ಮಂಗಳವಾರ, ಮಾರ್ಚ್ 21, 2023
27 °C
ಕ್ರಿಕೆಟ್ ಕಣದಲ್ಲಿ ಹಣವೋ..ಹಣ

ಐಪಿಎಲ್ ಪ್ರಸಾರ ಹಕ್ಕುಗಳಿಗೆ ಜಾಕ್‌ಪಾಟ್; ಬಿಸಿಸಿಐ ಖಜಾನೆಗೆ ₹48,390 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯು ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ನೂತನ ದಾಖಲೆ ನಿರ್ಮಿಸಿತು. 

2023ರಿಂದ 2027ರವರೆಗಿನ ಪ್ರಸಾರ ಹಕ್ಕುಗಳು ಒಟ್ಟು ₹ 48,390 ಕೋಟಿಗೆ ಹರಾಜಾದವು. ಇದರಲ್ಲಿ ಟಿ.ವಿ. ಪ್ರಸಾರ ಹಕ್ಕುಗಳನ್ನು ಡಿಸ್ನಿ ಸ್ಟಾರ್‌ ₹ 23,575 ಕೋಟಿ ಮತ್ತು ರಿಲಯನ್ಸ್‌ ಬೆಂಬಲಿತ ವಯಾಕಾಮ್ 18 ಸಂಸ್ಥೆಗೆ ಡಿಜಿಟಲ್‌ ಹಕ್ಕುಗಳು ₹ 20,500 ಕೋಟಿಗೆ ಮಾರಾಟವಾದವು. ವಯಾಕಾಮ್ 18 ಕಂಪೆನಿಯೇ ₹ 2991 ಕೋಟಿ ನೀಡಿ ಸಿ ಪ್ಯಾಕೇಜ್ (ಋತುವೊಂದರಲ್ಲಿ ಆಯ್ದ 18 ಪಂದ್ಯಗಳಿಗೆ) ಅನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿತು. ಮಂಗಳವಾರ ನಡೆದ ಬಿಡ್‌ನಲ್ಲಿ  ಡಿ ಪ್ಯಾಕೇಜ್ (ವಿದೇಶದಲ್ಲಿ ಪ್ರಸಾರ ಹಕ್ಕು) ಅದನ್ನು ವಯಾಕಾಮ್ 18 ಮತ್ತು ಟೈಮ್ಸ್‌ ಇಂಟರ್‌ನೆಟ್‌ ಜಂಟಿಯಾಗಿ ₹1300 ಕೋಟಿ ಕೊಟ್ಟು ಪಡೆದುಕೊಂಡವು. 

‘ಸ್ಟಾರ್ ಇಂಡಿಯಾ ಐಪಿಎಲ್ ಟಿವಿ ಪ್ರಸಾರದ ಹಕ್ಕುಗಳನ್ನು ಮತ್ತು  ವಯಾಕಾಮ್ 18 ಸಂಸ್ಥೆಯು ಡಿಜಿಟಲ್ ಹಕ್ಕುಗಳನ್ನು ಗೆದ್ದುಕೊಂಡಿವೆಯೆಂದು ಪ್ರಕಟಿಸಲು ಅತೀವ ಸಂತಸವಾಗುತ್ತಿದೆ. ಡಿಜಿಟಲ್ ವೇದಿಕೆಗಳ ಮೂಲಕ ಕ್ರಿಕೆಟ್‌ ವೀಕ್ಸಿಸುವವರ ಸಂಖ್ಯೆ ಹೆಚ್ಚಳವಾಗಿದ್ದು ಬೇಡಿಕೆ ಕುದುರಲು ಕಾರಣವಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು
ಟ್ವೀಟ್ ಮಾಡಿದ್ದಾರೆ.

ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (ಎನ್‌ಎಫ್‌ಸಿ), ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಲೀಗ್ (ಎನ್‌ಬಿಎ) ಮತ್ತು ಇಂಗ್ಲೆಂಡ್‌ನ ಇಂಗ್ಲಿಷ್ ಪ್ರೀಮಿಯರ್ ಲೀಗ್  (ಇಪಿಎಲ್) ಲೀಗ್‌ಗಳ ಸಾಲಿನಲ್ಲಿ ಐಪಿಎಲ್ ಕೂಡ ಸೇರಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿಯೊಂದು ಪಂದ್ಯದ ಮೌಲ್ಯವು ₹114 ಕೋಟಿಯಾಗಲಿದೆ. ಇದು ಹೋದ ಬಾರಿಯದ್ದಕ್ಕಿಂತ ದುಪ್ಟಟ್ಟು ಮೌಲ್ಯವಾಗಿದೆ. ಎನ್‌ಎಫ್‌ಎಲ್‌ನಲ್ಲಿ ಪ್ರತಿ ಪಂದ್ಯದ ಮೌಲ್ಯವು ₹ 134 ಕೋಟಿಯಾಗಿದೆ. ಅದರಿಂದಾಗಿ ಐಪಿಎಲ್‌ ಎರಡನೇ ಅತಿ ದೊಡ್ಡ ಮೌಲ್ಯಯುತ ಲೀಗ್ ಆಗಿ ಹೊರಹೊಮ್ಮಿದೆ.

ಐಪಿಎಲ್‌: ಏಕಸ್ವಾಮ್ಯ ಅಂತ್ಯ

2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಸಂಪೂರ್ಣ ಪ್ರಸಾರ ಹಕ್ಕುಗಳು ಒಂದೇ ಸಂಸ್ಥೆಯ ಪಾಲಾಗಿದ್ದವು. ಆದರೆ ಈ ಬಾರಿ ನಾಲ್ಕು ಪ್ಯಾಕೇಜ್‌ಗಳಲ್ಲಿ ವಿಂಗಡಿಸಿದ್ದರಿಂದ ಪ್ರತ್ಯೇಕ ಸಂಸ್ಥೆಗಳು ಪೈಪೋಟಿಗಿಳಿದವು. ಹಕ್ಕುಗಳ ಕೂಡ ಪ್ರತ್ಯೇಕ ಕಂಪೆನಿಗಳ ಪಾಲಾಗಿವೆ. ಇದರಿಂದಾಗಿ ಹದಿನೈದು ವರ್ಷಗಳ ಮಾಧ್ಯಮ ಸಂಸ್ಥೆಗಳ ಏಕಸ್ವಾಮ್ಯವು
ಕೊನೆಗೊಂಡಿದೆ.

2008 ರಿಂದ 2017ರವರೆಗೆ 10 ವರ್ಷಗಳ ಅವಧಿಗೆ ಸೋನಿ ಸಂಸ್ಥೆಯು ₹ 8200 ಕೋಟಿಗೆ ಹಕ್ಕುಗಳನ್ನು ಪಡೆದಿತ್ತು. 2017ರಲ್ಲಿ ಸ್ಟಾರ್ ಸಮೂಹವು ₹16347.50 ಕೊಟಿಗೆ  ಐದು ವರ್ಷಗಳ ಹಕ್ಕುಗಳನ್ನು ಪಡೆದುಕೊಂಡಿತ್ತು. ಈ ಸಲ ಬಿಸಿಸಿಐಗೆ ಮೂರುಪಟ್ಟು ಹಣ ಕೈಸೇರಿದೆ. ವಯಾಕಾಮ್ 18 ಸಂಸ್ಥೆಯಲ್ಲಿ  ಸ್ಟಾರ್ ಸಮೂಹದ ಮಾಜಿ ಮುಖ್ಯಸ್ಥ ಉದಯ ಶಂಕರ್ (ಬೋಧಿ ಟ್ರೀ) ಮತ್ತು ಜೇಮ್ಸ್ ಮರ್ಡೊಕ್ (ಲುಪಾ ಸಿಸ್ಟಮ್ಸ್) ಅವರ ತಂತ್ರಗಾರಿಕೆಯು ಫಲ ನೀಡಿತು.

410 ಪಂದ್ಯಗಳ ಪ್ರಸಾರ ಹಕ್ಕು

ಎ ಮತ್ತು ಬಿ ಪ್ಯಾಕೇಜ್‌ಗಳಲ್ಲಿ 410 ಪಂದ್ಯಗಳಿಗೆ ಪ್ರಸಾರ ಹಕ್ಕು ಸಿಗಲಿದೆ. 2023 ಮತ್ತು 2024 ಆವೃತ್ತಿಗಳಲ್ಲಿ ತಲಾ 74 ಪಂದ್ಯಗಳು, 2025 ಮತ್ತು 2026ರಲ್ಲಿ ತಲಾ 84 ಪಂದ್ಯಗಳು ಮತ್ತು 2027ರಲ್ಲಿ 94 ಪಂದ್ಯಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು