ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಮರೆತು ಬೆಳಗುವ ತವಕ

ಮೊಹಾಲಿಯಲ್ಲಿ ಆತಿಥೇಯ ಕಿಂಗ್ಸ್ ಇಲೆವನ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು
Last Updated 29 ಮಾರ್ಚ್ 2019, 18:28 IST
ಅಕ್ಷರ ಗಾತ್ರ

ಮೊಹಾಲಿ: ಮೊದಲ ಎರಡು ಪಂದ್ಯಗಳಲ್ಲಿ ವಿವಾದ ಸೃಷ್ಟಿಸಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‌ ಟೂರ್ನಿಯ ಮೂರನೇ ಪಂದ್ಯದಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ ಎದುರು ಸೆಣಸಲಿದೆ.

ರವಿಚಂದ್ರನ್ ಅಶ್ವಿನ್ ನಾಯಕತ್ವದ ಕಿಂಗ್ಸ್ ಇಲೆವನ್ ತಂಡ ಮೊದಲ ಪಂದ್ಯ ದಲ್ಲಿ ರಾಜಸ್ಥಾನ್ ರಾಯಲ್ಸ್‌ ಎದುರು ಗೆದ್ದಿತ್ತು. ಆ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ‘ಮಂಕಡಿಂಗ್‌’ ಮೂಲಕ ಅಶ್ವಿನ್ ಔಟ್ ಮಾಡಿದ್ದು ವಿವಾದವಾಗಿತ್ತು.

ಮುಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕಿಂಗ್ಸ್ ಇಲೆ ವನ್‌ ಸೋತಿತ್ತು. ಈ ಪಂದ್ಯದಲ್ಲಿ ಎದುರಾಳಿ ತಂಡದ ಆ್ಯಂಡ್ರೆ ರಸೆಲ್‌ ಔಟಾಗಿದ್ದರೂ ಆ ಸಂದರ್ಭದಲ್ಲಿ 30 ಗಜ ವೃತ್ತದ ಒಳಗೆ ನಾಲ್ವರು ಫೀಲ್ಡರ್‌ಗಳನ್ನು ಇರಿಸದ ಕಾರಣ ಅಂಪೈರ್‌ಗಳು ನೋಬಾಲ್‌ ತೀರ್ಪು ನೀಡಿದ್ದರು. ಇದು ಕಿಂಗ್ಸ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಈ ಎಲ್ಲ ಕಹಿ ಪ್ರಸಂಗಗಳನ್ನು ಮರೆತು ಗೆಲುವಿನತ್ತ ಚಿತ್ತ ಹರಿಸಲು ಕಿಂಗ್ಸ್ ಪ್ರಯತ್ನಿಸಲಿದೆ. ಮುಂಬೈ ಇಂಡಿ ಯನ್ಸ್‌ ಮೊದಲ ಪಂದ್ಯದಲ್ಲಿ ಸೋತಿತ್ತು. ಗುರುವಾರ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತ್ತು. ಹೀಗಾಗಿ ತಂಡದ ವಿಶ್ವಾಸ ಹೆಚ್ಚಿದೆ. ಎರಡೂ ತಂಡಗಳು ಬಲಿಷ್ಠವಾಗಿರುವುರಿಂದ ಪಿಸಿಎ ಅಂಗಣದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಕ್ರಿಸ್ ಗೇಲ್‌, ಕೆ.ಎಲ್‌.ರಾಹುಲ್‌, ಮಯಂಕ್ ಅಗರವಾಲ್‌, ಡೇವಿಡ್ ಮಿಲ್ಲರ್‌, ಸರ್ಫರಾಜ್ ಖಾನ್ ಮೊದಲಾದವರು ಕಿಂಗ್ಸ್ ಇಲೆವನ್‌ನ ಬ್ಯಾಟಿಂಗ್ ಶಕ್ತಿಯಾಗಿದ್ದು ಬೌಲಿಂಗ್ ವಿಭಾಗದ ಚುಕ್ಕಾಣಿ ಸ್ವತಃ ನಾಯಕನ ಕೈಯಲ್ಲಿದೆ. ಕ್ರಿಸ್‌ ಗೇಲ್ ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಕೆ.ಎಲ್‌.ರಾಹುಲ್‌ ಇನ್ನೂ ಲಯ ಕಂಡುಕೊಳ್ಳಲಿಲ್ಲ.

ರೋಹಿತ್ –ಹಾರ್ದಿಕ್ ಮೇಲೆ ಕಣ್ಣು: ಮುಂಬೈ ಇಂಡಿಯನ್ಸ್‌ ತಂಡ ನಾಯಕ ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮೇಲೆ ಭರವಸೆ ಇರಿಸಿದೆ.

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಇವರಿಬ್ಬರ ಬಲದಿಂದ ತಂಡ ಸ್ಪರ್ಧಾ ತ್ಮಕ ಮೊತ್ತ ಕಲೆ ಹಾಕಿತ್ತು. ಜಸ್‌ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ ಅವರು ಪರಿಣಾಮಕಾರಿ ಬೌಲಿಂಗ್‌ ಮಾಡಿರುವುದರಿಂದ ಅವರಿಬ್ಬರ ಮೇಲೆ ತಂಡ ಸಂಪೂರ್ಣ ಭರವಸೆ ಇರಿಸಿದೆ. ಯುವರಾಜ್‌ ಸಿಂಗ್ ‘ತವರಿನ ಅಂಗಣ’ದಲ್ಲಿ ಮತ್ತೊಮ್ಮೆ ಮಿಂಚುವ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT