ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | RCB vs SRH: ಈ ಸಲವೂ ಕಪ್ ಬೆಂಗಳೂರಿಗಿಲ್ಲ!

ಹೋಲ್ಡರ್–ವಿಲಿಯಮ್ಸನ್ ಮಿಂಚು; ಕ್ವಾಲಿಫೈಯರ್‌ಗೆ ಸನ್‌ರೈಸರ್ಸ್‌
Last Updated 6 ನವೆಂಬರ್ 2020, 19:37 IST
ಅಕ್ಷರ ಗಾತ್ರ
ADVERTISEMENT
""

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಸತತ 13ನೇ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಜಯದ ಕನಸು ಭಗ್ನವಾಯಿತು.

ಶುಕ್ರವಾರ ರಾತ್ರಿ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವು 6 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೋತಿತು. ಕಳಪೆ ಬ್ಯಾಟಿಂಗ್‌ನಿಂದಾಗಿ ದೊಡ್ಡ ಮೊತ್ತ ಗಳಿಸದ ವಿರಾಟ್ ಕೊಹ್ಲಿ ಬಳಗವು ಟೂರ್ನಿಯಿಂದ ಹೊರಬಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಡೇವಿಡ್ ವಾರ್ನರ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೆಣಸಲಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. ಜೇಸನ್ ಹೋಲ್ಡರ್ (25ಕ್ಕೆ3) ಮತ್ತು ಟಿ ನಟರಾಜನ್ (33ಕ್ಕೆ2) ತಮ್ಮ ನಾಯಕನ ಯೋಜನೆಯನ್ನು ಸಫಲಗೊಳಿಸಿದರು.ಆದರೆ ವಿರಾಟ್ ಕೊಹ್ಲಿಯ ತಂತ್ರಗಾರಿಕೆ ಕೈಕೊಟ್ಟಿತು.ದೇವದತ್ತ ಪಡಿಕ್ಕಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ವಿರಾಟ್ ಅಚ್ಚರಿ ಮೂಡಿಸಿದರು. ಕೇವಲಆರು ರನ್ ಗಳಿಸಿದ್ದ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಹೋಲ್ಡರ್‌ ಎಸೆತದಲ್ಲಿ ಔಟಾಗಿ ಅಭಿಮಾನಿಗಳಿಗೆ ಆಘಾತ ನೀಡಿದರು. ಆದರೆ ಟೂರ್ನಿಯಲ್ಲಿ ಮತ್ತೊಂದು ಅರ್ಧಶತಕ ಹೊಡೆದ ಎಬಿ ಡಿವಿಲಿಯರ್ಸ್‌ (56; 43ಎ) ತಂಡಕ್ಕೆ ಆಸರೆಯಾದರು. ಅದರಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 131 ರನ್ ಗಳಿಸಿತು.

ಆರ್‌ಸಿಬಿ ಬೌಲರ್‌ಗಳ ಉತ್ತಮ ಬೌಲಿಂಗ್‌ನಿಂದಾಗಿ ಸನ್‌ರೈಸರ್ಸ್‌ ತಂಡವು ಕೊನೆಯ ಓವರ್‌ನವರೆಗೂ ಗೆಲುವಿಗಾಗಿ ಕಾಯಬೇಕಾಯಿತು.ನ್ಯೂಜಿಲೆಂಡ್‌ನ ‘ಕೂಲ್‌ ಕ್ಯಾಪ್ಟನ್’ಕೇನ್ ವಿಲಿಯಮ್ಸನ್ (ಔಟಾಗದೆ 50; 44ಎ, 2ಬೌಂ,2ಸಿ) ಮತ್ತು ವೆಸ್ಟ್‌ ಇಂಡೀಸ್‌ನ ‘ಆಲ್‌ರೌಂಡರ್‌ ನಾಯಕ’ಹೋಲ್ಡರ್ (ಔಟಾಗದೆ 24; 20ಎ, 3ಬೌಂ) ತಂಡವನ್ನು ಗೆಲುವಿನ ದಡ ಸೇರಿಸಿ ಸಂಭ್ರಮಿಸಿದರು. ತಂಡವು 19.4 ಓವರ್‌ಗಳಲ್ಲಿ 4ಕ್ಕೆ132 ರನ್ ಗಳಿಸಿತು.

ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ (28ಕ್ಕೆ2) ಮತ್ತು ಸ್ಪಿನ್ನರ್ ಗಳ ಬೌಲಿಂಗ್ ಸೊಗಸಾಗಿತ್ತು. ಆದರೆ, ದೊಡ್ಡ ಮೊತ್ತದ ಬಲವಿಲ್ಲದ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವಾಗಿದ್ದು ನಾಯಕ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ.ಆ್ಯರನ್ ಫಿಂಚ್ (32; 30ಎ), ಎಬಿಡಿ ಮತ್ತು ಮೊಹಮ್ಮದ್ ಸಿರಾಜ್ (ಔಟಾಗದೆ 10) ಬಿಟ್ಟರೆ ಉಳಿದವರು. ಎರಡಂಕಿ ಮುಟ್ಟಲಿಲ್ಲ.ಇನಿಂಗ್ಸ್‌ನ ಏಕೈಕ ಸಿಕ್ಸರ್ ಅನ್ನು ಫಿಂಚ್ ಗಳಿಸಿದರು.ದೇವದತ್ತ ಪಡಿಕ್ಕಲ್, ಶಿವಂ ದುಬೆ ವಿಕೆಟ್‌ಗಳನ್ನು ಹೋಲ್ಡರ್‌ ಗಳಿಸಿದರು. ಮೋಯಿನ್ ಅಲಿ ‘ಫ್ರೀ ಹಿಟ್’ಎಸೆತವನ್ನು ಆಡಿ ರನ್‌ಔಟ್ ಆದರು.

ಆದರೆ, ಎಬಿ ಮಾತ್ರ ದಿಟ್ಟತನದಿಂದ ಆಡಿದರು. 39 ಎಸೆತಗಳಲ್ಲಿ ಅವರು ಅರ್ಧಶತಕ ಪೂರೈಸಿದರು. 18ನೇ ಓವರ್‌ನಲ್ಲಿ ನಟರಾಜನ್ ಹಾಕಿದ ಯಾರ್ಕರ್‌, ಎಬಿಡಿ ಕಣ್ತಪ್ಪಿಸಿ ಮಧ್ಯದ ಸ್ಪಂಪ್ ಎಗರಿಸಿತು. ಅದರೊಂದಿಗೆ ಆರ್‌ಸಿಬಿಯು ದೊಡ್ಡ ಮೊತ್ತ ಗಳಿಸುವ ಅವಕಾಶವೂ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT