ಶುಕ್ರವಾರ, ಜನವರಿ 22, 2021
27 °C
ವಿರಾಟ್ ಕೊಹ್ಲಿ–ಡೇವಿಡ್ ವಾರ್ನರ್ ಬಳಗಗಳ ಮುಖಾಮುಖಿ ಇಂದು

IPL-2020 | RCB vs SRH: ಜಯದ ಹಾದಿಯತ್ತ ಬೆಂಗಳೂರು ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಸತತ ಎರಡು ಸೋಲುಗಳಿಂದ ಬೇಸತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ಬಳಗವನ್ನು ಎದುರಿಸಲಿದೆ. 

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಬಳಗವು ಈ ಹಿಂದಿನ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.  ಆ ಕಹಿಯನ್ನು ಮರೆತು ಅಗ್ರಸ್ಥಾನಕ್ಕೆ ಲಗ್ಗೆ ಹಾಕುವ ಛಲದಲ್ಲಿ ಆರ್‌ಸಿಬಿ ಇದೆ.

ಕರ್ನಾಟಕದ ಹುಡುಗ ದೇವದತ್ತ ಪಡಿಕ್ಕಲ್ ಅರ್ಧಶತಕದ ಬಲದಿಂದ ಮುಂಬೈ ಎದುರಿನ ಪಂದ್ಯದಲ್ಲಿ ಬೆಂಗಳೂರು ತಂಡವು 164 ರನ್‌ಗಳ ಮೊತ್ತ ಗಳಿಸಿತ್ತು. ಆದರೆ, ಮುಂಬೈನ ಸೂರ್ಯಕುಮಾರ್ ಯಾದವ್ ಅವರ ಪ್ರತಾಪಕ್ಕೆ ಕಡಿವಾಣ ಹಾಕುವಲ್ಲಿ ಕ್ರಿಸ್ ಮೊರಿಸ್, ಡೇಲ್ ಸ್ಟೇಯ್ನ್, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಪಡೆಯು ವಿಫಲವಾಗಿತ್ತು.  ಅದರಿಂದಾಗಿ ತಂಡವು ಸೋತಿತ್ತು. ಬ್ಯಾಟಿಂಗ್‌ನಲ್ಲಿ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಶಿವಂದುಬೆ ಲಯಕ್ಕೆ ಮರಳಿದರೆ ದೊಡ್ಡ ಮೊತ್ತದ ಗಳಿಕೆ ಸಾಧ್ಯವಾಗಲಿದೆ.

ಸನ್‌ರೈಸರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ಎದುರಿಗಿನ ಪಂದ್ಯದಲ್ಲಿ 219 ರನ್‌ಗಳ ದೊಡ್ಡ  ಮೊತ್ತ ಗಳಿಸಿತ್ತು. ನಾಯಕ ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಅವರ ಅರ್ಧಶತಕ, ಕನ್ನಡಿಗ ಮನೀಷ್ ಪಾಂಡೆಯ ಮಿಂಚಿನ ಬ್ಯಾಟಿಂಗ್‌ನಿಂದ ಡೆಲ್ಲಿಗೆ ದೊಡ್ಡ ಗುರಿ ನೀಡಲು ಸಾಧ್ಯವಾಗಿತ್ತು. ನಂತರ ಬೌಲರ್‌ಗಳಿಗೆ ಕೆಲಸ ಸುಲಭವಾಗಿತ್ತು.

ಸ್ಪಿನ್ನರ್ ರಶೀದ್ ಖಾನ್, ಸಂದೀಪ್ ಶರ್ಮಾ ಮತ್ತು ಟಿ. ನಟರಾಜನ್ ಅವರು ಡೆಲ್ಲಿ ಬ್ಯಾಟಿಂಗ್ ಪಡೆಯನ್ನು ದೂಳೀಪಟ ಮಾಡಿದ್ದರು. ಆ ಗೆಲುವಿನಿಂದ ಲಭಿಸಿರುವ ಆತ್ಮವಿಶ್ವಾಸದ ಹೊನಲಿನಲ್ಲಿ ವಾರ್ನರ್ ಬಳಗವು ತೇಲುತ್ತಿದೆ.

ವಿರಾಟ್ ಕೊಹ್ಲಿ ಮತ್ತು ವಾರ್ನರ್ ಇಬ್ಬರೂ ತಮ್ಮ ಆಕ್ರಮಣಕಾರಿ ಶೈಲಿಯ ಆಟ ಮತ್ತು ನಾಯಕತ್ವಕ್ಕೆ ಹೆಸರಾದವರು. ಇವರಿಬ್ಬರ ನಡುವಿನ ಈ ಹಣಾಹಣಿಯು ರೋಚಕವಾಗುವ ಎಲ್ಲ ಸಾಧ್ಯತೆಗಳೂ ಇವೆ. ಬೆಂಗಳೂರು ತಂಡವು ತನ್ನ ಪಾಲಿನಲ್ಲಿ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೆ ಮೊದಲ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು