ಕು ದೇಶಗಳ ಆಟಗಾರರೇ ಹೆಚ್ಚಿನ ಸಂಖ್ಯೆಯದಲ್ಲಿದ್ದಾರೆ. ಸೆಪ್ಟೆಂಬರ್ ವೇಳೆಗೆ ಅಲ್ಲಿಂದ ಭಾರತಕ್ಕೆ ವಿಮಾನಯಾನವೂ ಆರಂಭವಾಗುವ ನಿರೀಕ್ಷೆಗಳು ಇವೆ. ಆದ್ದರಿಂದ ಆಟಗಾರರು ಐಪಿಎಲ್‌ನಲ್ಲಿ ಆಡಲು ಬರುವರು ಎಂಬ ಭರವಸೆಯೂ ಆಯೋಜಕರಿಗೆ ಇದೆ.

‘ಸೆಪ್ಟೆಂಬರ್‌ನಲ್ಲಿ ಐಪಿಎಲ್‌ಗೆ ಚಿಂತನೆ’
‘ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಟೂರ್ನಿಯನ್ನು ಸಂಘಟಿಸುವ ಅವಕಾಶ ಇದೆಯೆಂದು ಅನಿಸುತ್ತಿದೆ. ಆದರೆ ಐಸಿಸಿಯು ಟಿ20 ವಿಶ್ವಕಪ್ ಟೂರ್ನಿಯ ಕುರಿತು ನಿರ್ಧಾರ ಕೈಗೊಂಡ ಮೇಲೆ ಸ್ಪಷ್ಟವಾಗಿ ಯೋಜನೆ ರೂಪಿಸಬಹುದು’ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿಗೆ ಹೆಚ್ಚು ಪಂದ್ಯಗಳು ಲಭಿಸುವ ಸಾಧ್ಯತೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಮೇಲ್ನೋಟಕ್ಕೆ ಹಾಗನಿಸುತ್ತದೆ. ಆದರೆ ಟೂರ್ನಿ ಆಯೋಜನೆಯ ಸಂದರ್ಭದಲ್ಲಿ ಇಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾದರೆ ಏನ್ಮಾಡೋದು? ಆದ್ದರಿಂದ ಈಗಲೇ ಯಾವುದನ್ನೂ ಹೇಳಲೂ ಸಾಧ್ಯವಿಲ್ಲ. ಎಲ್ಲ ಅವಕಾಶಗಳನ್ನೂ ಪರಿಶೀಲಿಸಲಾಗುತ್ತಿದೆ. ಕಾದು ನೋಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT