ಈ ಸಲ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ

ಮಂಗಳವಾರ, ಏಪ್ರಿಲ್ 23, 2019
27 °C
ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅನಿಸಿಕೆ

ಈ ಸಲ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ

Published:
Updated:
Prajavani

ಹೈದರಾಬಾದ್‌: ‘ನಮ್ಮ ತಂಡದಲ್ಲಿ ಅನುಭವಿ ಮತ್ತು ‍ಪ್ರತಿಭಾನ್ವಿತ ಆಟಗಾರರಿದ್ದಾರೆ. ಈ ಬಾರಿಯ ಲೀಗ್‌ನ ಹಿಂದಿನ ಎಲ್ಲಾ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದೇವೆ. ಮುಂದಿನ ಪಂದ್ಯಗಳಲ್ಲೂ ಇದೇ ಸಾಮರ್ಥ್ಯ ಮುಂದುವರಿಸಿದರೆ ಪ್ರಶಸ್ತಿ ಎತ್ತಿಹಿಡಿಯುವುದು ನಿಶ್ಚಿತ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ತಂಡ 39ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಗೆದ್ದಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ 155ರನ್‌ ಪೇರಿಸಿತ್ತು. ಗುರಿ ಬೆನ್ನಟ್ಟಿದ್ದ ಸನ್‌ರೈಸರ್ಸ್‌ 18.5 ಓವರ್‌ಗಳಲ್ಲಿ 116ರನ್‌ಗಳಿಗೆ ಆಲೌಟ್‌ ಆಗಿತ್ತು.

ಪಂದ್ಯದ ನಂತರ ಮಾತನಾಡಿದ ಶ್ರೇಯಸ್‌ ‘ಈ ಸಲ ಪ್ರಶಸ್ತಿ ಜಯಿಸಬೇಕೆಂಬುದು ನಮ್ಮ ಕನಸು. ಅದು ಅಸಾಧ್ಯವೇನಲ್ಲ’ ಎಂದರು.

‌‘ಸನ್‌ರೈಸರ್ಸ್‌ ಎದುರು ನಾವು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೆವು. ಹೀಗಾಗಿ ನಾನು ಮತ್ತು ರಿಷಭ್‌ ಪಂತ್‌ ಉತ್ತಮ ಜೊತೆಯಾಟ ಆಡಬೇಕೆಂದು ನಿರ್ಧರಿಸಿದ್ದೆವು. ಕೀಮೊ ಪಾಲ್‌ ಮತ್ತು ಅಕ್ಷರ್‌ ಪಟೇಲ್‌ ಕೂಡಾ ರನ್‌ ಕಾಣಿಕೆ ನೀಡಿದ್ದರಿಂದ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಪಂದ್ಯಕ್ಕೂ ಮುನ್ನ ಎಲ್ಲರೂ ನಿರ್ದಿಷ್ಟ ಯೋಜನೆ ಹೆಣೆದಿರುತ್ತಾರೆ. ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇರುತ್ತದೆ. ಅದನ್ನು ಅರಿತು ಆಡಿದರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ’ ಎಂದು ಡೆಲ್ಲಿ ತಂಡದ ಬೌಲರ್‌ ಕಗಿಸೊ ರಬಾಡ ಅಭಿಪ್ರಾಯಪಟ್ಟರು.

23 ವರ್ಷ ವಯಸ್ಸಿನ ರಬಾಡ, ಸನ್‌ರೈಸರ್ಸ್‌ ಎದುರು ನಾಲ್ಕು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು.

‘ಐಪಿಎಲ್‌, ವಿಶ್ವದ ಪ್ರಸಿದ್ಧ ಲೀಗ್‌ಗಳಲ್ಲಿ ಒಂದು. ಇದರಲ್ಲಿ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿತುಕೊಂಡು ಬೌಲಿಂಗ್‌ ಮಾಡುವ ಗುಣ ಬೆಳೆಸಿಕೊಂಡಿದ್ದೇನೆ. ಜೊತೆಗೆ ಚೆಂಡಿನ ಗತಿ ಬದಲಿಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ ಕಲೆ ಕರಗತ ಮಾಡಿಕೊಂಡಿದ್ದೇನೆ. ಹೀಗಾಗಿ ಯಶಸ್ಸು ಸಿಗುತ್ತಿದೆ’ ಎಂದು ಡೆಲ್ಲಿ ತಂಡದ ಕೀಮೊ ಪಾಲ್‌ ಹೇಳಿದ್ದಾರೆ. ಪಾಲ್‌ ಅವರು ಸೋಮವಾರ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಪಾತ್ರರಾಗಿದ್ದರು. ನಾಲ್ಕು ಓವರ್‌ ಬೌಲ್‌ ಮಾಡಿದ್ದ ಅವರು 17ರನ್‌ ಕೊಟ್ಟು ಮೂರು ವಿಕೆಟ್‌ ಪಡೆದಿದ್ದರು.

‘ಪಂದ್ಯದ ಮೊದಲ ಹತ್ತು ಓವರ್‌ಗಳಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿದರು. ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಂಡೆವು. ಉತ್ತಮ ಜೊತೆಯಾಟಗಳೂ ಮೂಡಿ ಬರಲಿಲ್ಲ. ಹೀಗಾಗಿ ಗುರಿ ಬೆನ್ನಟ್ಟುವಲ್ಲಿ ಎಡವಿದೆವು’ ಎಂದು ಸನ್‌ರೈಸರ್ಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದರು.

‘ಐಪಿಎಲ್‌ನಲ್ಲಿ ಯಾರು ಯಾರನ್ನು ಬೇಕಾದರೂ ಮಣಿಸಬಹುದು. ಹೀಗಾಗಿ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸಬಾರದು. ನಾವು ಡೆಲ್ಲಿ ವಿರುದ್ಧ ಯೋಜನೆಗೆ ಅನುಗುಣವಾಗಿ ಆಡಲು ವಿಫಲವಾದೆವು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !