ದುಬೈ: ಮಹೇಂದ್ರಸಿಂಗ್ ಧೋನಿಯ ಮತ್ತು ಅವರ ‘ಶಿಷ್ಯ’ ರಿಷಭ್ ಪಂತ್ ಸೋಮವಾರ ಮುಖಾಮುಖಿಯಾಗಲಿದ್ದಾರೆ.
ಅವರಿಬ್ಬರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಉಭಯ ತಂಡಗಳಿಗೆ ಒತ್ತಡ ಇಲ್ಲ.
ಯುಎಇಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯದಲ್ಲಿ ಸೋತಿವೆ. ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಶನಿವಾರದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದರು. ಟೂರ್ನಿಯಲ್ಲಿ ಒಟ್ಟು 508 ರನ್ ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
ಫಫ್ ಡುಪ್ಲೆಸಿ ಜೊತೆಗೆ ಉತ್ತಮ ಆರಂಭವನ್ನೂ ಋತುರಾಜ್ ನೀಡುತ್ತಿದ್ದಾರೆ. ಮೋಯಿನ್ ಅಲಿ, ಅಂಬಟಿ ರಾಯುಡು ಮತ್ತು ರವೀಂದ್ರ ಜಡೇಜ ಮತ್ತು ಧೋನಿಯವರಿಂದಾಗಿ ಮಧ್ಯಮಕ್ರಮಾಂಕವು ಬಲಿಷ್ಠವಾಗಿದೆ.
ಬೌಲಿಂಗ್‌ನಲ್ಲಿ ಡ್ವೆನ್ ಬ್ರಾವೊ, ಶಾರ್ದೂಲ್ ಠಾಕೂರ್ ಮತ್ತು ಜಡೇಜ ಅವರು ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಾಡುವುದನ್ನು ಮುಂದುವರಿಸಿದರೆ ಚೆನ್ನೈಗೆ ಜಯ ಸುಲಭವಾಗಬಹುದು.
ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಜಯಭೇರಿ ಬಾರಿಸಿರುವ ಡೆಲ್ಲಿ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಹೋದ ವರ್ಷ ರನ್ನರ್ಸ್ ಅಪ್ ಆಗಿದ್ದ ಡೆಲ್ಲಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿದೆ. ಅಗ್ರಕ್ರಮಾಂಕದಲ್ಲಿ ಶಿಖರ್ ಧವನ್, ಸ್ಟೀವ್ ಸ್ಮಿತ್ ಮತ್ತು ಪೃಥ್ವಿ ಶಾ ತಮ್ಮ ಲಯಕ್ಕೆ ಮರಳಿದರೆ ತಂಡ ಮತ್ತಷ್ಟು ಬಲಿಷ್ಠವಾಗುತ್ತದೆ.
ಕಳೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೂಡ ಮಿಂಚಿದ್ದರು. ಅದರಿಂದಾಗಿ ರಿಷಭ್ ವಿಶ್ವಾಸ ಹೆಚ್ಚಿದೆ. ಬೌಲಿಂಗ್‌ನಲ್ಲಿ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಆವೇಶ್ ಖಾನ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇದರಿಂದಾಗಿ ಎರಡೂ ತಂಡಗಳ ನಡುವೆ ತುರುಸಿನ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ), ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಅಂಬಟಿ ರಾಯುಡು, ಸುರೇಶ್ ರೈನಾ, ಡ್ವೆನ್ ಬ್ರಾವೊ, ರವೀಂದ್ರ ಜಡೇಜ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಮೋಯಿನ್ ಅಲಿ, ಕೆ. ಗೌತಮ್, ಕರ್ಣ ಶರ್ಮಾ, ಇಮ್ರಾನ್ ತಾಹೀರ್.
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಎನ್ರಿಚ್ ನಾರ್ಕಿಯಾ, ಆವೇಶ್ ಖಾನ್, ಕಗಿಸೊ ರಬಾಡ, ಇಶಾಂತ್ ಶರ್ಮಾ, ಆಕ್ಷರ್ ಪಟೇಲ್, ಮಾರ್ಕಸ್ ಸ್ಟೋಯಿನಿಸ್, ಆರ್. ಅಶ್ವಿನ್, ಕುಲವಂತ್ ಖೆಜ್ರೊಲಿಯಾ. ಸ್ಯಾಮ್ ಬಿಲಿಂಗ್ಸ್.
ಪಂದ್ಯ ಆರಂಭ: ರಾತ್ರಿ 7.30ರಿಂದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.