ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್-2021: ಅಮಿತ್‌-ಧವನ್‌ ಉತ್ತಮ ಆಟ; ಡೆಲ್ಲಿಗೆ 6 ವಿಕೆಟ್ ಅಂತರದ‌ ಜಯ

Last Updated 20 ಏಪ್ರಿಲ್ 2021, 18:23 IST
ಅಕ್ಷರ ಗಾತ್ರ

ಚೆನ್ನೈ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ನೀಡಿದ 138 ರನ್‌ಗಳ ಸಾಧಾರಣ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 4ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಆ ಮೂಲಕ ಕಳೆದ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಅಲ್ಪ ಗುರಿ ಎದುರುಅನುಭವಿ ಶಿಖರ್‌ ಧವನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (7) ತಂಡದ ಮೊತ್ತ ಕೇವಲ 11 ರನ್‌ ಆಗಿದ್ದಾಗಲೇ ವಿಕೆಟ್‌ ಒಪ್ಪಿಸಿದರು. ಹೀಗಾಗಿ ಡೆಲ್ಲಿ ಪಾಳಯದಲ್ಲಿ ವಿಕೆಟ್‌ ಪತನದ ಆತಂಕ ಶುರುವಾಯಿತು.ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ಟೀವ್‌ ಸ್ಮಿತ್‌, ಧವನ್‌ ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 53 ರನ್‌ ಸೇರಿಸಿತು.

29‌ ಎಸೆತಗಳಲ್ಲಿ 33 ರನ್‌ ಗಳಿಸಿದ್ದ ಸ್ಮಿತ್ 10ನೇ ಓವರ್‌ನಲ್ಲಿ ಔಟಾದರೆ, ತಾಳ್ಮೆಯಿಂದ ಬ್ಯಾಟಿಂಗ್‌ ಮಾಡುತ್ತಿದ್ದ ಧವನ್‌ 42 ಎಸೆತಗಳಲ್ಲಿ 45 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಧವನ್‌ ಔಟಾಗುವುದರೊಳಗೆ ಡೆಲ್ಲಿ ತಂಡ ಜಯದತ್ತ ಮುಖ ಮಾಡಿತ್ತು. ಕೊನೆಯಲ್ಲಿ ಲಲಿತ್‌ ಯಾದವ್‌ (ಅಜೇಯ 22 ರನ್) ಮತ್ತು ಶಿಮ್ರೋನ್‌ ಹೆಟ್ಮೆಯರ್‌ (ಅಜೇಯ 14‌ ರನ್) ಗೆಲುವಿನ ಲೆಕ್ಕಾಚಾರ ಪೂರ್ಣಗೊಳಿಸಿದರು.

ಇದರೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿಮೂರನೇ ಗೆಲುವು ಸಾಧಿಸಿದ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಮೂರನೇ ಸ್ಥಾನದಲ್ಲಿತ್ತು.ಇಷ್ಟೇ ಪಂದ್ಯ ಆಡಿರುವ ಮುಂಬೈ ಎರಡನೇ ಸೋಲು ಕಂಡು ನಾಲ್ಕನೇ ಸ್ಥಾನದಲ್ಲೇ ಉಳಿಯಿತು.ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಸ್ಥಾನದಲ್ಲಿದೆ.

ಮುಂಬೈ ದಿಢೀರ್‌ ಕುಸಿತ
ಇದಕ್ಕೂ ಮೊದಲು ಪಂದ್ಯದಲ್ಲಿಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ನಂತರ ಜೊತೆಯಾಗಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ನಾಯಕ ರೋಹಿತ್‌ ಶರ್ಮಾ ಮತ್ತು ಸೂರ್ಯಕುಮಾರ್‌ ಯಾದವ್‌ ತಂಡದ ಇನಿಂಗ್ಸ್‌ಗೆ ಬಲ ತುಂಬಿದ್ದರು.

ಹೀಗಾಗಿ ಪವರ್‌ ಪ್ಲೇ ಮುಕ್ತಾಯವಾದಾಗ ಕೇವಲ 1 ವಿಕೆಟ್‌ಗೆ 56 ರನ್‌ ಗಳಿಸಿದ್ದಮುಂಬೈ ತಂಡ ಬೃಹತ್‌ ಮೊತ್ತ ಗಳಿಸುವ ಸೂಚನೆ ನೀಡಿತ್ತು. ಆದರೆ, ಆವೇಶ್‌ ಖಾನ್‌ ಹಾಕಿದ ಏಳನೇ ಓವರ್‌ ಪಂದ್ಯಕ್ಕೆ ತಿರುವು ನೀಡಿತು. ಈ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯ (24) ವಿಕೆಟ್‌ ಒಪ್ಪಿಸಿದರು. ಅಮಿತ್‌ ಮಿಶ್ರಾ ಹಾಕಿದ ನಂತರದ ಓವರ್‌ನಲ್ಲಿ ರೋಹಿತ್‌ (44) ಮತ್ತು ಹಾರ್ದಿಕ್‌ ಪಾಂಡ್ಯ (0) ಅವರನ್ನು ಪೆವಿಲಿಯನ್‌ ಸೇರಿಕೊಂಡರು. ಬಳಿಕ ಬಂದ ಕೃಣಾಲ್‌ ಪಾಂಡ್ಯ (1), ವಿಂಡೀಸ್‌ನ ದೈತ್ಯ ಪ್ರತಿಭೆ ಕೀರನ್‌ ಪೊಲಾರ್ಡ್‌ (2) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಅಂತಿಮ ಹಂತದಲ್ಲಿಉತ್ತಮ ಆಟವಾಡಿದ ಇಶಾನ್‌ ಕಿಶನ್‌ (26) ಮತ್ತು ಜಯಂತ್‌ ಯಾದವ್‌ (23) ಏಳನೇ ವಿಕೆಟ್‌ ಪಾಲುದಾರಿಕೆಯಲ್ಲಿ 39 ರನ್‌ ಸೇರಿಸಿ ತಮ್ಮ ತಂಡದ ಮೊತ್ತ 130ರ ಗಡಿ ದಾಟಲು ನೆರವಾದರು.

ಮುಂಬೈ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಅಮಿತ್‌ ಮಿಶ್ರಾ ನಾಲ್ಕು ಓವರ್‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಆವೇಶ್‌ ಖಾನ್‌ ಎರಡು ವಿಕೆಟ್‌ ಉರುಳಿಸಿದರೆ, ಮಾರ್ಕಸ್‌ ಸ್ಟೋಯಿನಸ್‌, ಕಗಿಸೊ ರಬಾಡ ಮತ್ತು ಲಲಿತ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT