ಮಂಗಳವಾರ, ಅಕ್ಟೋಬರ್ 27, 2020
19 °C

IPL–2020 | ಡೆಲ್ಲಿ ಜಯದ ಓಟಕ್ಕೆ ತಡೆ; ಸನ್‌ರೈಸರ್ಸ್‌ಗೆ ಮೊದಲ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಶಿಸ್ತಿನ ದಾಳಿ ಸಂಘಟಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬೌಲರ್‌ಗಳು ಸತತ ಜಯದ ಹಾದಿಯಲ್ಲಿ ಸಾಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಓಟಕ್ಕೆ ತಡೆಯೊಡ್ಡಿದರು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತ್ತು.

ನಾಯಕ ಡೇವಿಡ್‌ ವಾರ್ನರ್ (41) ಮತ್ತು ಜಾನಿ ಬೈರ್ಸ್ಟ್ರೋವ್‌ (53) ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದರು. ಕಳೆದ ಎರಡು ಪಂದ್ಯದಲ್ಲಿ ಬೆಂಚ್‌ ಕಾಯ್ದಿದ್ದ ಅನುಭವಿ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದರು. ಬಿರುಸಾಗಿ ಬ್ಯಾಟ್‌ ಬೀಸಿದ ಕೇನ್‌ 26 ಎಸೆತಗಳಲ್ಲಿ 5 ಬೌಂಡರಿ ಸಹಿತ 41 ರನ್‌ ಗಳಿಸಿದರು. ಹೀಗಾಗಿ ಹೈದರಾಬಾದ್‌ ತಂಡ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ವೇಗಿ ಭುವನೇಶ್ವರ್‌ ಕುಮಾರ್‌ ಮೊದಲ ಓವರ್‌ನಲ್ಲಿಯೇ ಆಘಾತ ನೀಡಿದರು. ಉಳಿದ ಬೌಲರ್‌ಗಳೂ ಕರಾರುವಕ್ಕಾಗಿ ಬೌಲಿಂಗ್ ಮಾಡಿದ್ದರಿಂದ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಅನುಭವಿ ಶಿಖರ್‌ ಧವನ್‌ (34) ಹಾಗೂ ರಿಷಭ್‌ ಪಂತ್‌ (28) ಹೋರಾಟ ನಡೆಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಕಾಗಲಿಲ್ಲ.

ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಲಷ್ಟೇ ಶಕ್ತವಾದ ಅಯ್ಯರ್‌ ಪಡೆ, 15 ರನ್‌ ಅಂತರದ ಸೋಲೊಪ್ಪಿಕೊಂಡಿತು.

ರೈಸರ್ಸ್‌ ಪರ ರಶೀದ್‌ ಖಾನ್‌ 3, ಭುವನೇಶ್ವರ್‌ 2 ವಿಕೆಟ್‌ ಉರುಳಿಸಿದರೆ, ಖಲೀಲ್‌ ಅಹಮದ್ ಮತ್ತು ಟಿ. ನಟರಾಜನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಮೊದಲ ಜಯ; ಮೊದಲ ಸೋಲು
ಈ ಆವೃತ್ತಿಯಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಸನ್‌ರೈಸರ್ಸ್‌ಗೆ ಇದು ಮೊದಲ ಜಯ. ಈ ತಂಡ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ಸೋಲು ಕಂಡಿತ್ತು.

ಅದೇ ರೀತಿ ಡೆಲ್ಲಿ ತಂಡಕ್ಕೆ ಇದು ಮೊದಲ ಸೋಲು. ಅಯ್ಯರ್‌ ಪಡೆ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಗಳಿಸಿತ್ತು.

‘50ನೇ ಪಂದ್ಯ’ವನ್ನು ಸ್ಮರಣೀಯವಾಗಿಸಿಕೊಂಡ ನಾಯಕ
ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ಅವರಿಗೆ ಇದು ಐಪಿಎಲ್‌ನಲ್ಲಿ ನಾಯಕನಾಗಿ 50ನೇ ಪಂದ್ಯ. ಹಾಗಾಗಿ ಈ ಗೆಲುವು ಅವರ ಪಾಲಿಗೆ ವಿಶೇಷವೆನಿಸಿತು.

ಮಾತ್ರವಲ್ಲದೆ ಆಸ್ಟ್ರೇಲಿಯಾದ ಈ ಆಟಗಾರ ಅತಿಹೆಚ್ಚು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ ಮೂರನೇ ವಿದೇಶಿ ನಾಯಕ ಎನಿಸಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದವರೇ ಆದ ಆ್ಯಡಂ ಗಿಲ್‌ಕ್ರಿಸ್ಟ್‌ (74) ಮತ್ತು ಶೇನ್‌ ವಾರ್ನ್‌ (55) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

48 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು